More

    Choose Your Language

    ಮುಸ್ಲಿಮರು ಏಕೆ “ಪ್ರಸಾದ” ತಿನ್ನುವುದಿಲ್ಲ?

    ಮುಸ್ಲಿಮರು ತಮ್ಮ ಸೈದ್ಧಾಂತಿಕ ನಿಲುವಿನಿಂದಾಗಿ "ಪ್ರಸಾದ" ತಿನ್ನುವುದಿಲ್ಲ. ಇದು ಮಾಂಸಾಹಾರವನ್ನು ತಿನ್ನಲು ನಿರಾಕರಿಸುವ ಸಸ್ಯಾಹಾರಿಗಳ ಸೈದ್ಧಾಂತಿಕ ನಿಲುವನ್ನು ಹೋಲುತ್ತದೆ. ಸಸ್ಯಾಹಾರಿಗಳಿಗೆ ಬಳಸುವ ಮಾನದಂಡ ಮತ್ತು ನೀಡುವ ಪರಿಗಣನೆಯನ್ನೇ ಮುಸ್ಲಿಮರಿಗೂ ಅನ್ವಯಿಸಬೇಕು.

    ಮುಸ್ಲಿಮರು ಏಕೆ “ಪ್ರಸಾದ” ತಿನ್ನುವುದಿಲ್ಲ?

    ಅನೇಕರು ಕೇಳುವ ಒಂದು ಸಾಮಾನ್ಯ ಪ್ರಶ್ನೆಯೆಂದರೆ “ಮುಸ್ಲಿಮರು “ಪ್ರಸಾದ ಏಕೆ ತಿನ್ನುವುದಿಲ್ಲ?”. ಈ ಪ್ರಶ್ನೆಯನ್ನು ಸರಿಯಾಗಿ ಅರ್ಥಮಾಡಿಕೊಳ್ಳುವುದು ಬಹಳ ಮುಖ್ಯ, ಏಕೆಂದರೆ ಮುಸ್ಲಿಮರು “ಪ್ರಸಾದ” ತಿನ್ನದಿರುವುದನ್ನು ಇತರ ಧರ್ಮಗಳ ಜನರ ಅವಮಾನ, ಅವರ ಬಗೆಗೆ ತಾರತಮ್ಯ ಮತ್ತು ಅಸಹಿಷ್ಣುತೆ ಎಂದು ಅನೇಕ ಜನರು ಗ್ರಹಿಸುತ್ತಾರೆ.

    ನೀವು ಚಿಕನ್ 65 ಅನ್ನು ಸಸ್ಯಾಹಾರಿಗಳಿಗೆ ನೀಡಿದಾಗ ಅವರು ತಿನ್ನುತ್ತಾರೆಯೇ?

    ಖಂಡಿತ “ಇಲ್ಲ”. ನೀವು ಚಿಕನ್ 65 ಅನ್ನು ಪ್ರೀತಿ, ಗೌರವದಿಂದ ನೀಡುತ್ತಿರುವಿರಿ ಮತ್ತು ನೀವು ಅವರೊಂದಿಗೆ ಸಾಮರಸ್ಯದಿಂದ ಬದುಕಲು ಬಯಸುತ್ತೀರಿ ಎಂದು ಸಸ್ಯಾಹಾರಿಗೆ ಮನವರಿಕೆ ಮಾಡಲು ಪ್ರಯತ್ನಿಸಿದರೆ ಏನು ಉಪಯೋಗ? ಈ ವಿವರಣೆಯನ್ನು ಕೇಳಿದ ನಂತರ ಅವರು ಚಿಕನ್ 65 ಅನ್ನು ಸ್ವೀಕರಿಸುತ್ತಾರೆಯೇ? ಖಂಡಿತ ಇಲ್ಲ. ಅವರದೇ ಧರ್ಮದವರು ಕೂಡ ಚಿಕನ್ 65 ಅನ್ನು ಕೊಟ್ಟರೂ ಸಸ್ಯಾಹಾರಿಗಳು ಅದನ್ನು ತಿನ್ನುವುದಿಲ್ಲ. ತಾವು ಮಾಂಸಾಹಾರ ಸೇವಿಸುವುದಿಲ್ಲ ಎಂದು ನಯವಾಗಿ ವಿವರಿಸುತ್ತಾರೆ.

