More

    Choose Your Language

    ಮೊಗಲ್ ರಾಜರು ಮತ್ತು ಅವರ ಕೃತ್ಯಗಳು

    ಹಿಂದಿನ ಕಾಲದಲ್ಲಿ ಎಲ್ಲಾ ರಾಜರು, ಅವರ ನಂಬಿಕೆ ಏನೇ ಆಗಿದ್ದರೂ, ತಮ್ಮ ಆಳ್ವಿಕೆಯನ್ನು ರಕ್ಷಿಸುವ ಮತ್ತು ತಮ್ಮ ರಾಜ್ಯವನ್ನು ವಿಸ್ತರಿಸುವ ಸಾಮಾನ್ಯ ಗುರಿಯನ್ನು ಹೊಂದಿದ್ದರು. ಅವರು ಈ ಗುರಿಯನ್ನು ಸಾಧಿಸಲು ಸಹಾಯವಾಗುವ ಕೆಲಸಗಳನ್ನೇ ಮಾಡಿದರು. ನಾವು ಎಂದಿಗೂ ರಾಜರ ಕೃತ್ಯಗಳೊಂದಿಗೆ ಧರ್ಮವನ್ನು ಜೋಡಿಸಬಾರದು.

    ಮೊಗಲ್ ರಾಜರು ದೇವಸ್ಥಾನಗಳನ್ನು ಧ್ವಂಸ ಮಾಡಿದರು, ಹಿಂದೂಗಳನ್ನು ಹಿಂಸಿಸುತ್ತಿದ್ದರು ಮತ್ತು ಹಿಂದೂಗಳನ್ನು ಇಸ್ಲಾಂಗೆ ಮತಾಂತರಿಸಿದರು ಎಂದು ಹಲವರು ನಂಬುತ್ತಾರೆ. ಅವರು, ಈ ಕೃತ್ಯಗಳನ್ನು “ಇಸ್ಲಾಂ”ನ ಹೆಸರಿನಲ್ಲಿ ನಡೆಸಿದ್ದಾಗಿ ನಂಬುತ್ತಾರಷ್ಟೇ ಅಲ್ಲದೆ, ಕೆಲವರು ಇದೇ ಕಾರಣಕ್ಕಾಗಿ ಇಂದಿನ ಭಾರತೀಯ ಮುಸ್ಲಿಮರ ವಿರುದ್ಧ ದ್ವೇಷ ಕಾರುತ್ತಾರೆ. ಇಂದು ವಾಸಿಸುತ್ತಿರುವ ಭಾರತೀಯ ಮುಸ್ಲಿಮರು ಹಿಂದಿನ ಮೊಗಲ್ ಆಡಳಿತಗಾರರೊಂದಿಗೆ ಯಾವುದೇ ಸಂಬಂಧ ಹೊಂದಿಲ್ಲ ಎಂಬ ವಾಸ್ತವದ ಹೊರತಾಗಿಯೂ ಆಗಿದೆ. ಹಾಗಾದರೆ ಬನ್ನಿ ಈ ಎಲ್ಲಾ ಆರೋಪಗಳ ಹಿಂದಿನ ಸತ್ಯವನ್ನು ಕಂಡುಹಿಡಿಯೋಣ.

    ದೇವಾಲಯಗಳು ಮತ್ತು ಇತರ ಪೂಜಾ ಸ್ಥಳಗಳ ನಾಶವನ್ನು ಇಸ್ಲಾಂ ಕ್ಷಮಿಸುವುದಿಲ್ಲ

    ದೇವರು ಕುರಾನ್‌ನಲ್ಲಿ ಹೇಳುತ್ತಾನೆ:

    ದೇವರು ಕೆಲವು ಜನರನ್ನು ಇತರರ ಮೂಲಕ ಹಿಮ್ಮೆಟ್ಟಿಸದಿಲ್ಲವಾಗಿದ್ದರೆ, ದೇವರ ಹೆಸರನ್ನು ಹೆಚ್ಚು ಕರೆಯುವ ಅನೇಕ ಮಠಗಳು, ಚರ್ಚ್‌ಗಳು, ಸಿನಗಾಗ್‌ಗಳು ಮತ್ತು ಮಸೀದಿಗಳು ನಾಶವಾಗುತ್ತಿದ್ದವು. ದೇವರು ತನ್ನ ಉದ್ದೇಶಕ್ಕೆ ಸಹಾಯ ಮಾಡುವವರಿಗೆ ಖಂಡಿತವಾಗಿ ಸಹಾಯ ಮಾಡುತ್ತಾನೆ – ದೇವರು ಬಲಶಾಲಿ ಮತ್ತು ಶಕ್ತಿಶಾಲಿ

    ಕುರಾನ್ ಅಧ್ಯಾಯ 22 ಸೂಕ್ತಿ 40.

