More

    Choose Your Language

    ಮುಸ್ಲಿಂ ರಾಷ್ಟ್ರಗಳಲ್ಲಿ ಹಿಂದೂಗಳ ಹಕ್ಕುಗಳು

    ಮಲೇಷ್ಯಾ ಮತ್ತು ಇಂಡೋನೇಷ್ಯಾದಲ್ಲಿ ಮುಸ್ಲಿಮರು ಮತ್ತು ಹಿಂದೂಗಳು ಶಾಂತಿ ಮತ್ತು ಸೌಹಾರ್ದತೆಯಿಂದ ಬದುಕುತ್ತಿದ್ದಾರೆ. ಪ್ರಪಂಚದ ಕೆಲವು ಸುಂದರವಾದ ದೇವಾಲಯಗಳು ಮಲೇಷ್ಯಾ ಮತ್ತು ಇಂಡೋನೇಷ್ಯಾದಲ್ಲಿ ಕಂಡುಬರುತ್ತವೆ. ಮುಸ್ಲಿಂ ರಾಷ್ಟ್ರಗಳು ತಮ್ಮ ಮುಸ್ಲಿಮೇತರ ನಾಗರಿಕರಿಗೆ ಹಕ್ಕುಗಳು ಮತ್ತು ಸ್ವಾತಂತ್ರ್ಯ ನೀಡಿವೆ ಎಂದು ಇದು ಸ್ಪಷ್ಟವಾಗಿ ತೋರಿಸುತ್ತದೆ.

    ಮುಸ್ಲಿಂ ರಾಷ್ಟ್ರಗಳು ತಮ್ಮ ಹಿಂದೂ ಪ್ರಜೆಗಳಿಗೆ ಎಂದೂ ಹಕ್ಕುಗಳನ್ನು ನೀಡುವುದಿಲ್ಲ ಎಂಬ ತಪ್ಪು ಕಲ್ಪನೆ ಹಲವು ಜನರಲ್ಲಿದೆ. ಮುಸ್ಲಿಂ ರಾಷ್ಟ್ರಗಳು ತಮ್ಮ ಹಿಂದೂ ಪ್ರಜೆಗಳಿಗೆ ಯಾವುದೇ ಹಕ್ಕುಗಳನ್ನು ನೀಡದ ಕಾರಣ ಭಾರತದಲ್ಲಿ ಮುಸ್ಲಿಂ ನಾಗರಿಕರು ಯಾವುದೇ ಹಕ್ಕುಗಳನ್ನು ಕೇಳಬಾರದು ಎಂದು ಕೆಲವರು ಹೇಳುವ ಮಟ್ಟಕ್ಕೆ ಹೋಗುತ್ತಾರೆ.

    ಹಾಗಾದರೆ ಸತ್ಯ ಏನು? ಬನ್ನಿ ಸ್ವಲ್ಪ ನೋಡೋಣ.