    “ಸಸ್ಯಾಹಾರಿಗಳು ಮಾಂಸಾಹಾರಿಗಳ ಭಾವನೆಗಳೆಡೆಗೆ ತಮ್ಮ ಸ್ವೀಕಾರ ಮತ್ತು ಗೌರವವನ್ನು ಪ್ರದರ್ಶಿಸಲು ಚಿಕನ್ 65 ಅನ್ನು ಸ್ವೀಕರಿಸಬೇಕು,” ಎಂದು ಯಾರಾದರೂ ವಾದಿಸಿದರೆ, ನೀವು ಅದನ್ನು ಒಪ್ಪುವಿರಾ?

    ಸಸ್ಯಾಹಾರಿ ಚಿಕನ್ 65 ತಿನ್ನಲು ನಿರಾಕರಿಸಿದಾಗ, ಯಾರಾದರೂ ಅದನ್ನು ತಾರತಮ್ಯ ಅಥವಾ ಅಸಹಿಷ್ಣುತೆ ಅಥವಾ ಅವಮಾನ ಎಂದು ಕರೆಯುತ್ತಾರೆಯೇ? ಖಂಡಿತ “ಇಲ್ಲ”. ಸೈದ್ಧಾಂತಿಕ ಕಾರಣಗಳಿಗಾಗಿ ಹೆಚ್ಚಿನ ಸಸ್ಯಾಹಾರಿಗಳು ಪ್ರಾಣಿಗಳ ಮೂಲದ ಆಹಾರ ತಿನ್ನುವುದಿಲ್ಲ ಎಂದು ನಾವು ಅರ್ಥಮಾಡಿಕೊಂಡಿದ್ದೇವೆ.

    ಪ್ರತಿಯೊಬ್ಬ ವಿವೇಕವುಳ್ಳ ವ್ಯಕ್ತಿಯು ಸಸ್ಯಾಹಾರಿಗಳ ಸೈದ್ಧಾಂತಿಕ ನಿಲುವನ್ನು ಗೌರವಿಸುತ್ತಾರೆ ಮತ್ತು ಚಿಕನ್ 65 ಅನ್ನು ತಿನ್ನುವುದಿಲ್ಲ ಎಂಬ ಅವರ ನಿರ್ಧಾರವನ್ನು ಒಪ್ಪಿಕೊಳ್ಳುತ್ತಾರೆ. ಈ ಮಾನದಂಡ ಮತ್ತು ಪರಿಗಣನೆಯು ಮುಸ್ಲಿಮರಿಗೂ ಅನ್ವಯವಾಗಬೇಕು.

    ಮುಸ್ಲಿಮರು ತಮ್ಮ ಸೈದ್ಧಾಂತಿಕ ನಿಲುವಿನಿಂದಾಗಿ ಪ್ರಸಾದ ತಿನ್ನುವುದಿಲ್ಲ

    ಮುಸ್ಲಿಮರು ಪ್ರಸಾದವನ್ನು ಏಕೆ ತಿನ್ನುವುದಿಲ್ಲ ಎಂದು ನೀವು ಯೋಚಿಸುತ್ತಿದ್ದರೆ, ದೇವರು ಅದನ್ನು ತಿನ್ನುವುದನ್ನು ನಿಷೇಧಿಸಿದ್ದಾನೆ ಎಂದು ಅವರು ನಂಬುತ್ತಾರೆ.

    ದೇವರು ಕುರಾನ್‌ನಲ್ಲಿ ಹೇಳುತ್ತಾನೆ:

    ಅವನು (ದೇವರು) ನಿಮಗಾಗಿ ಸತ್ತ ಪ್ರಾಣಿಗಳ ಮಾಂಸ, ರಕ್ತ, ಹಂದಿಯ ಮಾಂಸ ಮತ್ತು ದೇವರ ಹೆಸರನ್ನು ಹೊರತುಪಡಿಸಿ ಯಾವುದೇ ಬೇರೆ ಹೆಸರನ್ನು ಉಚ್ಚರಿಸಲಾಗಿರುವ ಆಹಾರವನ್ನು ಮಾತ್ರ ನಿಷೇಧಿಸಿದ್ದಾನೆ.

