ಹಿಂದೂಗಳನ್ನು ಕೊಲ್ಲಲು ಕುರಾನ್ ಮುಸ್ಲಿಮರಿಗೆ ಆದೇಶಿಸುತ್ತದೆ ಮತ್ತು ಆದ್ದರಿಂದ, ಮುಸ್ಲಿಮರು ಯಾವಾಗಲೂ ಹಿಂದೂಗಳಿಗೆ ಬೆದರಿಕೆ ಎಂದು ಹಲವರು ಭಾವಿಸುತ್ತಾರೆ. ಬನ್ನಿ ಇದರಲ್ಲಿ ಎಷ್ಟು ಸತ್ಯಾಂಶವಿದೆ ಎಂದು ಕಂಡುಹಿಡಿಯೋಣ.
ಕುರಾನ್‌ನಲ್ಲಿ “ಹಿಂದೂ” ಎಂಬ ಪದವು ಒಮ್ಮೆಯೂ ಬಂದಿಲ್ಲ. ಅವಿಶ್ವಾಸಿಗಳನ್ನು ಕೊಲ್ಲುವ ಬಗ್ಗೆ ಮಾತನಾಡುವ ಸೂಕ್ತಿಗಳನ್ನು ಜನರು ಉಲ್ಲೇಖಿಸುತ್ತಾರೆ.
ಪಠ್ಯ ಮತ್ತು ಸಂದರ್ಭ, ಸನ್ನಿವೇಶ
ಯಾವುದೇ ಪುಸ್ತಕ ಅಥವಾ ಗ್ರಂಥದ ಪಠ್ಯವನ್ನು ಅದರ ಸಂದರ್ಭ, ಸನ್ನಿವೇಶದೊಂದಿಗೆ ಅರ್ಥಮಾಡಿಕೊಳ್ಳಬೇಕು. ಸಂದರ್ಭ, ಸನ್ನಿವೇಶವಿಲ್ಲದ ಪಠ್ಯವನ್ನು ಸುಲಭವಾಗಿ ತಪ್ಪಾಗಿ ಅರ್ಥೈಸಿಕೊಳ್ಳಬಹುದು. ಯಾವುದೇ ಪುಸ್ತಕ ಅಥವಾ ಧರ್ಮಗ್ರಂಥಗಳು ಇದಕ್ಕೆ ಹೊರತಾಗಿಲ್ಲ. ಕೆಲವು ಉದಾಹರಣೆಗಳನ್ನು ನೋಡೋಣ.
ಭಗವದ್ಗೀತೆ
ಶ್ರೀ ಕೃಷ್ಣನು ಗೀತೆಯಲ್ಲಿ ಹೇಳುತ್ತಾನೆ:
ಅವಿನಾಶಿಯಾದ, ಅಳೆಯಲಾಗದ ಮತ್ತು ಶಾಶ್ವತವಾದ ಜೀವಿಯ ಭೌತಿಕ ದೇಹವು ಅಂತ್ಯಗೊಳ್ಳುವುದು ಖಚಿತ; ಆದುದರಿಂದ, ಹೋರಾಡು ಓ ಭರತನ ಸಂತತಿಯೇ.
ಭಗವದ್ಗೀತೆ 2:18
ಓ ಕುಂತಿಯ ಪುತ್ರನೇ, ಒಂದೋ ನೀನು ಯುದ್ಧಭೂಮಿಯಲ್ಲಿ ಕೊಲ್ಲಲ್ಪಟ್ಟು ಸ್ವರ್ಗಲೋಕವನ್ನು ಹೊಂದುವೆ, ಅಥವಾ ನೀನು ಐಹಿಕ ರಾಜ್ಯವನ್ನು ಗೆದ್ದು ಆನಂದಿಸುವೆ. ಆದ್ದರಿಂದ ಸಂಕಲ್ಪದೊಂದಿಗೆ ಎದ್ದು ಹೋರಾಡು.
ಭಗವದ್ಗೀತೆ 2:37
ಅಥರ್ವ ವೇದ
“ವೃಶ್ಚ ಪ್ರ ವೃಶ್ಚ ಸಂ ವೃಶ್ಚ ದಹ ಪ್ರದಾಹ ಸಂ ದಹ.” – ಅನುವಾದ:
ಓಹ್! ವೇದ ವನ್ನಿ, ವೇದಗಳನ್ನು ಟೀಕಿಸುವವರನ್ನು (ಅಂದರೆ, ವೇದಗಳ ವಿರುದ್ಧ ಇರುವವರು) ಕತ್ತರಿಸಿ, ಛಿದ್ರಗೊಳಿಸಿ, ಬೆಂಕಿ ಹಚ್ಚಿ ಸುಟ್ಟು ಬೂದಿ ಮಾಡು.