    ಇಂಡೋನೇಷ್ಯಾ ಮತ್ತು ಮಲೇಷ್ಯಾ – ಈ ತಪ್ಪು ಕಲ್ಪನೆಯನ್ನು ನಿವಾರಿಸಲು ಸಾಕು

    ವಿಶ್ವದಲ್ಲಿ ಇಂಡೋನೇಷ್ಯಾ ಅತಿ ಹೆಚ್ಚು ಮುಸ್ಲಿಂ ಜನಸಂಖ್ಯೆ ಹೊಂದಿರುವ ದೇಶ ಎಂದು ನಿಮಗೆ ತಿಳಿದಿದೆಯೇ? ಮುಸ್ಲಿಂ ರಾಷ್ಟ್ರವಾಗಿರುವ ಇಂಡೋನೇಷ್ಯಾದಲ್ಲಿ ಸಾಕಷ್ಟು ಸಂಖ್ಯೆಯ ಹಿಂದೂ ಪ್ರಜೆಗಳಿದ್ದಾರೆ ಎಂದು ನಿಮಗೆ ತಿಳಿದಿದೆಯೇ? ಹೌದು, ಇಂಡೋನೇಷ್ಯಾದ ಜನಸಂಖ್ಯೆಯಲ್ಲಿ 87.2% ಮುಸ್ಲಿಮರು ಮತ್ತು 1.7% ಹಿಂದೂಗಳು. ಉಳಿದ 10.1% ಬೌದ್ಧ ಧರ್ಮ ಮತ್ತು ಕ್ರೈಸ್ತ ಧರ್ಮದಂತಹ ಇತರ ನಂಬಿಕೆಗಳಿಗೆ ಸೇರಿದವರು. ಮಲೇಷ್ಯಾ 61.3% ಮುಸ್ಲಿಮರು ಮತ್ತು 6.3% ಹಿಂದೂಗಳನ್ನು ಹೊಂದಿರುವ ಮುಸ್ಲಿಂ ರಾಷ್ಟ್ರವಾಗಿದೆ.

    ಮಲೇಷ್ಯಾ ಮತ್ತು ಇಂಡೋನೇಷ್ಯಾದಲ್ಲಿ ಮುಸ್ಲಿಮರು ಮತ್ತು ಹಿಂದೂಗಳು ಶಾಂತಿ ಮತ್ತು ಸೌಹಾರ್ದತೆಯಿಂದ ಬದುಕುತ್ತಿದ್ದಾರೆ ಎಂದು ನಿಮಗೆ ತಿಳಿದಿದೆಯೇ? ಪ್ರಪಂಚದ ಕೆಲವು ಸುಂದರವಾದ ದೇವಾಲಯಗಳು ಮಲೇಷ್ಯಾ ಮತ್ತು ಇಂಡೋನೇಷ್ಯಾದಲ್ಲಿ ಕಂಡುಬರುತ್ತವೆ. ಮಲೇಷ್ಯಾದಲ್ಲಿ ಹಲವಾರು ಕಿಲೋಮೀಟರ್ ಉದ್ದದ “ತೈಪುಸಂ” ಉತ್ಸವದ ಮೆರವಣಿಗೆ ವಿಶ್ವಪ್ರಸಿದ್ಧವಾಗಿದೆ. ಮಲೇಷ್ಯಾದಲ್ಲಿ “ತೈಪುಸಂ” ಸಹ ಸಾರ್ವಜನಿಕ ರಜಾದಿನವಾಗಿದೆ. ಮುಸ್ಲಿಂ ರಾಷ್ಟ್ರಗಳು, ತಮ್ಮ ಮುಸ್ಲಿಮೇತರ ನಾಗರಿಕರಿಗೆ ಹಕ್ಕುಗಳು ಮತ್ತು ಸ್ವಾತಂತ್ರ್ಯ ನೀಡುತ್ತಿವೆ ಎಂಬುದನ್ನು ಇದು ಸ್ಪಷ್ಟವಾಗಿ ತೋರಿಸುತ್ತದೆ.

    ಮಲೇಷ್ಯಾದಲ್ಲಿ ತೈಪುಸಂ ಮೆರವಣಿಗೆ

    ಮಲೇಷ್ಯಾ ಅಥವಾ ಇಂಡೋನೇಷ್ಯಾದಲ್ಲಿ ಮುಸ್ಲಿಮರು ಮತ್ತು ಹಿಂದೂಗಳ ನಡುವೆ ಕೋಮು ಗಲಭೆಗಳ ಬಗ್ಗೆ ನೀವು ಎಂದಾದರೂ ಕೇಳಿದ್ದೀರಾ? ಈ ಮುಸ್ಲಿಂ ರಾಷ್ಟ್ರಗಳಲ್ಲಿ ಹಿಂದೂಗಳು ಸ್ವಾತಂತ್ರ್ಯವನ್ನು ಅನುಭವಿಸುತ್ತಿದ್ದಾರೆ ಮತ್ತು ಮುಸ್ಲಿಮರೊಂದಿಗೆ ಸಾಮರಸ್ಯದಿಂದ ಬದುಕುತ್ತಿದ್ದಾರೆ ಎಂಬುದಕ್ಕೆ ಇದು ಪುರಾವೆ ಅಲ್ಲವೇ?