    ಕುರಾನ್ ಅಧ್ಯಾಯ 2: ಸೂಕ್ತಿ 173

    ಈ ಮೇಲಿನ ಸೂಕ್ತಿವು ಮುಸ್ಲಿಮರು ಯಾವುದೇ ದೈವ (demigod) ಅಥವಾ ಸಂತರಿಗೆ ನೈವೇದ್ಯ ಅಥವಾ ಪ್ರಸಾದವಾಗಿ ಮಾಡುವ ಯಾವುದೇ ಆಹಾರವನ್ನು ತಿನ್ನಬಾರದು ಎಂದು ಸ್ಪಷ್ಟಪಡಿಸುತ್ತದೆ. ಒಬ್ಬ ಸಸ್ಯಾಹಾರಿಯ ಸೈದ್ಧಾಂತಿಕ ನಿಲುವು ಮಾಂಸಾಹಾರವನ್ನು ತಿನ್ನಲು ಹೇಗೆ ಅನುಮತಿಸುವುದಿಲ್ಲವೋ, ಮುಸ್ಲಿಮರ ಸೈದ್ಧಾಂತಿಕ ನಿಲುವು ದೇವರನ್ನು ಹೊರತುಪಡಿಸಿ ದೈವ ಅಥವಾ ಸಂತರಂತಹ ಬೇರೆ ಯಾರಿಗಾದರೂ ತಯಾರಿಸಲಾದ ನೈವೇದ್ಯವನ್ನು ತಿನ್ನಲು ಅನುಮತಿಸುವುದಿಲ್ಲ.

    ಗಮನಿಸಿ: ಮುಸ್ಲಿಮರು ದರ್ಗಾಗಳಲ್ಲಿ ಸಂತರಿಗೆ ಅರ್ಪಿಸುವ ನೈವೇದ್ಯವನ್ನು ಸಹ ತಿನ್ನಬಾರದು. ಉದಾಹರಣೆ: ಅಜ್ಮೀರ್ ದರ್ಗಾದಲ್ಲಿ ಮಾಡಿದ ಜರ್ದಾ ಅರ್ಪಣೆ. ಅವರು ಎಷ್ಟೇ ಧರ್ಮನಿಷ್ಠರಾಗಿದ್ದರೂ ಸಂತರು ದೇವರಲ್ಲ. ಕುರಾನ್‌ನ ಮಾರ್ಗದರ್ಶನವನ್ನು ಅನುಸರಿಸುವ ಮುಸ್ಲಿಮರು ಜರ್ದಾವನ್ನು ತಿನ್ನಬಾರದು, ಏಕೆಂದರೆ ಅದು ಸಂತನಿಗೆ ಮಾಡುವ ನೈವೇದ್ಯವಾಗಿದೆ. ನೀವು ನೋಡುವಂತೆ, ಮುಸ್ಲಿಮರ ಈ ಪರಿಕಲ್ಪನೆ ಯಾವುದೇ ನಿರ್ದಿಷ್ಟ ಧರ್ಮದೊಂದಿಗೆ, ಯಾವುದೇ ಸಂಬಂಧವನ್ನು ಹೊಂದಿಲ್ಲ.

    ಈ ಸೈದ್ಧಾಂತಿಕ ನಿಲುವೇಕೆ?