ಅಥರ್ವವೇದ ಮಂತ್ರ 12/5/62
ಮೇಲಿನ ಶ್ಲೋಕಗಳನ್ನು ಸಂದರ್ಭ, ಸನ್ನಿವೇಶದಿಂದ ಹೊರತುಪಡಿಸಿದರೆ ಏನಾಗುತ್ತದೆ?
ಮೇಲಿನ ಶ್ಲೋಕಗಳನ್ನು ಸಂದರ್ಭವಿಲ್ಲದೆ ಉಲ್ಲೇಖಿಸಿದರೆ, ಭಗವದ್ಗೀತೆ ಮತ್ತು ಅಥರ್ವವೇದವು ಹಿಂಸೆ ಮತ್ತು ಹೋರಾಟವನ್ನು ಉತ್ತೇಜಿಸುತ್ತದೆ ಎಂದು ಭಾವಿಸಲಾಗುತ್ತದೆ. ನಾವು ಶ್ಲೋಕಗಳನ್ನು ಸಂದರ್ಭದೊಂದಿಗೆ ಓದಿದಾಗ, ಅಲ್ಲಿ ಧರ್ಮ ಮತ್ತು ಅಧರ್ಮದ ನಡುವಿನ ಯುದ್ಧದ ಬಗ್ಗೆ ಮಾತನಾಡಲಾಗುತ್ತಿದೆ ಎಂದು ನಮಗೆ ಅರ್ಥವಾಗುತ್ತದೆ. ಆದ್ದರಿಂದ, ಸೂಕ್ತಿಗಳ ಸಂದರ್ಭ, ಸನ್ನಿವೇಶವು ಬಹಳ ಮುಖ್ಯವಾಗಿರುತ್ತದೆ.
ಕುರಾನ್‌ನಲ್ಲಿನ ಸೂಕ್ತಿಗಳ ಸಂದರ್ಭ
ನೀವು ಕುರಾನ್‌ನ ಸೂಕ್ತಿಗಳನ್ನು ಸಂದರ್ಭದೊಂದಿಗೆ ಓದಿದಾಗ, ಕುರಾನ್ ಎಂದಿಗೂ ದ್ವೇಷ ಅಥವಾ ಹಿಂಸೆಯನ್ನು ಉತ್ತೇಜಿಸುವುದಿಲ್ಲ ಎಂದು ನೀವು ಕಂಡುಕೊಳ್ಳುತ್ತೀರಿ. ಕುರಾನ್‌ನಿಂದ ಸಾಮಾನ್ಯವಾಗಿ ‘ತಪ್ಪಾಗಿ ಉಲ್ಲೇಖಿಸಲಾಗುವ’ ಸೂಕ್ತಿಗಳನ್ನು ನೋಡೋಣ.
1. “ನೀವು ಅವರನ್ನು ಎಲ್ಲೆಲ್ಲಿ ಎದುರಿಸುತ್ತೀರೋ ಅಲ್ಲಿ ಅವರನ್ನು ಕೊಲ್ಲಿ”
ಇದು ಕುರಾನ್‌ನ ಅಧ್ಯಾಯ 2, 191 ನೇ ಸೂಕ್ತಿ. ನೀವು ಇದನ್ನು ನೋಡಿದರೆ, ಇದು ಸಂಪೂರ್ಣ ಸೂಕ್ತಿಯ ಒಂದು ಸಣ್ಣ ಭಾಗವಾಗಿದೆ. ಸಂದರ್ಭವನ್ನು ಅರ್ಥಮಾಡಿಕೊಳ್ಳಲು ಸಂಪೂರ್ಣ ಸೂಕ್ತಿ ಮತ್ತು ಅದರ ಹಿಂದಿನ ಮತ್ತು ಮುಂದಿನ ಸೂಕ್ತಿಗಳನ್ನು ಸಹ ಓದೋಣ.