    ಯುಎಇ (UAE) ಯಂತಹ ಗಲ್ಫ್ ರಾಷ್ಟ್ರಗಳಲ್ಲಿ ವಾಸಿಸುವ ಹಿಂದೂಗಳಿಗೂ ಯಾವುದೇ ನಿರ್ಬಂಧಗಳಿಲ್ಲ. ದುಬೈನಲ್ಲಿ ದೇವಸ್ಥಾನವಿದ್ದು, ಅಬುಧಾಬಿಯಲ್ಲಿ ಹಿಂದೂ ದೇವಾಲಯದ ಯೋಜನೆಯನ್ನು ಭಾರತದ ಪ್ರಧಾನಿ ಉದ್ಘಾಟಿಸಿದರು.

    ಇನ್ನು ಸೌದಿಯಲ್ಲಿ ಮುಸ್ಲಿಮೇತರರ ಹಕ್ಕುಗಳ ಸ್ಥಿತಿ ಏನು?

    ಮೊದಲನೆಯದಾಗಿ, ಸೌದಿ ಅರೇಬಿಯಾ ಇಸ್ಲಾಂ ಧರ್ಮದ ಅಧಿಕೃತ ಪ್ರತಿನಿಧಿಯೇನಲ್ಲ ಮತ್ತು ಸೌದಿಯನ್ನು ಅನುಕರಿಸಲು ಮತ್ತು ಅನುಸರಿಸಲು ಮುಸ್ಲಿಮರ ಧರ್ಮ ಗ್ರಂಥವಾದ ಕುರಾನ್ ಎಲ್ಲಿಯೂ ಮುಸ್ಲಿಮರಿಗೆ ಸೂಚಿಸುವುದಿಲ್ಲ. ಹಿಂದೂ ದೇಶವಾದ ನೇಪಾಳದ ಕಾನೂನುಗಳು ಹೇಗೆ ಹಿಂದೂ ಧರ್ಮದ ಕಾನೂನುಗಳನ್ನು ಪ್ರತಿನಿಧಿಸುವುದಿಲ್ಲವೋ, ಸೌದಿಯ ಕಾನೂನುಗಳು ಇಸ್ಲಾಂ ಅನ್ನು ಪ್ರತಿನಿಧಿಸುವುದಿಲ್ಲ.

    ಸೌದಿ 100% ಮುಸ್ಲಿಂ ನಾಗರಿಕರನ್ನು ಹೊಂದಿದೆ. ಪ್ರತಿ ದೇಶದಲ್ಲಿ, ನಾಗರಿಕರು ಮತ್ತು ನಾಗರಿಕರಲ್ಲದವರನ್ನು ವಿಭಿನ್ನವಾಗಿ ಪರಿಗಣಿಸಲಾಗುತ್ತದೆ. ದೇಶದ ನಾಗರಿಕರು ನಾಗರಿಕರಲ್ಲದವರಿಗಿಂತ ಹೆಚ್ಚಿನ ಸ್ವಾತಂತ್ರ್ಯವನ್ನು ಅನುಭವಿಸುತ್ತಾರೆ. ಉದಾಹರಣೆಗೆ: ಭಾರತದಲ್ಲಿ, ಒಬ್ಬ ವಿದೇಶಿಗನು ತನ್ನ ಹೆಸರಿನಲ್ಲಿ ಭೂಮಿಯನ್ನು ಖರೀದಿಸಬಹುದೇ? ಉತ್ತರ ಇಲ್ಲ. ಈಗ, ಈ ಕಾನೂನನ್ನು ಸ್ವಾತಂತ್ರ್ಯದ ದಬ್ಬಾಳಿಕೆ ಎಂದು ಹೇಳುವುದು ಸರಿಯೇ?