    ದೇವರು ಈ ಜಗತ್ತಿನ ಮತ್ತು ಅದರೊಳಗೆ ಇರುವ ಎಲ್ಲದರ ಸೃಷ್ಟಿಕರ್ತ ಎಂದು ಇಸ್ಲಾಂ ಕಲಿಸುತ್ತದೆ. ಸಮಯ ಮತ್ತು ಸ್ಥಳ(space) ದೇವರ ಸೃಷ್ಟಿಗಳು. ಆದ್ದರಿಂದ, ಜಗತ್ತು ಮತ್ತು ಅದರೊಳಗೆ ಇರುವ ಯಾವುದೂ ದೇವರಾಗಲು ಸಾಧ್ಯವಿಲ್ಲ, ಏಕೆಂದರೆ ಜಗತ್ತು ಮತ್ತು ಅದರೊಳಗಿರುವ ಪ್ರತಿಯೊಂದೂ (ಒಬ್ಬ ವ್ಯಕ್ತಿ, ಗ್ರಹ ಅಥವಾ ವಸ್ತು) ಸಮಯ ಮತ್ತು ಸ್ಥಳದಿಂದ ಸೀಮಿತವಾಗಿದೆ.

    ಈ ಸೃಷ್ಟಿಕರ್ತನು ಒಬ್ಬನೇ, ಅವನಿಗೆ ಹೆತ್ತವರಾಗಲಿ, ಸಂಗಾತಿ ಅಥವಾ ಮಕ್ಕಳಾಗಲಿ ಇಲ್ಲ, ಯಾವುದೇ ದೌರ್ಬಲ್ಯಗಳಿಲ್ಲ ಮತ್ತು ಅವನಿಗೆ ಸಮಾನರು ಯಾರೂ ಇಲ್ಲ ಎಂದು ಇಸ್ಲಾಂ ಕಲಿಸುತ್ತದೆ. ಈ ಗುಣಲಕ್ಷಣಗಳನ್ನು ಹೊಂದಿರದ ಯಾವುದೂ ದೇವರಾಗಲು ಸಾಧ್ಯವಿಲ್ಲ ಎಂದು ಮುಸ್ಲಿಮರು ನಂಬಿದ್ದಾರೆ.

    ಸ್ವಾಭಾವಿಕವಾಗಿ, ಇಸ್ಲಾಂ ಧರ್ಮವು ಒಬ್ಬ ಸಂತ ಅಥವಾ ದೈವಕ್ಕೆ (ದೇವರ ಪರಿಕಲ್ಪನೆಯ ಮಾನದಂಡಗಳನ್ನು ಪೂರೈಸುವುದಿಲ್ಲ) ನೈವೇದ್ಯವಾಗಿ ನೀಡುವ ಆಹಾರವನ್ನು ದೇವರನ್ನು ಹೊರತುಪಡಿಸಿ ಬೇರೆಯವರಿಗೆ ನೀಡುವ ಆಹಾರವೆಂದು ಪರಿಗಣಿಸುತ್ತದೆ. ಆದ್ದರಿಂದ, ಮುಸ್ಲಿಮರು ಇದನ್ನು ತಿನ್ನಲು ಅನುಮತಿಯಿಲ್ಲ. ಮುಸ್ಲಿಮರು “ಪ್ರಸಾದ” ಏಕೆ ತಿನ್ನುವುದಿಲ್ಲ ಎಂಬುದು ಈಗ ನಿಮಗೆ ಸ್ಪಷ್ಟವಾಗಿರಬೇಕು.

    ಇಸ್ಲಾಂನಲ್ಲಿ ಯಾವುದೇ ತಾರತಮ್ಯವಿಲ್ಲ

    ಎಲ್ಲಾ ಧರ್ಮಗಳ ಜನರೊಂದಿಗೆ ಸಾಮರಸ್ಯದಿಂದ ಬದುಕಲು ಇಸ್ಲಾಂ ಸೂಚಿಸುತ್ತದೆ. ಪ್ರವಾದಿ ಮುಹಮ್ಮದ್ ಅವರ ಜೀವನದಿಂದ ನಾವು ಒಂದೆರಡು ಉದಾಹರಣೆಗಳನ್ನು ಉಲ್ಲೇಖಿಸುತ್ತೇವೆ.

    ಒಬ್ಬ ಯಹೂದಿ ಪ್ರವಾದಿ ಮುಹಮ್ಮದ್ ರನ್ನು ಬಾರ್ಲಿ-ಬ್ರೆಡ್ ಮತ್ತು ಹಳಸಿದ ಕರಗಿದ ಕೊಬ್ಬಿನ ಊಟಕ್ಕೆ ಆಹ್ವಾನಿಸಿದನು ಮತ್ತು ಪ್ರವಾದಿ ಅವನ ಆಹ್ವಾನವನ್ನು ಸ್ವೀಕರಿಸಿದರು.

