More

    Choose Your Language

    ಸಮಾಜದಲ್ಲಿ ಶಾಂತಿ ಮತ್ತು ಸಾಮರಸ್ಯದ ರಹಸ್ಯ – ಮದೀನಾ ಸಂವಿಧಾನದಿಂದ ಪ್ರೇರಣೆ

    ಪ್ರವಾದಿ ಮುಹಮ್ಮದರು ಮದೀನಾದ ವಿವಿಧ ಬುಡಕಟ್ಟುಗಳೊಂದಿಗೆ ಮಾಡಿಕೊಂಡಿದ್ದ ಒಪ್ಪಂದವನ್ನು "ಮದೀನಾ ಸಂವಿಧಾನ" ಎಂದು ಉಲ್ಲೇಖಿಸಲಾಗುತ್ತದೆ. ಮದೀನಾ ಸಂವಿಧಾನದ ಷರತ್ತುಗಳನ್ನು ಸಮಾನತೆ, ನ್ಯಾಯ ಮತ್ತು ಧಾರ್ಮಿಕ ಸ್ವಾತಂತ್ರ್ಯದ ಮೇಲೆ ನಿರ್ಮಿಸಲಾಗಿದ್ದವು. 1400 ವರ್ಷಗಳ ನಂತರವೂ, ಸಮಾನತೆ, ಶಾಂತಿ ಮತ್ತು ಸೌಹಾರ್ದತೆಯನ್ನು ಸಾಧಿಸಲು "ಮದೀನಾ ಸಂವಿಧಾನ"ದ ತತ್ವಗಳು, ಭಾರತದಲ್ಲಿ ನಮಗೆ ಅತ್ಯಂತ ಸೂಕ್ತವಾಗಿವೆ.

    ಪರಿಚಯ

    ನಮ್ಮ ಭಾರತ ವಿವಿಧ ಧರ್ಮ, ಜಾತಿ, ಸಂಸ್ಕೃತಿ ಮತ್ತು ಭಾಷೆಗಳ ಜನರಿಂದ ತುಂಬಿದ ನೆಲವಾಗಿದೆ. ಇಂತಹ ವಿವಿಧತೆಯಲ್ಲಿ ಶಾಂತಿ, ಸಹಿಷ್ಣುತೆ ಮತ್ತು ಸಾಮರಸ್ಯದ ಪ್ರಾಮುಖ್ಯತೆಯ ಅರಿವು ನಮಗೆಲ್ಲರಿಗೂ ಇದೆ. ಇಂತಹ ಸಮಾಜದಲ್ಲಿ ವಿವಿಧತೆಯಲ್ಲಿ ಏಕತೆಯನ್ನು ಸಾಧಿಸುವುದೂ ಸುಲಭದ ವಿಷಯವಲ್ಲ.

    ಈ ಲೇಖನದಲ್ಲಿ, ಪ್ರವಾದಿ ಮುಹಮ್ಮದರು ತಮ್ಮ ಜೀವನದಲ್ಲಿ ಹೇಗೆ ಒಂದು ವಿವಿಧತೆ ತುಂಬಿದ ಬಹುತ್ವ ಸಮಾಜದಲ್ಲಿ ಶಾಂತಿ ಮತ್ತು ಸಾಮರಸ್ಯೆಯನ್ನು ನೆಲೆಯೂರಿಸುವಲ್ಲಿ ಸಫಲರಾದರು ಎಂದು ನೋಡೋಣ.

