ಮುಸ್ಲಿಮರು ಭಾರದತ ಹಿಂದೂಗಳ ಅಸ್ತಿತ್ವಕ್ಕೆ ಬೆದರಿಕೆಯೊಡ್ಡಲಿದ್ದಾರೆ, ಎಂದು ಜನರ ಮಧ್ಯೆ ಗಾಳಿ ಮಾತನ್ನು ಕೆಲವರು ಹರಡಿಸುತ್ತಿದ್ದಾರೆ. ಆದರೆ ಇದು ಎಷ್ಟರ ಮಟ್ಟಿಗೆ ಸತ್ಯ?
ಒಂದು ಗಳಿಗೆ ನಿಮಗೆ ಮುಸ್ಲಿಮರ ಬಗ್ಗೆ ಹೇಳಲಾಗಿರುವ ಎಲ್ಲಾ ಮಾತುಗಳನ್ನು ಒಂದೆಡೆ ಇಟ್ಟು, ನಿಮ್ಮ ಸುತ್ತ ಮುತ್ತ ನೋಡಿ. ನಿಮ್ಮ ಅಕ್ಕ ಪಕ್ಕದಲ್ಲಿ ಅನೇಕ ಮುಸ್ಲಿಮರನ್ನು ಕಾಣುತ್ತೀರಿ. ಅವರು ನಿಮ್ಮ ನೆರೆ ಹೊರೆಯವರು, ಸ್ನೇಹಿತರು, ಶಾಲೆ ಕಾಲೇಜಿನಲ್ಲಿ ಸಹಪಾಠಿಗಳು, ಕೆಲಸದಲ್ಲಿ ಓರಗೆಯವರು ಇಲ್ಲವೇ ನಿಮ್ಮಿಂದ ಕೊಳ್ಳುವ ಅಥವಾ ಮಾರುವ ಸಂಬಂಧ ಇಟ್ಟುಕೊಂಡಿದ್ದಾರೆ.
ಈಗ ನಿಮ್ಮನ್ನು ನೀವು ಕೇಳಿಕೊಳ್ಳಿ: ಎಂದಾದರೂ ಅವರಿಂದ ನೀವು ಬೆದರಿಕೆ ಎದುರಿಸಿದ್ದೀರಾ? ಕೆಲಸ ಅಥವಾ ಶಾಲೆ, ಕಾಲೇಜಿನಲ್ಲಿ ಅವರು ನಿಮ್ಮ ವಿರುದ್ಧ ಬೇಧ ಭಾವ ತೋರಿದ್ದಾರ? ನಿಮ್ಮ ಅಂಗಡಿಯಿಂದ ಕೊಳ್ಳುವುದಾಗಲಿ, ನಿಮಗೆ ಮಾರುವುದಾಗಲಿ ಎಂದಾದರೂ ನಿಲ್ಲಿಸಿದ್ದಾರ? ಯಾರಾದರೂ ಮುಸ್ಲಿಮ್ ವೈದ್ಯ ನೀವು ಹಿಂದೂ ಎಂದು ಚಿಕಿತ್ಸೆ ಮಾಡುವುದರಿಂದ ಹಿಂದೆ ಸರಿದಿದ್ದಾರೆಯೇ? ನೀವು ಹಿಂದೂ ಎಂದು ಯಾರಾದರೂ ಮುಸ್ಲಿಮ್ ನಿಮ್ಮ ಮೇಲೆ ಹಲ್ಲೆ ಮಾಡಿದ್ದಾರೆಯೇ? ಯಾರಾದರೂ ಮುಸ್ಲಿಮ್ ನೀವು ದೇವಸ್ಥಾನಕ್ಕೆ ಹೋಗದಂತೆ ತಡೆದಿದ್ದಾರೆಯೇ? ಯಾರಾದರೂ ಮುಸ್ಲಿಮ್ ನಿಮಗೆ ಏನನ್ನಾದರೂ ತಿನ್ನಲು ಬಲವಂತ ಮಾಡಿದ್ದಾರೆಯೇ? ನಿಮಗಿಷ್ಟ ಇರುವುದನ್ನು ತಿನ್ನದಂತೆ ಯಾರಾದರೂ ಮುಸ್ಲಿಮ್ ತಡೆದಿದ್ದಾರೆಯೇ?
ಈ ಎಲ್ಲಾ ಪ್ರಶ್ನೆಗಳಿಗೆ ಪ್ರಾಮಾಣಿಕ ಉತ್ತರ – “ಇಲ್ಲ”. ಇತರೆ ಹಿಂದೂಗಳನ್ನು ಕೇಳಿದರೂ ಈ ಪ್ರಶ್ನೆಗಳಿಗೆ ಬರುವ ಉತ್ತರ “ಇಲ್ಲ” ಎಂದೇ!
ಸತ್ಯ ಏನೆಂದರೆ, ಪ್ರತಿ ಮುಸ್ಲಿಮ್ ತನ್ನ ಸುತ್ತಲಿರುವ ಹಿಂದೂಗಳಿಗೆ ಸ್ನೇಹಿತ, ನೆರೆ ಹೊರೆಯವನು ಇಲ್ಲವೇ ಸಹೋದ್ಯೋಗಿಯಾಗಿದ್ದು, ಶಾಂತಿ, ಸೌಹಾರ್ದತೆಯೊಂದಿಗೆ ಬದುಕುತ್ತಿದ್ದಾನೆ. ಹೀಗಿರುವಾಗ ಬೆದರಿಕೆಯ ಪ್ರಶ್ನೆ ಎಲ್ಲಿದೆ?