    ಮುಸ್ನದ್ ಅಹ್ಮದ್

    ಮೇಲಿನ ಘಟನೆಯು ಮುಸ್ಲಿಮರಲ್ಲದವರ ಆಹ್ವಾನವನ್ನು ಸ್ವೀಕರಿಸಲು ಮತ್ತು ಅವರ ಆಹಾರವನ್ನು ತಿನ್ನಲು ಮುಸ್ಲಿಮರಿಗೆ ಕಲಿಸುವ ಹಲವಾರು ಉದಾಹರಣೆಗಳಲ್ಲಿ ಒಂದಾಗಿದೆ. ಅಷ್ಟೇ ಅಲ್ಲ, ಪ್ರವಾದಿ ಮುಹಮ್ಮದ್ ಜನರು ತಮ್ಮ ನೆರೆಹೊರೆಯವರೊಂದಿಗೆ ಆಹಾರವನ್ನು ಹಂಚಿಕೊಳ್ಳಲು ಪ್ರೋತ್ಸಾಹಿಸಿದರು.

    ಪ್ರವಾದಿ ಮುಹಮ್ಮದ್ ಹೇಳಿದ್ದಾರೆ:

    ನೀವು ಏನನ್ನಾದರೂ ಅಡುಗೆ ಮಾಡುವಾಗ, ಹೆಚ್ಚಾಗಿ ಮಾಡಿ, ಇದರಿಂದ ನೀವು ನಿಮ್ಮ ನೆರೆಹೊರೆಯವರೊಂದಿಗೆ ಹಂಚಿಕೊಳ್ಳಬಹುದು.

    ಸಹೀಹ್ ಮುಸ್ಲಿಂ

    ಇಸ್ಲಾಂ ಮುಸ್ಲಿಮರಿಗೆ ಮುಸ್ಲಿಮೇತರರ ಆಹಾರವನ್ನು ತಿನ್ನಲು ಅವಕಾಶ ನೀಡುತ್ತದೆ ಮತ್ತು ಅವರೊಂದಿಗೆ ಆಹಾರವನ್ನು ಹಂಚಿಕೊಳ್ಳಲು ಪ್ರೋತ್ಸಾಹಿಸುತ್ತದೆ. ಅದಕ್ಕಾಗಿಯೇ, ನಿಮ್ಮ ಕಚೇರಿ, ನೆರೆಹೊರೆ, ಶಾಲೆ ಅಥವಾ ಕಾಲೇಜುಗಳಲ್ಲಿ ಮುಸ್ಲಿಮರು ತಮ್ಮ ಆಹಾರವನ್ನು ಮುಸ್ಲಿಮೇತರರೊಂದಿಗೆ ಹಂಚಿಕೊಳ್ಳುವುದನ್ನು ಮತ್ತು ಮುಸ್ಲಿಮೇತರರು ನೀಡಿದ ಆಹಾರವನ್ನು ತಿನ್ನುವುದನ್ನು ನೀವು ನೋಡಬಹುದು. ಆದ್ದರಿಂದ, ನಿಸ್ಸಂಶಯವಾಗಿ ಮುಸ್ಲಿಮರು “ಪ್ರಸಾದ” ತಿನ್ನುವುದಿಲ್ಲ ಎಂಬುದು ಖಂಡಿತವಾಗಿಯೂ ತಾರತಮ್ಯ ಅಥವಾ ಅವಮಾನ ಅಥವಾ ಅಸಹಿಷ್ಣುತೆಯ ಕ್ರಿಯೆಯಲ್ಲ.