    ಮದೀನಾ ಸಂವಿಧಾನದಿಂದ ಪ್ರೇರಣೆ

    ಹಿನ್ನೆಲೆ

    ಪ್ರವಾದಿ ಮುಹಮ್ಮದರು ಮಕ್ಕಾ ನಗರದಲ್ಲಿ ಜನಿಸಿದ್ದು, ತಮ್ಮ ಪ್ರರಮಾಣಿಕತೆ ಮತ್ತು ಉತ್ತಮ ನಡವಳಿಕೆಯಿಂದಾಗಿ ಅವರೊಬ್ಬ ಗೌರವಾನ್ವಿತ ವ್ಯಕ್ತಿಯಾಗಿದ್ದರು ಮತ್ತು ಜನರು ಅವರನ್ನು “ಅಲ್-ಅಮೀನ್” ಅಂದರೆ “ಅತ್ಯಂತ ವಿಶ್ವಾಸಾರ್ಹ ವ್ಯಕ್ತಿ” ಎಂದು ಕರೆಯುತ್ತಿದ್ದರು. ತಮ್ಮ 40ನೇ ವಯಸ್ಸಿನಲ್ಲಿ, ಪ್ರವಾದಿ ಮುಹಮ್ಮದ್ ಎಲ್ಲಾ ಮಾನವರು ಒಬ್ಬನೇ ದೇವರಿಂದ ಸೃಷ್ಟಿಸಲ್ಪಟ್ಟವರು, ಈ ಜಗತ್ತಿನಲ್ಲಿ ತಮ್ಮ ಕರ್ಮಗಳಿಗೆ ತಾವೇ ಜವಾಬ್ದಾರರು ಹಾಗೂ ಜನಾಂಗ, ವರ್ಣದ ಲೆಕ್ಕವಿಲ್ಲದೆ ಎಲ್ಲರೂ ಸಮಾನರು ಎಂದು ಬೋಧಿಸಲು ಪ್ರಾರಂಭಿಸುತ್ತಾರೆ. ಜನನ ಮತ್ತು ವಂಶಾವಳಿಯ ಶ್ರೇಷ್ಠತೆಯ ಆಧಾರದ ಮೇಲೆ ಜನರನ್ನು ದಬ್ಬಾಳಿಕೆ ಮಾಡುತ್ತಿದ್ದ ಮಕ್ಕಾದ ಮುಖ್ಯಸ್ಥರು ಪ್ರವಾದಿ ಮುಹಮ್ಮದ್ ಬೋಧಿಸಿದ ಸಮಾನತೆಯ ಸಂದೇಶದಿಂದ ಬೆದರಿಕೆಗೆ ಒಳಗಾದರು. ಅವರು ಪ್ರವಾದಿ ಮುಹಮ್ಮದ್ ಮತ್ತು ಅವರ ಅನುಯಾಯಿಗಳನ್ನು ಹಿಂಸಿಸಲು ಪ್ರಾರಂಭಿಸಿದರು. ಈ ತೀವ್ರ ಕಿರುಕುಳದ ಕಾರಣ, ಪ್ರವಾದಿ ಮುಹಮ್ಮದ್ ಮದೀನಾ ಎಂಬ ನಗರಕ್ಕೆ ವಲಸೆ ಹೋಗಬೇಕಾಯಿತು.

    Mecca to Medina - Curious Hats
    ಮಕ್ಕಾದಿಂದ ಮದೀನಾಗಿನ ವಲಸೆ

    ಮದೀನಾ

    ಮದೀನಾ ಒಂದು ಬಹುತ್ವದ ಸಮಾಜವಾಗಿತ್ತು. ಇದರಲ್ಲಿ ವಿವಿಧ ವಿಗ್ರಹಾರಾಧಕ ಧರ್ಮಗಳು ಮತ್ತು ಯಹೂದಿ ಧರ್ಮ ಅನುಸರಿಸುವ ವಿಭಿನ್ನ ಬುಡಕಟ್ಟುಗಳಿಗೆ ಸೇರಿದ ಜನರಿದ್ದರು. ಕೆಲವು ಯಹೂದಿ ಬುಡಕಟ್ಟುಗಳು ಕೆಲವು ವಿಗ್ರಹಾರಾಧಕ ಬುಡಕಟ್ಟುಗಳೊಂದಿಗೆ ಮೈತ್ರಿ ಮಾಡಿಕೊಂಡರೆ ಇತರ ಯಹೂದಿ ಬುಡಕಟ್ಟುಗಳು ಅಂತಹ ಇತರೆ ಬುಡಕಟ್ಟುಗಳೊಂದಿಗೆ ಮೈತ್ರಿ ಮಾಡಿಕೊಂಡಿದ್ದವು. ಈ ಬುಡಕಟ್ಟು ಜನಾಂಗದವರು ಹಲವಾರು ಶತಮಾನಗಳ ಕಾಲ ಪರಸ್ಪರ ಹೋರಾಡುತ್ತಿದ್ದರು ಹಾಗೂ ದಬ್ಬಾಳಿಕೆ ನಡೆಸುತ್ತಿದ್ದರು.