    ಮುಸ್ಲಿಮೇತರರ ಆರಾಧನಾ ಸ್ಥಳಗಳ ಮೇಲೆ ದಾಳಿ ಮಾಡಲು ಇಸ್ಲಾಂ ಮುಸ್ಲಿಮರಿಗೆ ಆಜ್ಞಾಪಿಸುವುದಿಲ್ಲ ಮತ್ತು ಮುಸ್ಲಿಮೇತರ ಪೂಜಾ ಸ್ಥಳಗಳ ಅಸ್ತಿತ್ವವನ್ನು ಇಸ್ಲಾಮಿ ದೇಶದಲ್ಲಿ ಸಹ ಅನುಮತಿಸಲಾಗಿದೆ ಎಂದು ಮೇಲಿನ ಸೂಕ್ತಿಯು ಸ್ಪಷ್ಟವಾಗಿ ತೋರಿಸುತ್ತದೆ. ಇಂಡೋನೇಷ್ಯಾ ಮತ್ತು ಮಲೇಷ್ಯಾ ಇದಕ್ಕೆ ಉತ್ತಮ ಉದಾಹರಣೆಯಾಗಿದೆ.

    ಹಾಗಾದರೆ ಮುಸ್ಲಿಂ ಆಡಳಿತಗಾರರು ಹಿಂದೂ ದೇವಾಲಯಗಳನ್ನು ಏಕೆ ಧ್ವಂಸ ಮಾಡಿದರು? ಸತ್ಯ ಮತ್ತು ಕಟ್ಟುಕತೆಗಳು

    ಹೆಸರಾಂತ ಇತಿಹಾಸಕಾರ ಮತ್ತು ಶಿಕ್ಷಣತಜ್ಞೆ ರೊಮಿಲಾ ಥಾಪರ್ ಹೇಳುತ್ತಾರೆ “ದೇವಾಲಯವನ್ನು ಧ್ವಂಸ ಮಾಡುವುದು ಆಕ್ರಮಣಕಾರರ ಶಕ್ತಿಯ ಪ್ರದರ್ಶನವಾಗಿತ್ತು, ಅವರು ಮುಸ್ಲಿಮ್ ಅಥವಾ ಹಿಂದೂ ಎಂದು ಪರಿಗಣಿಸದೆ, ದೇವಾಲಯಗಳ ಸಂಪತ್ತನ್ನು ಗಳಿಸಲು ಹರ್ಷದೇವ ಮತ್ತು ಕಾಶ್ಮೀರದ ಇತರ ರಾಜರು ಉದ್ದೇಶಪೂರ್ವಕವಾಗಿ ಮಾಡಿದಂತೆ ಅಥವಾ ಸೋತವರು ನಿರ್ಮಿಸಿದ ದೇವಾಲಯಗಳನ್ನು ಧ್ವಂಸಗೊಳಿಸಿದ, ವಿಜಯಶಾಲಿ ಅಭಿಯಾನದ ಭಾಗವಾಗಿ ಚಾಳುಕ್ಯ ಪರಮರರಾಜನಂತೆ ದೇವಾಲಯಗಳನ್ನು ನಾಶಪಡಿಸಿದ ಹಿಂದೂ ರಾಜರಿದ್ದಾರೆ ಎಂಬುದನ್ನು ನಾವು ಮರೆಯಬಾರದು.” ನೋಡಿ: “The past as present” ಪುಸ್ತಕ, “ಇತಿಹಾಸದ ರಕ್ಷಣೆಯಲ್ಲಿ” ಅಧ್ಯಾಯ.