    ನೀವೇ ಪರಿಶೀಲಿಸಬಹುದು

    ಮುಸ್ಲಿಮರಿಗೆ (ದೈವ ನೈವೇದ್ಯವಲ್ಲದ) ಸಿಹಿತಿಂಡಿಗಳು ಅಥವಾ ಆಹಾರವನ್ನು ನೀಡಲು ಪ್ರಯತ್ನಿಸಿ. ಅವರು ಅದನ್ನು ಸಂತೋಷದಿಂದ ತಿನ್ನುತ್ತಾರೆ ಮತ್ತು ಅದಕ್ಕಾಗಿ ಧನ್ಯವಾದಗಳನ್ನೂ ಸಲ್ಲಿಸುತ್ತಾರೆ. ತಾರತಮ್ಯ ಮಾಡುವುದು ಅಥವಾ ನಿಮ್ಮನ್ನು ಅವಮಾನಿಸುವುದು ಅಥವಾ ಅಸಹಿಷ್ಣುತೆ ತೋರುವುದು ಉದ್ದೇಶವಾಗಿದ್ದರೆ, ಅವರು ನಿಮ್ಮಿಂದ ಯಾವುದೇ ಆಹಾರವನ್ನು ಸ್ವೀಕರಿಸಬಾರದು, ಆದರೆ ವಿಷಯ ಹಾಗಿಲ್ಲ. ವಾಸ್ತವವಾಗಿ, ಪ್ರವಾದಿ ಮುಹಮ್ಮದ್ ಜನರು ಪರಸ್ಪರ ಉಡುಗೊರೆಗಳನ್ನು ನೀಡಲು ಪ್ರೋತ್ಸಾಹಿಸಿದರು. ಉಡುಗೊರೆಗಳಲ್ಲಿ ಖಂಡಿತವಾಗಿಯೂ ಆಹಾರ ಪದಾರ್ಥಗಳೂ ಒಳಗೊಂಡಿರುತ್ತವೆ.

    ಪ್ರವಾದಿ ಮುಹಮ್ಮದ್ ಹೇಳಿದರು:

    ಪರಸ್ಪರ ಉಡುಗೊರೆಗಳನ್ನು ನೀಡಿ ಮತ್ತು ನೀವು ಪರಸ್ಪರ ಪ್ರೀತಿಸುವಿರಿ.

    ಅದಾಬ್ ಅಲ್ ಮುಫ್ರದ್

    ಇಸ್ಲಾಂ ಸಾರ್ವತ್ರಿಕ ಸಹೋದರತ್ವವನ್ನು (Universal brotherhood) ಪ್ರತಿಪಾದಿಸುತ್ತದೆ

    ಎಲ್ಲಾ ಮಾನವರು, ಮೊದಲ ಪುರುಷ ಮತ್ತು ಮಹಿಳೆಯ (ಆಡಮ್ ಮತ್ತು ಈವ್) ಮಕ್ಕಳು ಎಂದು ಇಸ್ಲಾಂ ಕಲಿಸುತ್ತದೆ ಹಾಗಾಗಿ, ಎಲ್ಲಾ ಮಾನವರು, ಅವರ ನಂಬಿಕೆ, ರಾಷ್ಟ್ರೀಯತೆ, ಭಾಷೆ, ಚರ್ಮದ ಬಣ್ಣವನ್ನು ಲೆಕ್ಕಿಸದೆ, ಮಾನವೀಯತೆಯಲ್ಲಿ ಸಹೋದರ ಸಹೋದರಿಯರು ಎಂದು ಕಲಿಸುತ್ತದೆ.

    ದೇವರು ಕುರಾನ್‌ನಲ್ಲಿ ಹೇಳುತ್ತಾನೆ:

    ಓ ಮನುಕುಲ! ನಿಸ್ಸಂದೇಹವಾಗಿ, ನಾವು ನಿಮ್ಮೆಲ್ಲರನ್ನೂ ಒಂದು ಗಂಡು ಮತ್ತು ಹೆಣ್ಣಿನಿಂದ ಸೃಷ್ಟಿಸಿದ್ದೇವೆ ಮತ್ತು ನೀವು ಒಬ್ಬರನ್ನೊಬ್ಬರು ತಿಳಿದುಕೊಳ್ಳಲು ನಿಮ್ಮನ್ನು ಜನಾಂಗಗಳು ಮತ್ತು ಬುಡಕಟ್ಟುಗಳಾಗಿ ಮಾಡಿದ್ದೇವೆ. ನಿಶ್ಚಯವಾಗಿಯೂ ನಿಮ್ಮಲ್ಲಿ ಅತ್ಯಂತ ನೀತಿವಂತನೇ ದೇವರ ದೃಷ್ಟಿಯಲ್ಲಿ ಅತ್ಯಂತ ಶ್ರೇಷ್ಠನೂ ಆದವನು.