ನಿಮ್ಮೊಂದಿಗೆ ಯುದ್ಧ ಮಾಡುವವರೊಂದಿಗೆ ದೇವರ ಮಾರ್ಗದಲ್ಲಿ ನೀವೂ ಯುದ್ಧ ಮಾಡಿ, ಆದರೆ ಮಿತಿಗಳನ್ನು ಮೀರಬೇಡಿ. ಮಿತಿಗಳನ್ನು ಮೀರುವವರನ್ನು ದೇವರು ಮೆಚ್ಚುವುದಿಲ್ಲ
ಕುರಾನ್ ಅಧ್ಯಾಯ 2: ಸೂಕ್ತಿ 190
ನೀವು ಅವರನ್ನು ಎದುರಿಸುವಲ್ಲೆಲ್ಲಾ ಅವರನ್ನು ಕೊಂದುಹಾಕಿ ಮತ್ತು ಅವರು ನಿಮ್ಮನ್ನು ಓಡಿಸಿದ ಸ್ಥಳದಿಂದ ಅವರನ್ನು ಓಡಿಸಿ, ಏಕೆಂದರೆ ಕಿರುಕುಳವು ಕೊಲ್ಲುವುದಕ್ಕಿಂತ ಹೆಚ್ಚು ಗಂಭೀರವಾಗಿದೆ. ಅವರು ನಿಮ್ಮೊಂದಿಗೆ ಹೋರಾಡದ ಹೊರತು ಪವಿತ್ರ ಮಸೀದಿಯಲ್ಲಿ ಅವರೊಂದಿಗೆ ಹೋರಾಡಬೇಡಿ. ಅವರು ನಿಮ್ಮೊಂದಿಗೆ ಹೋರಾಡಿದರೆ, ಅವರನ್ನು ಕೊಂದುಹಾಕಿ – ಅಂತಹ ಅವಿಶ್ವಾಸಿಗಳಿಗೆ ಇದು ಅರ್ಹವಾಗಿದೆ.
ಕುರಾನ್ ಅಧ್ಯಾಯ 2: ಸೂಕ್ತಿ 191
ಆದರೆ ಅವರು ನಿಲ್ಲಿಸಿದರೆ, ದೇವರು ಅತ್ಯಂತ ಕ್ಷಮಾಮಯಿ ಮತ್ತು ಕರುಣಾಮಯಿ
ಕುರಾನ್ ಅಧ್ಯಾಯ 2: ಸೂಕ್ತಿ 192
ಅವರೊಂದಿಗೆ ಹೋರಾಡಿ – ಕಿರುಕುಳ ಇಲ್ಲದಾಗುವ ತನಕ, ಮತ್ತು ಆರಾಧನೆ ದೇವರಿಗೆ ಅರ್ಪಿತವಾಗುವ ತನಕ. ಅವರು ಹಗೆತನವನ್ನು ನಿಲ್ಲಿಸಿದರೆ, ಆಕ್ರಮಣಕಾರರೆಡೆಗೆ ಹೊರತುಪಡಿಸಿ [ಮುಂದೆ] ಯಾವುದೇ ಹಗೆತನ ಇರಲಾರದು.
ಕುರಾನ್ ಅಧ್ಯಾಯ 2: ಸೂಕ್ತಿ 193
ಸೂಕ್ತಿಗಳ ಸರಳ ಓದುವಿಕೆ ಮುಸ್ಲಿಮರೊಂದಿಗೆ ಹೋರಾಡುವವರ ವಿರುದ್ಧ ಮತ್ತು ಮುಸ್ಲಿಮರನ್ನು ಹಿಂಸಿಸುವವರ ವಿರುದ್ಧ ಮಾತ್ರ ಹೋರಾಟವನ್ನು ಸೂಚಿಸಲಾಗಿದೆ ಎಂದು ಸ್ಪಷ್ಟವಾಗಿ ತೋರಿಸುತ್ತದೆ.
2. “[ನಾಲ್ಕು] ನಿಷೇಧಿತ ತಿಂಗಳುಗಳು ಮುಗಿದ ನಂತರ, ನೀವು ಎಲ್ಲೆಲ್ಲಿ ವಿಗ್ರಹಾರಾಧಕರನ್ನು ಎದುರಿಸುತ್ತೀರಿ, ಅವರನ್ನು ಕೊಲ್ಲಿ, ಅವರನ್ನು ವಶಪಡಿಸಿಕೊಳ್ಳಿ, ಮುತ್ತಿಗೆ ಹಾಕಿ, ಪ್ರತಿ ಹೊಂಚುಹಾಕಬಹುದಾದ ಸ್ಥಳದಲ್ಲಿ ಅವರಿಗಾಗಿ ಕಾಯಿರಿ.”