    ಮುಸ್ಲಿಂ ಆಡಳಿತಗಾರರು ಮತ್ತು ಇಸ್ಲಾಂನ ಕ್ರಮಗಳು

    ಮುಸ್ಲಿಂ ಆಡಳಿತಗಾರರ ಕ್ರಮಗಳನ್ನು ಇಸ್ಲಾಂಗೆ ಜೋಡಿಸುವುದು ಸರಿಯೇ? ಖಂಡಿತ “ಇಲ್ಲ” ಏಕೆಂದರೆ:

    1. ಇಸ್ಲಾಂ ಧರ್ಮದ 5 ಕಡ್ಡಾಯ ಸ್ತಂಭಗಳಲ್ಲಿ ಒಂದಾದ ಹಜ್ಜ್ ಅನ್ನು ಒಬ್ಬ ಮುಸ್ಲಿಂ ಆಡಳಿತಗಾರನೂ ಕೈಗೊಳ್ಳಲಿಲ್ಲ. ತಮ್ಮ ನಂಬಿಕೆಯ ಕಡ್ಡಾಯ ಹೊಣೆಗಾರಿಕೆಯನ್ನು ಪೂರೈಸಲು ತಲೆಕೆಡಿಸಿಕೊಳ್ಳದ ಆಡಳಿತಗಾರರಿಗೆ ಇಸ್ಲಾಮಿ ಬಣ್ಣ ಬಳಿಯುವುದು ಹಾಸ್ಯಾಸ್ಪದವಾಗಿದೆ. ಆದ್ದರಿಂದ, ಮುಸ್ಲಿಂ ಆಡಳಿತಗಾರರ ಕ್ರಮಗಳನ್ನು ಇಸ್ಲಾಂಗೆ ಜೋಡಿಸುವುದು ಸರಿಯಲ್ಲ.
    2. ನಾವು ಮುಸ್ಲಿಂ ಆಡಳಿತಗಾರರನ್ನು ಕೇವಲ ಮುಸ್ಲಿಂ ನಂಬಿಕೆಗೆ ಸೇರಿದ ರಾಜರಂತೆ ನೋಡಬೇಕು. ಅವರ ವರ್ತನೆ ಮತ್ತು ಮನೋಧರ್ಮವು ಇತರ ನಂಬಿಕೆಗಳ ರಾಜರಂತೆಯೇ, ಅವರ ಪ್ರದೇಶವನ್ನು ವಿಸ್ತರಿಸುವುದು ಮತ್ತು ಐಷಾರಾಮಿ ಜೀವನವನ್ನು ನಡೆಸುವುದಾಗಿತ್ತು.

    ಮುಸ್ಲಿಮೇತರ ರಾಜರ ಕ್ರಮಗಳು

    ಅನೇಕ ಮುಸ್ಲಿಮೇತರ ರಾಜರು ಕ್ರೂರರಾಗಿದ್ದರು ಮತ್ತು ಮುಗ್ಧ ಜನರ ಮೇಲೆ ದೌರ್ಜನ್ಯ ಎಸಗಿದ್ದಾರೆ ಎಂದು ಇತಿಹಾಸ ತೋರಿಸುತ್ತದೆ. ರಾಜ ಅಜಾತಶತ್ರು ಸಿಂಹಾಸನವನ್ನು ಪಡೆಯಲು ತನ್ನ ಸ್ವಂತ ತಂದೆಯನ್ನು ಬಂಧಿಸಿದನು ಮತ್ತು ನಂತರ ಅವನು ತನ್ನ ಮಗ ಉದಯಭದ್ರನಿಂದ ಕೊಲ್ಲಲ್ಪಟ್ಟನು. ಮಹಾಪದ್ಮ ನಂದ ಸಿಂಹಾಸನವನ್ನು ಪಡೆಯಲು ತನ್ನ ಸಹೋದರರನ್ನು ಕೊಂದು ನಂದ ರಾಜವಂಶವನ್ನು ಪ್ರಾರಂಭಿಸಿದನು. ನೀವು ಈ ಕೃತ್ಯಗಳನ್ನು ಹಿಂದೂ ನಂಬಿಕೆಯ ಹೆಸರಿನಲ್ಲಿ ಎಂದು ಹೇಳುವಿರಾ?