    Pluralistic Society - Curious Hats
    ಮದೀನಾದ ಬಹುತ್ವ ಸಮಾಜ

    ಮದೀನಾ ಸಂವಿಧಾನ

    ಮದೀನಾಕ್ಕೆ ಪ್ರವಾದಿಯವರ ಆಗಮನದ ನಂತರ, ಮದೀನಾದ ಜನರು ಅವರನ್ನು ತಮ್ಮ ನಾಯಕನಾಗಿ ಸ್ವೀಕರಿಸಿದರು. ಅವರು ನಾಯಕರಾದ ತಕ್ಷಣ, ಪ್ರವಾದಿಯವರು ಮದೀನಾದ ವಿವಿಧ ಬುಡಕಟ್ಟುಗಳೊಂದಿಗೆ ಒಪ್ಪಂದ ಮಾಡಿಕೊಂಡರು. ಈ ಒಪ್ಪಂದವನ್ನು “ಮದೀನಾ ಸಂವಿಧಾನ” ಎಂದು ಪ್ರಸಿದ್ಧವಾಗಿ ಉಲ್ಲೇಖಿಸಲಾಗಿದೆ. ಈ ಒಪ್ಪಂದದ ಮೂಲಕ ಪ್ರವಾದಿಯವರು ಶತಮಾನಗಳಿಂದ ನಡೆಯುತ್ತಿದ್ದ ಅಂತ್ಯವಿಲ್ಲದ ಹೋರಾಟ ಮತ್ತು ದಬ್ಬಾಳಿಕೆಯನ್ನು ಯಶಸ್ವಿಯಾಗಿ ಕೊನೆಗಾಣಿಸಲು ಸಾಧ್ಯವಾಯಿತು.

    ಮದೀನಾ ಸಂವಿಧಾನದ ಷರತ್ತುಗಳನ್ನು ಸಮಾನತೆ, ನ್ಯಾಯ ಮತ್ತು ಧಾರ್ಮಿಕ ಸ್ವಾತಂತ್ರ್ಯದ ಮೇಲೆ ನಿರ್ಮಿಸಲಾಗಿದ್ದವು. ಒಪ್ಪಂದದಲ್ಲಿನ ಕೆಲವು ಪ್ರಮುಖ ಷರತ್ತುಗಳನ್ನು ನೋಡೋಣ.

    ಮದೀನಾ ಸಂವಿಧಾನದ ಷರತ್ತುಗಳು

    ಧಾರ್ಮಿಕ ಸ್ವಾತಂತ್ರ್ಯ ಮತ್ತು ಸದ್ಭಾವನೆಯ ಕುರಿತಿನ ಷರತ್ತುಗಳು

    ಯಹೂದಿಗಳನ್ನು ಮುಸ್ಲಿಮರೊಂದಿಗೆ ಒಂದು ಸಮುದಾಯವೆಂದು ಗುರುತಿಸಲಾಗಿದೆ. ಯಹೂದಿಗಳಿಗೆ ಅವರ ಧರ್ಮವನ್ನು ಆಚರಿಸುವ ಹಕ್ಕಿದೆ ಮತ್ತು ಮುಸ್ಲಿಮರಿಗೆ ಅವರ ಧರ್ಮವನ್ನು ಆಚರಿಸುವ ಹಕ್ಕಿದೆ.

    ಯಹೂದಿಗಳು ಮತ್ತು ಮುಸ್ಲಿಮರ ನಡುವೆ ಸದ್ಭಾವನೆ ಮತ್ತು ಪ್ರಾಮಾಣಿಕತೆ ಕಾಯ್ದಿರಬೇಕು.