ಮುಸ್ಲಿಮರು ಬಹುಸಂಖ್ಯಾತರಾದರೂ ಹಿಂದೂಗಳಿಗಾಗಲಿ, ಹಿಂದೂ ಧರ್ಮಕ್ಕಾಗಲಿ ಯಾವುದೇ ಬೆದರಿಕೆ ಮೂಡುವುದಿಲ್ಲ. ಉದಾಹರಣೆಗೆ, ಮುಸ್ಲಿಮ್ ದೇಶವಾದ ಮಲೇಷಿಯಾದಲ್ಲಿ 61.3% ಮುಸ್ಲಿಮರು ಮತ್ತು 6.3% ಹಿಂದೂಗಳಿದ್ದಾರೆ. ಇಂಡೋನೇಷಿಯಾದಲ್ಲಿ 87.2% ಮುಸ್ಲಿಮರು ಮತ್ತು 1.7% ಹಿಂದೂಗಳಿದ್ದಾರೆ. ಮಲೇಷಿಯಾ ಮತ್ತು ಇಂಡೋನೇಷಿಯಾದಲ್ಲಿ ಮುಸ್ಲಿಮ್ ಮತ್ತು ಹಿಂದೂಗಳು ಶಾಂತಿ, ಸೌಹಾರ್ದತೆಯೊಂದಿಗೆ ಬದುಕುತ್ತಿದ್ದಾರೆ. ಪ್ರಪಂಚದ ಹಲವು ಅತ್ಯಂತ ಸುಂದರ ದೇವಸ್ಥಾನಗಳು ಇಲ್ಲೇ ಕಂಡು ಬರುತ್ತವೆ.
ಮುಸ್ಲಿಮ್ ಬಹುಸಂಖ್ಯಾತ ದೇಶಗಳಾದ ಮಲೇಷಿಯಾ ಮತ್ತು ಇಂಡೋನೇಷಿಯಾದಲ್ಲೇ ಹಿಂದೂಗಳಿಗೆ ಮತ್ತು ಹಿಂದೂ ಧರ್ಮಕ್ಕೆ ಯಾವುದೇ ಬೆದರಿಕೆಯೊಡ್ಡಿಲ್ಲದಿರುವಾಗ, ಭಾರತದಲ್ಲಿ ಅಲ್ಪಸಂಖ್ಯಾತರಾಗಿ ಬದುಕುತ್ತಿರುವ ಮುಸ್ಲಿಮರು (ಜನಸಂಖ್ಯೆಯ 14.2%) ಬಹುಸಂಖ್ಯಾತ ಹಿಂದೂಗಳಿಗೆ (ಜನಸಂಖ್ಯೆಯ 80%) ಬೆದರಿಕೆಯೊಡ್ಡಬಹುದೇ?
ನಮ್ಮ ದೇಶದ ಸ್ವಾತಂತ್ರ್ಯ ಹೋರಾಟದಲ್ಲಿ ಹಿಂದೂ, ಮುಸ್ಲಿಮ್ ಸೇರಿದಂತೆ ಸಾವಿರಾರು ಜನರು ಜೊತೆಗೆ ನಿಂತು ತಮ್ಮ ಪ್ರಾಣ ಬಲಿದಾನ ಮಾಡಿದಂತಹ ಅನೇಕ ಘಟನೆಗಳಿವೆ, ಎಂಬುದನ್ನು ನಾವು ಮರೆಯಬಾರದು.
ಯಾವ ಜನಾಂಗ ತನ್ನ ಗತಕಾಲವನ್ನು ಮರೆಯುವುದೋ ಅದಕ್ಕೆ ಯಾವ ಭವಿಷ್ಯವೂ ಇಲ್ಲ
ವಿನ್ಸ್ಟನ್ ಚರ್ಚಿಲ್
ನಾವು ಇಂದು ಅನುಭವಿಸುತ್ತಿರುವ ಸ್ವಾತಂತ್ರ್ಯ ನಮ್ಮ ಪೂರ್ವಿಕರು ಜೊತೆಗೆ ನಿಂತು ಮಾಡಿದ ನಿಸ್ವಾರ್ಥ ಬಲಿದಾನಗಳ ಪ್ರತಿಫಲವಾಗಿದೆ. “ರಾಷ್ಟ್ರೀಯತೆ” ಮತ್ತು “ರಾಷ್ಟ್ರಭಕ್ತಿ”ಯ ಭಾವನೆಗಳು ಹಿಂದೂ, ಮುಸ್ಲಿಮ್ ಆಗಿದ್ದ ನಮ್ಮ ಪೂರ್ವಿಕರನ್ನು ಒಟ್ಟುಗೂಡಿಸಿತು. ಹಾಗಾದರೆ ಅದು ಈಗೇಕೆ ಬದಲಾಗಬೇಕು?
ಒಗ್ಗಟೇ ಬಲ!!