ಇದು ಕುರಾನ್‌ನ 9ನೇ ಅಧ್ಯಾಯದ 5ನೇ ಸೂಕ್ತಿ. ಸಂಪೂರ್ಣ ಸೂಕ್ತಿಯನ್ನು ಓದೋಣ ಮತ್ತು ಅದರ ನಂತರದ ಸೂಕ್ತಿಯನ್ನೂ ಸಹ ಓದೋಣ.
[ನಾಲ್ಕು] ನಿಷೇಧಿತ ತಿಂಗಳುಗಳು ಮುಗಿದ ನಂತರ, ನೀವು ವಿಗ್ರಹಾರಾಧಕರು ಎದುರಾದಲ್ಲೆಲ್ಲಾ ಅವರನ್ನು ಕೊಂದುಹಾಕಿ, ಅವರನ್ನು ವಶಪಡಿಸಿಕೊಳ್ಳಿ, ಮುತ್ತಿಗೆ ಹಾಕಿ, ಪ್ರತಿ ಹೊಂಚುಹಾಕಬಹುದಾದ ಸ್ಥಳದಲ್ಲಿ ಅವರಿಗಾಗಿ ಕಾಯಿರಿ, ಆದರೆ ಅವರು [ದೇವರ ಕಡೆಗೆ] ತಿರುಗಿದರೆ, ಪ್ರಾರ್ಥನೆಯನ್ನು ನಿರ್ವಹಿಸಿ ಮತ್ತು ನಿಗದಿತ ದಾನ ಪಾವತಿಸಿದಲ್ಲಿ, ಅವರನ್ನು ತಮ್ಮ ಪಾಡಿಗೆ ಬಿಡಿ, ಏಕೆಂದರೆ ದೇವರು ಅತ್ಯಂತ ಕ್ಷಮಾಮಯಿ ಮತ್ತು ಕರುಣಾಮಯಿ.
ಕುರಾನ್ ಅಧ್ಯಾಯ 9 ಸೂಕ್ತಿ 5
ವಿಗ್ರಹಾರಾಧಕರಲ್ಲಿ ಯಾರಾದರೂ ನಿಮ್ಮ ರಕ್ಷಣೆಯನ್ನು ಕೋರಿದರೆ, ಅವರಿಗೆ ರಕ್ಷಣೆ ಕೊಡಿ – ಅವರು ದೇವರ ನುಡಿಯನ್ನು ಕೇಳಲೆಂದು, ನಂತರ ಅವರನ್ನು ಸುರಕ್ಷಿತ ಸ್ಥಳಕ್ಕೆ ಕರೆದುಕೊಂಡು ಹೋಗಿ, ಏಕೆಂದರೆ ಅವರು [ಅದರ] ಜ್ಞಾನವಿಲ್ಲದ ಜನರು.
ಕುರಾನ್ ಅಧ್ಯಾಯ 9 ಸೂಕ್ತಿ 6
ಎರಡೂ (5 ಮತ್ತು 6ನೇ) ಸೂಕ್ತಿಗಳನ್ನು ಒಟ್ಟಿಗೆ ಓದುವುದರಿಂದ, ವಿಗ್ರಹಾರಾಧಕರು ಶಾಂತಿಯನ್ನು ಬಯಸಿದರೆ, ಮುಸ್ಲಿಮರಿಗೆ ರಕ್ಷಣೆ ನೀಡಲು ಮತ್ತು ಅವರನ್ನು ಸುರಕ್ಷಿತ ಸ್ಥಳಕ್ಕೆ ಕರೆದೊಯ್ಯಲು ಆದೇಶಿಸಲಾಗಿದೆ ಎಂಬುದು ಸ್ಪಷ್ಟವಾಗುತ್ತದೆ.