    ಸಮಾನತೆಯ ಕುರಿತಿನ ಷರತ್ತುಗಳು

    ಯಹೂದಿಗಳು ಮುಸ್ಲಿಮರನ್ನು ಒಪ್ಪಂದಕ್ಕೆ ಕರೆದರೆ, ಮುಸ್ಲಿಮರು ಅದನ್ನು ಒಪ್ಪಿಕೊಳ್ಳುವರು ಮತ್ತು ಮುಸ್ಲಿಮರು ಯಹೂದಿಗಳನ್ನು ಒಪ್ಪಂದಕ್ಕೆ ಕರೆದರೆ, ಯಹೂದಿಗಳು ಅದನ್ನು ಒಪ್ಪಿಕೊಳ್ಳುವರು.

    ಈ ಒಪ್ಪಂದದ ಮೊದಲು, ಯಹೂದಿ ಬುಡಕಟ್ಟುಗಳ ನಡುವೆಯೂ ಅಸಮಾನತೆಯ ಪಿಡುಗು ಅತಿರೇಕದಲ್ಲಿತ್ತು. ಬನು ನಧೀರ್ ಮತ್ತು ಬನು ಖುರೈಜಾ ಎಂಬ ಎರಡು ಯಹೂದಿ ಬುಡಕಟ್ಟುಗಳ ಪ್ರಕರಣವನ್ನು ತೆಗೆದುಕೊಳ್ಳೋಣ. ಉದಾಹರಣೆಗೆ: ಬನು ನಧೀರ್‌ನ ವ್ಯಕ್ತಿಯು ಬನು ಖುರೆಜಾನ ವ್ಯಕ್ತಿಯನ್ನು ಕೊಂದರೆ, ಅವರು ಪರಿಹಾರ ಧನವನ್ನು ಮಾತ್ರ ನೀಡುತ್ತಿದ್ದರು. ಆದರೆ, ಅವರ ಬುಡಕಟ್ಟಿನ ಸದಸ್ಯನನ್ನು ಬನು ಖುರೈಜಾದಿಂದ ಯಾರಾದರೂ ಕೊಂದರೆ, ಅವರು ಪ್ರತಿಕಾರದಲ್ಲಿ ಕೊಲೆಗಾರನನ್ನು ಕೊಲ್ಲುತ್ತಿದ್ದರು.

    ಪ್ರವಾದಿಯ ಆಳ್ವಿಕೆಯಲ್ಲಿ, ಮದೀನಾ ಸಂವಿಧಾನ ಅಂತಹ ಅನ್ಯಾಯದ ಆಚರಣೆಗಳನ್ನು ಕೊನೆಗೊಳಿಸಿತು ಮತ್ತು ಯಹೂದಿ ಬುಡಕಟ್ಟುಗಳ ನಡುವೆ ಕೂಡ ಸಮಾನತೆಯನ್ನು ಸ್ಥಾಪಿಸಿತು.

    ನ್ಯಾಯದ ಕುರಿತಿನ ಷರತ್ತುಗಳು

    ಅನ್ಯಾಯವೆಸಗುವ ಅಥವಾ ಇತರರ ಹಕ್ಕು ಉಲ್ಲಂಘಿಸುವ ಅಥವಾ ದುಷ್ಟತನವನ್ನು ಉತ್ತೇಜಿಸುವವರು ಯಾರಾದರೂ, ಮುಸ್ಲಿಮರು ಅವರ ವಿರುದ್ಧ ನಿಲ್ಲುವರು. ಆ ವ್ಯಕ್ತಿ ಮುಸಲ್ಮಾನನಾಗಿದ್ದರೂ ಆ ವ್ಯಕ್ತಿಯ ವಿರುದ್ಧ ಎಲ್ಲರೂ ಒಂದಾಗುವರು.

    ಉದಾಹರಣೆಗೆ: ಒಬ್ಬ ಮುಸ್ಲಿಮನು ಮುಸ್ಲಿಮೇತರನಿಗೆ ಮೋಸ ಮಾಡಿದರೆ, ಇತರ ಎಲ್ಲಾ ಮುಸ್ಲಿಮರು ನ್ಯಾಯಕ್ಕಾಗಿ ನಿಲ್ಲುವರು ಮತ್ತು ಮೋಸಕ್ಕೊಳಗಾದ ಮುಸ್ಲಿಮೇತರನನ್ನು ಬೆಂಬಲಿಸುವರು.