    ಕೆಲವು ಶೈವ ಚೋಳ ರಾಜರು ವೈಷ್ಣವರನ್ನು ಹಿಂಸಿಸಿದರು. ನೀವು ಈ ಕೃತ್ಯಗಳನ್ನು ಶೈವ ತತ್ತ್ವಶಾಸ್ತ್ರಕ್ಕೆ ಜೋಡಿಸಿ, ಇಂದಿನ ಶೈವ ಧರ್ಮೀಯರನ್ನು ದೂಷಿಸುವಿರಾ?

    ಹಾಗಾದರೆ ನೀವು ಹಿಂದೂ ರಾಜರ ಕಾರ್ಯಗಳನ್ನು ನೋಡುವ ರೀತಿಯಲ್ಲಿ ಮುಸ್ಲಿಂ ರಾಜರ ಕೃತ್ಯಗಳನ್ನು ಏಕೆ ನೋಡುವುದಿಲ್ಲ?

    ಹಿಂದೂ ರಾಜರು ದೇವಾಲಯಗಳ ಮೇಲೆ ದಾಳಿ ಮಾಡಿ, ವಿಗ್ರಹಗಳನ್ನು ಅಪಹರಿಸಿದ್ದರು ಎಂದು ತಿಳಿದರೆ ನಿಮಗೆ ಆಶ್ಚರ್ಯವಾಗುತ್ತದೆ.

    ರಾಜರು ಮತ್ತು ಯುದ್ಧಗಳು

    ಮುಸ್ಲಿಂ ರಾಜರು ಮತ್ತು ಹಿಂದೂ ರಾಜರ ನಡುವಿನ ಕದನಗಳಿಗೆ ಕೆಲವರು “ಇಸ್ಲಾಮಿ ಬಣ್ಣ” ಬಳಿಯುತ್ತಾರೆ. ನಿಜವೆಂದರೆ, ರಾಜರು ತಮ್ಮ ಪ್ರದೇಶವನ್ನು ವಿಸ್ತರಿಸಲು ಮತ್ತು ಅದನ್ನು ರಕ್ಷಿಸಲು ಯುದ್ಧಗಳನ್ನು ಕೈಗೊಂಡಿದ್ದರು. ಹಿಂದೂ ಮತ್ತು ಮುಸ್ಲಿಂ ರಾಜರು ಇದಕ್ಕೆ ಹೊರತಾಗಿರಲಿಲ್ಲ. ಹಿಂದೂ ರಾಜರು ಇತರ ಹಿಂದೂ ರಾಜರೊಂದಿಗೆ ಹೋರಾಡಿದರು. ಉದಾಹರಣೆ: ಚೋಳರು, ಪಾಂಡ್ಯರು ಮತ್ತು ಚೇರರ ನಡುವಿನ ಯುದ್ಧಗಳನ್ನು ಉತ್ತಮವಾಗಿ ದಾಖಲಿಸಲಾಗಿದೆ. ಮರಾಠರು ಗುಜರಾತ್ ಅನ್ನು ವಶಪಡಿಸಿಕೊಂಡರು ಮತ್ತು ಬರೋಡಾದ ಮೇಲೆ ಇಂದಿಗೂ ಪ್ರಭಾವ ಹೊಂದಿದ್ದಾರೆ. ಅಶೋಕನು ಕಳಿಂಗದ ದೊರೆಯನ್ನು ಕೊಂದು ಸಾವಿರಾರು ಒರಿಯಾ ಜನರನ್ನು ಕೊಂದನು. ಈ ಪಟ್ಟಿಗೆ ಅಂತ್ಯವಿಲ್ಲ. ಹಿಂದೂ ರಾಜರು ಈ ಯುದ್ಧಗಳನ್ನು ಮಾಡಿದ್ದು ಹಿಂದೂ ಧರ್ಮಕ್ಕಾಗಿಯೋ ಅಥವಾ ತಮ್ಮ ರಾಜ್ಯವನ್ನು ವಿಸ್ತರಿಸಲೋ? ಹಿಂದೂ ರಾಜರ ನಡುವಿನ ಯುದ್ಧಗಳೊಂದಿಗೆ ಹಿಂದೂ ಧರ್ಮವನ್ನು ಜೋಡಿಸುವಿರಾ?