ಕುರಾನ್ ಶಾಂತಿಯನ್ನು ಪ್ರೋತ್ಸಾಹಿಸುತ್ತದೆ
ಶತ್ರುಗಳು ಶಾಂತಿಯನ್ನು ಬಯಸಿದಲ್ಲಿ ಶಾಂತಿಯನ್ನು ಆರಿಸಿಕೊಳ್ಳುವಂತೆ ಕುರಾನ್ ಮುಸ್ಲಿಮರಿಗೆ ನಿರ್ದಿಷ್ಟವಾಗಿ ಆದೇಶಿಸುತ್ತದೆ. ದೇವರು ಕುರಾನ್‌ನಲ್ಲಿ ಹೇಳುತ್ತಾನೆ:
ಶತ್ರು ಶಾಂತಿಯ ಕಡೆಗೆ ಒಲವು ತೋರಿದರೆ, ಅವರೊಂದಿಗೆ ಸಮಾಧಾನ ಮಾಡಿಕೊಳ್ಳಿ. ಮತ್ತು ನಿಮ್ಮ ವಿಶ್ವಾಸವನ್ನು ದೇವರಲ್ಲಿ ಇರಿಸಿ. ವಾಸ್ತವವಾಗಿ, (ದೇವರು) ಅವನೊಬ್ಬನೇ ಎಲ್ಲವನ್ನು ಕೇಳುವವನು, ಎಲ್ಲವನ್ನೂ ತಿಳಿದಿರುವವನು.
ಕುರಾನ್ ಅಧ್ಯಾಯ 8: ಸೂಕ್ತಿ 61
ಮುಸ್ಲಿಮರು ಮುಸ್ಲಿಮೇತರರೊಂದಿಗೆ ಹೇಗೆ ನಡೆದುಕೊಳ್ಳಬೇಕು?
ದೇವರು ಕುರಾನ್‌ನಲ್ಲಿ ಹೇಳುತ್ತಾನೆ:
ನಿಮ್ಮೊಂದಿಗೆ ಹೋರಾಡದ ಅಥವಾ ನಿಮ್ಮನ್ನು ನಿಮ್ಮ ಮನೆಗಳಿಂದ ಹೊರಹಾಕದವರೊಂದಿಗೆ ದಯೆಯಿಂದ ಮತ್ತು ನ್ಯಾಯಯುತವಾಗಿ ವ್ಯವಹರಿಸುವುದನ್ನು ದೇವರು ನಿಷೇಧಿಸುವುದಿಲ್ಲ. ನಿಶ್ಚಯವಾಗಿಯೂ ದೇವರು ನೀತಿವಂತರನ್ನು ಮೆಚ್ಚುತ್ತಾನೆ.
ಕುರಾನ್ ಅಧ್ಯಾಯ 60: ಸೂಕ್ತಿ 8
ಈ ಸೂಕ್ತಿಯಲ್ಲಿ “ದಯೆಯಿಂದ” ಎಂಬುದಕ್ಕೆ ಉಪಯೋಗಿಸಿರುವ ಅರಬಿ ಪದ “ತಬರ್ರು” ಎಂದಾಗಿದೆ. “ತಬರ್ರು” ಪದದ ಮೂಲ ಪದ “ಬಿರ್ರ್” ಆಗಿದೆ. “ಬಿರ್ರ್” ಎಂಬ ಪದವನ್ನು ದಯೆ ಮತ್ತು ಸದಾಚಾರದ ಅತ್ಯುನ್ನತ ರೂಪಕ್ಕಾಗಿ ಬಳಸಲಾಗುತ್ತದೆ. ಉದಾಹರಣೆಗೆ: ಬಿರ್ರ್ ಎಂಬ ಪದವು “ಪೋಷಕರಿಗೆ ದಯೆ ಮತ್ತು ಸದಾಚಾರ” (ಬಿರ್ರುಲ್ ವಾಲಿದೈನ್) ದೊಂದಿಗೆ ಸಂಬಂಧಿಸಿದೆ. ಪ್ರವಾದಿ ಮುಹಮ್ಮದ್ ಅವರೇ ತಂದೆ ತಾಯಿಯರ ಕಡೆಗೆ ಸದಾಚಾರದ ಬಗ್ಗೆ ಮಾತನಾಡುವಾಗ “ಬಿರ್ರುಲ್ ವಾಲಿದೈನ್” ಎಂಬುದನ್ನು ಬಳಸಿದರು.
ಎಲ್ಲಾ ಮುಸ್ಲಿಮರು ತಮ್ಮ ಮುಸ್ಲಿಮೇತರ ಸಹೋದರ ಸಹೋದರಿಯರನ್ನು ತಮ್ಮ ಸ್ವಂತ ಪೋಷಕರಿಗೆ ತೋರಿಸುವ ಅದೇ ಮಟ್ಟದ ದಯೆ ಮತ್ತು ಸದಾಚಾರದಿಂದ ನಡೆಸಿಕೊಳ್ಳುವಂತೆ ಸೂಚಿಸಲು, ದೇವರು “ತಬರ್ರು” ಎಂಬ ಪದವನ್ನು ಆರಿಸಿಕೊಂಡನು.