    ಸೌದಿಯು 100% ಮುಸ್ಲಿಂ ನಾಗರಿಕರನ್ನು ಹೊಂದಿರುವುದರಿಂದ, ನಾಗರಿಕರಲ್ಲದವರಿಗೆ ಅದರ ನೀತಿಗಳು ವಿಭಿನ್ನವಾಗಿವೆ. ಸೌದಿಯ ನಾಗರಿಕರಲ್ಲದ ಮುಸ್ಲಿಮರು ಸಹ ಸ್ವಂತವಾಗಿ ಮಸೀದಿಗಳನ್ನು ನಿರ್ಮಿಸಲು ಅಥವಾ ಅವರ ಹೆಸರಿನಲ್ಲಿ ಭೂಮಿಯನ್ನು ಖರೀದಿಸಲು ಸಾಧ್ಯವಿಲ್ಲ. ಇದು ಅವರ ದೇಶದ ಕಾನೂನು ಹಾಗೂ ಅದಕ್ಕೂ ಧರ್ಮಕ್ಕೂ ಯಾವುದೇ ಸಂಬಂಧವಿಲ್ಲ. ಹಾಗಾಗಿ, ಕೇವಲ ಮುಸ್ಲಿಮರನ್ನು ನಾಗರಿಕರನ್ನಾಗಿ ಹೊಂದಿರುವ ಸೌದಿಯಂತಹ ದೇಶವನ್ನು ಈ ವಿಶ್ಲೇಷಣಕ್ಕೆ ಪರಿಗಣಿಸುವುದು ಸರಿಯಲ್ಲ.

    ಮುಸ್ಲಿಂ ರಾಷ್ಟ್ರಗಳಲ್ಲಿ ಮುಸ್ಲಿಮೇತರ ನಾಗರಿಕರನ್ನು ನಡೆಸಿಕೊಳ್ಳುವ ಕುರಿತು ಇಸ್ಲಾಂ

    ಇಸ್ಲಾಂ ಒಂದು ಧರ್ಮದ ರೂಪದಲ್ಲಿ, ರಾಜ್ಯದಲ್ಲಿನ ಮುಸ್ಲಿಮೇತರ ನಾಗರಿಕರಿಗೆ ಸಾಕಷ್ಟು ಹಕ್ಕುಗಳು ಮತ್ತು ಸ್ವಾತಂತ್ರ್ಯವನ್ನು ನೀಡುತ್ತದೆ. ಪ್ರವಾದಿ ಮುಹಮ್ಮದ್ ಆಳ್ವಿಕೆಯಲ್ಲಿ, ಅಲ್ಲಿದ್ದ ಮುಸ್ಲಿಮೇತರರಾದ ಯಹೂದಿಗಳಿಗೆ ತುಂಬಾ ಸ್ವಾತಂತ್ರ್ಯವಿತ್ತು, ಪ್ರವಾದಿ ಮುಹಮ್ಮದ್ ಸ್ವತಃ ತನ್ನ ರಾಜ್ಯದ ಯಹೂದಿ ಪ್ರಜೆಯಿಂದ ಬಾರ್ಲಿ ಧಾನ್ಯಗಳನ್ನು ಎರವಲು ಪಡೆದಿದ್ದರು.

    ದೇವರ ಸಂದೇಶವಾಹಕರು ಯಹೂದಿಯೊಬ್ಬನಿಂದ ಕೆಲವು ಆಹಾರ ಪದಾರ್ಥಗಳನ್ನು (ಬಾರ್ಲಿ) ಸಾಲದ ಮೇಲೆ ಖರೀದಿಸಿದರು ಮತ್ತು ಅವರ ಕಬ್ಬಿಣದ ರಕ್ಷಾಕವಚವನ್ನು ಅವನಿಗೆ ಅಡವಾಗಿಟ್ಟರು.