    ಮುಸ್ಲಿಂ ರಾಜರು ಮತ್ತು “ಭಾರತ”ದ ಮೇಲಿನ ದಾಳಿ

    ಮುಸ್ಲಿಂ ರಾಜರು “ಭಾರತ”ವನ್ನು ಆಕ್ರಮಿಸಿ ಲೂಟಿ ಮಾಡಿದರು ಎಂಬ ಆರೋಪವಿದೆ. ಈ ಹೇಳಿಕೆಯು ತುಂಬಾ ತಪ್ಪುದಾರಿಗೆಳೆಯುವಂತದ್ದು ಮತ್ತು ಮೋಸಭರಿತವಾಗಿದೆ, ಏಕೆಂದರೆ ಆ ಕಾಲದಲ್ಲಿ “ಭಾರತ” ಎಂಬುದಕ್ಕೆ ಆಸ್ತಿತ್ವವಿರಲಿಲ್ಲ. ಇಂದಿನ ಭಾರತ ಏನಾಗಿದೆಯೋ ಅದು ಹಿಂದೆ, ಯಾವಾಗಲೂ ಪರಸ್ಪರ ಹೋರಾಡುವ ವಿಭಿನ್ನ ರಾಜರಿಂದ ಆಳಲ್ಪಟ್ಟ ವಿವಿಧ ರಾಜ್ಯಗಳಾಗಿ ವಿಭಜಿಸಲ್ಪಟ್ಟಿದ್ದವು. ಮುಸ್ಲಿಂ ಆಡಳಿತಗಾರರ ಆಕ್ರಮಣಗಳು ಆ ರಾಜ್ಯಗಳ ಮೇಲೆಯೇ ಹೊರತು ಭಾರತದ ಮೇಲಲ್ಲ.

    ಹಿಂದೂ ರಾಜರು ಪರದೇಶವನ್ನು ಆಕ್ರಮಿಸಿದರೇ?

    ಅನೇಕ ಹಿಂದೂ ರಾಜರು, ಇಂದು ನಾವು ಭಾರತ ಎಂದು ಕರೆಯುವ ಸಹದ್ದಿನ ಆಚೆಯ ವಿದೇಶಿ ಭೂಮಿಯನ್ನು ಆಕ್ರಮಿಸಿದ್ದರು. ಚೋಳ ರಾಜವಂಶದ ರಾಜೇಂದ್ರ ಚೋಳ ವಿಶೇಷ ಉಲ್ಲೇಖಕ್ಕೆ ಅರ್ಹನಾದ ಒಬ್ಬ ರಾಜ. ಅವನು ಇಂದಿನ ಶ್ರೀಲಂಕಾ, ಮಲೇಷ್ಯಾ ಮತ್ತು ಇಂಡೋನೇಷ್ಯಾವನ್ನು ಯಶಸ್ವಿಯಾಗಿ ಆಕ್ರಮಿಸಿದ್ದನು. ಮಲೇಷ್ಯಾ ಮತ್ತು ಇಂಡೋನೇಷ್ಯಾದಲ್ಲಿ ದೇವಾಲಯಗಳು ಎಲ್ಲಿಂದ ಬಂದವು ಎಂಬುದನ್ನು ನೀವು ಈಗ ಅರ್ಥಮಾಡಿಕೊಳ್ಳಬಹುದು.

    ರಾಜೇಂದ್ರ ಚೋಳನ ಸಾಮ್ರಾಜ್ಯವು ಮಲೇಷ್ಯಾ ಮತ್ತು ಇಂಡೋನೇಷ್ಯಾವರೆಗೂ ವಿಸ್ತರಿಸಿತ್ತು

    ವಿದೇಶಗಳ ಮೇಲೆ ರಾಜೇಂದ್ರ ಚೋಳನ ಆಕ್ರಮಣವನ್ನು ಹಿಂದೂ ಧರ್ಮದ ಕಾರಣದಿಂದ ಎಂದು ನೀವು ಹೇಳುವಿರಾ? ಇಲ್ಲದಿದ್ದರೆ, ಮುಸ್ಲಿಂ ಆಡಳಿತಗಾರರ ಆಕ್ರಮಣವನ್ನು ಇಸ್ಲಾಂಗೆ ಹೇಗೆ ಹೇರಬಹುದು?