    ಒಬ್ಬ ಕೊಲೆಗಾರನನ್ನು ಬೆಂಬಲಿಸಲಿಕ್ಕಾಗಲಿ ಅಥವಾ ಅವನಿಗೆ ಆಶ್ರಯ ನೀಡಲಿಕ್ಕಾಗಲಿ ಮುಸ್ಲಿಮರಿಗೆ ಅನುಮತಿಯಿಲ್ಲ.

    ಅನ್ಯಾಯವೆಸಗಿದ ವ್ಯಕ್ತಿ ಅಥವಾ ಒಪ್ಪಂದವನ್ನು ಉಲ್ಲಂಘಿಸುವವರನ್ನು ರಕ್ಷಿಸಲು ಈ ಒಪ್ಪಂದವು ಎಂದಿಗೂ ಮಧ್ಯಪ್ರವೇಶಿಸುವುದಿಲ್ಲ.

    ಮದೀನಾದ ಸಂವಿಧಾನ – ಇಂದಿಗೂ ಅನ್ವಯ

    ಪ್ರವಾದಿ ಮುಹಮ್ಮದ್ ಅವರು ಧಾರ್ಮಿಕ ಸ್ವಾತಂತ್ರ್ಯ, ಸಮಾನತೆ ಮತ್ತು ನ್ಯಾಯದ ಪ್ರಾಯೋಗಿಕ ಅನುಷ್ಠಾನವನ್ನು ಖಾತ್ರಿಪಡಿಸುವ ಈ ಒಪ್ಪಂದದ ಮೂಲಕ ಮದೀನಾದ ವಿವಿಧ ಬುಡಕಟ್ಟುಗಳ ನಡುವಿನ ಅಂತ್ಯವಿಲ್ಲದ ಹೋರಾಟ ಮತ್ತು ದಬ್ಬಾಳಿಕೆಯನ್ನು ಯಶಸ್ವಿಯಾಗಿ ಕೊನೆಗೊಳಿಸಿದರು.

    ನೀವೇ ನೋಡಬಹುದಾದಂತೆ, 1400 ವರ್ಷಗಳ ನಂತರವೂ, ವಿವಿಧ ಧರ್ಮ, ಜಾತಿ, ಸಂಸ್ಕೃತಿ ಮತ್ತು ಭಾಷೆಗಳ ಜನರಲ್ಲಿ ಸಮಾನತೆ, ಶಾಂತಿ ಮತ್ತು ಸೌಹಾರ್ದತೆಯನ್ನು ಸಾಧಿಸಲು “ಮದೀನಾ ಸಂವಿಧಾನ” ದ ತತ್ವಗಳು, ಭಾರತದಲ್ಲಿ ನಮಗೆ ಅತ್ಯಂತ ಸೂಕ್ತವಾಗಿವೆ.

    ನಿಸ್ಸಂದೇಹವಾಗಿ, ಧಾರ್ಮಿಕ ಸ್ವಾತಂತ್ರ್ಯ, ಸಮಾನತೆ ಮತ್ತು ನ್ಯಾಯದ ಉದಾತ್ತ ತತ್ವಗಳನ್ನು ಪ್ರಾಯೋಗಿಕವಾಗಿ ಅನುಷ್ಠಾನಗೊಳಿಸುವುದರಿಂದ, ನಾವೆಲ್ಲರೂ ಬಯಸುವ ಶಾಂತಿ, ಸಾಮರಸ್ಯ ಮತ್ತು ಪರಸ್ಪರ ಅರಿವನ್ನು ಸಾಧಿಸಲು ನಮಗೆ ಸಹಾಯವಾಗಲಿದೆ.

    ಏಕತೆಯೇ ಶಕ್ತಿ! ಜೈ ಹಿಂದ್!

    WHAT OTHERS ARE READING

    Most Popular