    ಮೂಲ: ಸಹಿಹ್ ಬುಖಾರಿ, ಪುಸ್ತಕ 35, ಹದೀಸ್ 453

    ಈ ಘಟನೆಯು ಇಸ್ಲಾಮಿ ಆಡಳಿತದಲ್ಲಿ ಮುಸ್ಲಿಮೇತರ ಪ್ರಜೆಗಳು ಅನುಭವಿಸುವ ಸ್ವಾತಂತ್ರ್ಯದ ಬಗ್ಗೆ ಹೇಳುತ್ತದೆ. ದೇವರು ಕುರಾನ್‌ನಲ್ಲಿ ಹೇಳುತ್ತಾನೆ:

    ದೇವರು ಕೆಲವರನ್ನು ಇತರರ ಮೂಲಕ ಹಿಮ್ಮೆಟ್ಟಿಸದಿದ್ದರೆ, ದೇವರ ಹೆಸರನ್ನು ಹೆಚ್ಚಾಗಿ ಕರೆಯಲಾಗುವ ಅನೇಕ ಮಠಗಳು, ಚರ್ಚ್‌ಗಳು, ಸಿನಗಾಗ್‌ಗಳು ಮತ್ತು ಮಸೀದಿಗಳು ನಾಶವಾಗುತ್ತಿದ್ದವು. ದೇವರು ತನ್ನ ಉದ್ದೇಶಕ್ಕೆ ಸಹಾಯ ಮಾಡುವವರಿಗೆ ಖಂಡಿತವಾಗಿ ಸಹಾಯ ಮಾಡುತ್ತಾನೆ – ದೇವರು ಬಲಶಾಲಿ ಮತ್ತು ಶಕ್ತಿಶಾಲಿ.

    ಕುರಾನ್ ಅಧ್ಯಾಯ 22 ಸೂಕ್ತಿ 40

    ಮುಸ್ಲಿಮೇತರರ ಆರಾಧನಾ ಸ್ಥಳಗಳ ಮೇಲೆ ದಾಳಿ ಮಾಡಲು ಇಸ್ಲಾಂ ಮುಸ್ಲಿಮರಿಗೆ ಆದೇಶಿಸುವುದಿಲ್ಲ ಮತ್ತು ಇಸ್ಲಾಮಿ ರಾಷ್ಟ್ರಗಳಲ್ಲಿ ಮುಸ್ಲಿಮೇತರ ಪೂಜಾ ಸ್ಥಳಗಳ ಅಸ್ತಿತ್ವವನ್ನು ಅನುಮತಿಸಲಾಗಿದೆ ಎಂದು ಮೇಲಿನ ಸೂಕ್ತಿಯು ಸ್ಪಷ್ಟವಾಗಿ ತೋರಿಸುತ್ತದೆ. ಪಾಕಿಸ್ತಾನ ಅಥವಾ ಬಾಂಗ್ಲಾದೇಶದಂತಹ ಯಾವುದೇ ಮುಸ್ಲಿಂ ರಾಷ್ಟ್ರಗಳು ತಮ್ಮ ಹಿಂದೂ ನಾಗರಿಕರನ್ನು ನ್ಯಾಯಯುತವಾಗಿ ಮತ್ತು ದಯೆಯಿಂದ ನಡೆಸಿಕೊಳ್ಳದಿದ್ದರೆ, ಅವರು ಕುರಾನ್‌ನ ಬೋಧನೆಗಳನ್ನು ಅನುಸರಿಸುತ್ತಿಲ್ಲ ಎಂದಷ್ಟೇ ಅರ್ಥ.


    ನಿಮಗೆ ಇಷ್ಟವಾಗ ಬಹುದಾದಂತಹ ಲೇಖನಗಳು

    WHAT OTHERS ARE READING

    Most Popular