    ಕುರಾನ್ ಅಧ್ಯಾಯ 49: ಸೂಕ್ತಿ 13

    ನೀವು ನೋಡುವಂತೆ, ನಾವು ಅನುಸರಿಸುವ ಧರ್ಮ ಮತ್ತು ಸಿದ್ಧಾಂತವನ್ನು ಲೆಕ್ಕಿಸದೆ, ನಾವೆಲ್ಲರೂ ಮಾನವೀಯತೆಯಲ್ಲಿ ಸಹೋದರ ಸಹೋದರಿಯರೇ ಎಂದು ಈ ಸೂಕ್ತಿ ಸ್ಪಷ್ಟಪಡಿಸುತ್ತದೆ. ಜನರಲ್ಲಿ ಯಾವುದೇ ತಾರತಮ್ಯಕ್ಕೆ ಸಂಪೂರ್ಣವಾಗಿ ಅವಕಾಶವೇ ಇಲ್ಲ.

    ಪ್ರವಾದಿ ಮುಹಮ್ಮದ್ ಹೇಳಿದರು:

    ಅರಬನಿಗೆ ಅರಬೇತರನ ಮೇಲಾಗಲಿ, ಅರಬನ ಮೇಲೆ ಅರಬೇತರನಿಗಾಗಲಿ ಯಾವುದೇ ಶ್ರೇಷ್ಠತೆ ಇಲ್ಲ. ಬಿಳಿ ವರ್ಣದವರು ಕಪ್ಪು ವರ್ಣದವರಿಗಿಂತ ಶ್ರೇಷ್ಠರಲ್ಲ, ಮತ್ತು ಕಪ್ಪು ವರ್ಣದವರು ಬಿಳಿ ವರ್ಣದವರಿಗಿಂತ ಶ್ರೇಷ್ಠರಲ್ಲ. ಉತ್ತಮ ಗುಣದಿಂದ ಮಾತ್ರ ಶ್ರೇಷ್ಠತೆ.

    ಮುಸ್ನದ್ ಅಹ್ಮದ್

    ಇಸ್ಲಾಂ ಧರ್ಮವು ಎಲ್ಲಾ ಮಾನವರು ಸಮಾನರು ಮತ್ತು ಹುಟ್ಟಿನಿಂದ ಯಾರೂ ಶ್ರೇಷ್ಠರಲ್ಲ ಎಂದು ಕಲಿಸುತ್ತದೆ. ಒಬ್ಬ ವ್ಯಕ್ತಿಯು ಉದಾತ್ತ ಮತ್ತು ಶ್ರೇಷ್ಠನಾಗುವ ಏಕೈಕ ಮಾರ್ಗವೆಂದರೆ ಅವರ ನೀತಿಬದ್ಧ ಕೃತ್ಯಗಳಿಂದ ಮಾತ್ರ. ಈ ಬೋಧನೆಯು ನಾವು ವಾಸಿಸುವ ಸಮಯಕ್ಕೆ ಅತ್ಯಂತ ಪ್ರಸ್ತುತವಾಗಿದೆ, ಏಕೆಂದರೆ ಕೀಳೆಂದು ಪರಿಗಣಿಸುವ ಜನರು ಬೇಯಿಸಿದ ಆಹಾರವನ್ನು ತಿನ್ನಲು ನಿರಾಕರಿಸುವ ಜನರ ಬಗ್ಗೆ ನಾವು ಆಗಾಗ್ಗೆ ಸುದ್ದಿಗಳನ್ನು ನೋಡುತ್ತಿರುತ್ತೇವೆ. ನೆನಪಿಡಿ, ಇದು ಕೇವಲ ಸಾಮಾನ್ಯ ಆಹಾರವೇ ಹೊರತಾಗಿ, ದೈವ ನೈವೇದ್ಯವಲ್ಲ. ಸಾಮಾನ್ಯ ಆಹಾರದ ವಿಷಯವೇ ಹೀಗಾದರೆ, ದೇವರಿಗೆ ನೈವೇದ್ಯ ಮಾಡಿದರೆ ಏನಾಗಬಹುದು ಎಂದು ನೀವೇ ಊಹಿಸಬಹುದು. ಎಲ್ಲಾ ಮಾನವರು ಸಮಾನರು ಎಂದು ಇಸ್ಲಾಂ ಬೋಧಿಸುವಂತೆ ನಿಜವಾದ ಮುಸ್ಲಿಮ್ ಈ ರೀತಿಯ ತಾರತಮ್ಯದ ಅಭ್ಯಾಸಗಳನ್ನು ಎಂದಿಗೂ ಅಳವಡಿಸಿಕೊಳ್ಳುವುದಿಲ್ಲ.