ಪ್ರಿಯ ಓದುಗರೇ, ಹೀಗಿರುವಾಗ ಕುರಾನ್ ಮುಸ್ಲಿಮರನ್ನು ಹಿಂದೂಗಳನ್ನು ದ್ವೇಷಿಸಲು ಮತ್ತು ಕೊಲ್ಲಲು ಹೇಳುತ್ತದೆ ಎಂದು ನೀವು ಎಂದಾದರೂ ಹೇಳಬಹುದೇ?
ಪ್ರವಾದಿ ಮುಹಮ್ಮದ್ ಹೇಳಿದರು:
ನೀವು ಒಬ್ಬರಿಗೊಬ್ಬರು ಕರುಣೆ ತೋರಿಸುವವರೆಗೆ ನೀವು ಎಂದಿಗೂ (ನಿಜವಾದ) ವಿಶ್ವಾಸಿಗಳಾಗಲು ಸಾಧ್ಯವಿಲ್ಲ.” ಪ್ರವಾದಿಯವರ ಸಹಚರರು ಹೇಳಿದರು, “ನಾವೆಲ್ಲರೂ ಕರುಣೆ ತೋರಿಸುತ್ತೇವೆ”. ಪ್ರವಾದಿಯವರು ಉತ್ತರಿಸಿದರು, “ನಿಮ್ಮಲ್ಲಿ ಯಾರೊಬ್ಬರೂ ತನ್ನ ಸ್ನೇಹಿತನಿಗೆ ತೋರುವ ಸಹಾನುಭೂತಿ ಅಲ್ಲ. ಇದು ಎಲ್ಲಾ ಜನರಿಗೆ ನೀವು ತೋರಿಸುವ ಸಹಾನುಭೂತಿ ಮತ್ತು ಕರುಣೆಯಾಗಿದೆ.
ಮೂಲ: ಅತ್-ತಿರ್ಮಿದಿ ಅವರಿಂದ ಪ್ರವಾದಿಯವರ ಮಾತುಗಳ ಸಂಗ್ರಹ
ಒಬ್ಬ ಮುಸ್ಲಿಮನು ಮುಸ್ಲಿಮೇತರರಿಗೆ ಕರುಣಾಮಯಿ, ದಯೆ ಮತ್ತು ನ್ಯಾಯಯುತವಾಗಿ ವರ್ತಿಸುವಂತೆ ಆದೇಶಿಸಲಾಗಿದೆ ಎಂದು ಯಾರಾದರೂ ಅರ್ಥಮಾಡಿಕೊಳ್ಳಲು ಕುರಾನ್ ಮತ್ತು ಪ್ರವಾದಿಯ ಮಾತುಗಳು ಸಾಕಾಗಬೇಕು.
ಸ್ವತಃ ನೀವೇ ಏಕೆ ಪರೀಕ್ಷಿಸಿ ನೋಡಬಾರದು?
ಆತ್ಮೀಯ ಓದುಗರೇ, ಕುರಾನ್ ಅನುವಾದದ ಪ್ರತಿಗಳು ಆನ್‌ಲೈನ್ ಮತ್ತು ಆಫ್‌ಲೈನ್‌ನಲ್ಲಿ (ಪುಸ್ತಕದ ರೂಪದಲ್ಲಿ) ಸುಲಭವಾಗಿ ಲಭ್ಯವಿದೆ. ನೀವು ಕುರಾನ್ ಬಗ್ಗೆ ಕೆಟ್ಟದ್ದನ್ನು ಕೇಳಿದಾಗ, “ತಪ್ಪಾಗಿ ಉಲ್ಲೇಖಿಸಿದ” ಸೂಕ್ತಿಯನ್ನು ಕುರಾನಿನಲ್ಲಿ ನೋಡಿ ಮತ್ತು ಸಂದರ್ಭವನ್ನು ಅರ್ಥಮಾಡಿಕೊಳ್ಳಲು “ತಪ್ಪಾಗಿ ಉಲ್ಲೇಖಿಸಿದ” ಸೂಕ್ತಿಯ ಮೊದಲು ಮತ್ತು ನಂತರದ ಸೂಕ್ತಿಗಳನ್ನು ಓದಿ. ನೀವಾಗಿಯೇ ಪರಿಶೀಲಿಸಿ ನೋಡಿ!