    ಸಾರಾಂಶ

    1. ಮುಸ್ಲಿಮರು ತಮ್ಮ ಸೈದ್ಧಾಂತಿಕ ನಿಲುವಿನಿಂದಾಗಿ “ಪ್ರಸಾದ” ತಿನ್ನುವುದಿಲ್ಲ. ಇದು ಮಾಂಸಾಹಾರವನ್ನು ತಿನ್ನಲು ನಿರಾಕರಿಸುವ ಸಸ್ಯಾಹಾರಿಗಳ ಸೈದ್ಧಾಂತಿಕ ನಿಲುವನ್ನು ಹೋಲುತ್ತದೆ.
    2. ಸಸ್ಯಾಹಾರಿಗಳಿಗೆ ಬಳಸಲಾಗುವ ಮಾನದಂಡ ಮತ್ತು ಅವರಿಗೆ ನೀಡುವ ಪರಿಗಣನೆಯನ್ನು ಮುಸ್ಲಿಮರಿಗೂ ಅನ್ವಯಿಸಬೇಕು.
    3. ಇಸ್ಲಾಂ ಸಾರ್ವತ್ರಿಕ ಸಹೋದರತ್ವವನ್ನು ಕಲಿಸುತ್ತದೆ ಮತ್ತು ಎಲ್ಲಾ ಮಾನವರನ್ನು ಸಮಾನರಾಗಿ ಪರಿಗಣಿಸುತ್ತದೆ. ಆದ್ದರಿಂದ, ಇಸ್ಲಾಂನಲ್ಲಿ ತಾರತಮ್ಯಕ್ಕೆ ಸಂಪೂರ್ಣವಾಗಿ ಅವಕಾಶವಿಲ್ಲ.
    4. ಮುಸ್ಲಿಮರು ಮುಸ್ಲಿಮೇತರರೊಂದಿಗೆ ಆಹಾರ ಹಂಚಿಕೊಳ್ಳಲು ಮತ್ತು ಅವರ ಆಹಾರವನ್ನು ತಿನ್ನಲು ಅನುಮತಿಸಲಾಗಿದೆ.
    5. ಮುಸ್ಲಿಮರು “ಪ್ರಸಾದ” ತಿನ್ನದಿರುವುದು ತಾರತಮ್ಯ ಅಥವಾ ಅವಮಾನ ಅಥವಾ ಅಸಹಿಷ್ಣುತೆಯ ಕೃತ್ಯೆಯಲ್ಲ.
    6. ದರ್ಗಾಗಳಲ್ಲಿ ಸಂತರಿಗೆ ನೀಡುವ ನೈವೇದ್ಯವನ್ನೂ ಮುಸ್ಲಿಮರು ತಿನ್ನುವಂತಿಲ್ಲ. ಉದಾಹರಣೆ: ಅಜ್ಮೀರ್ ದರ್ಗಾದಲ್ಲಿ ಜರ್ದಾ.

    ನಿಮಗೆ ಇಷ್ಟವಾಗ ಬಹುದಾದಂತಹ ಲೇಖನಗಳು

    WHAT OTHERS ARE READING

    Most Popular