    ಮುಸ್ಲಿಂ ಆಡಳಿತಗಾರರು ಹಿಂದೂಗಳನ್ನು ಬಲವಂತವಾಗಿ ಇಸ್ಲಾಂಗೆ ಮತಾಂತರಿಸಿದರೇ?

    ಮುಸ್ಲಿಮ್ ದೊರೆಗಳು ಇಸ್ಲಾಂ ಧರ್ಮವನ್ನು ಪ್ರೀತಿಸಿ ಆಚರಣೆಗೆ ತರುವ ಪ್ರಯತ್ನದೊಂದಿಗೆ ಹಿಂದೂಗಳು ಮುಸ್ಲಿಮರಾಗ ಬೇಕೆಂದು ಆಶಿಸಿದ್ದರೇ? ಖಂಡಿತ ಇಲ್ಲ, ಏಕೆಂದರೆ ಒಬ್ಬ ಮುಸ್ಲಿಂ ಆಡಳಿತಗಾರನೂ ಇಸ್ಲಾಂ ಧರ್ಮದ ಕಡ್ಡಾಯ ಸ್ತಂಭವಾದ ಹಜ್ ಅನ್ನು ನಿರ್ವಹಿಸಲಿಲ್ಲ. ಅವರು ಧರ್ಮದ ಬಗ್ಗೆ ಕನಿಷ್ಠ ಮಟ್ಟಿಗೂ ತಲೆಕೆಡಿಸಿಕೊಂಡಿರಲಿಲ್ಲ ಮತ್ತು ರಾಜರ “ಜೀವನ” ದಲ್ಲಿ ನಿರತರಾಗಿದ್ದರು ಎಂದು ಇದು ತೋರಿಸುತ್ತದೆ. ಈ ರಾಜರು ದೇಶದಲ್ಲಿ ಇಸ್ಲಾಂ ಧರ್ಮವನ್ನು ಹರಡಲು ಏಕೆ ಆಸಕ್ತಿ ವಹಿಸುವರು? ಇಸ್ಲಾಂ ಧರ್ಮದ ಕಡ್ಡಾಯ ಸ್ತಂಭವನ್ನು ಪೂರೈಸಲು ಕಾಳಜಿ ವಹಿಸದ ಮುಸ್ಲಿಂ ಆಡಳಿತಗಾರರು, ಇಸ್ಲಾಂ ಧರ್ಮದ ಕಾಲಜಿಯಿಂದಾಗಿ ಇಸ್ಲಾಂ ಧರ್ಮವನ್ನು ಹರಡಲು ಆಸಕ್ತಿ ಹೊಂದಿದ್ದರು ಎಂದು ಹೇಳುವುದು ಹಾಸ್ಯಾಸ್ಪದವಾಗಿದೆ.

    ಮುಸ್ಲಿಂ ಆಡಳಿತಗಾರರು ಸುಮಾರು 800 ವರ್ಷಗಳ ಕಾಲ (8 ಶತಮಾನಗಳು) ಭಾರತವನ್ನು ಆಳಿದರು. 800 ವರ್ಷಗಳು ಬಹಳ ದೀರ್ಘ ಅವಧಿ. ಈ ಮುಂದಿನ ವಾಕ್ಯವನ್ನು ಓದುವಾಗ ಇದನ್ನು ನೆನಪಿನಲ್ಲಿಡಿ. 800 ವರ್ಷಗಳ ಆಡಳಿತದುದ್ದಕ್ಕೂ ಪ್ರತಿಯೊಬ್ಬ ಮುಸ್ಲಿಂ ಆಡಳಿತಗಾರನೂ ಕತ್ತಿಯ ಭಯದೊಂದಿಗೆ ಹಿಂದೂಗಳನ್ನು ಇಸ್ಲಾಂಗೆ ಮತಾಂತರಿಸಲು ಪ್ರಯತ್ನಿಸಿದ್ದರೆ, ಈ ದೇಶದಲ್ಲಿ 80% ಹಿಂದೂಗಳು ಉಳಿದಿರುತ್ತಿದ್ದರು ಎಂದು ನೀವು ಭಾವಿಸುವಿರಾ? ಖಂಡಿತ ಇಲ್ಲ.

    ಇದಲ್ಲದೆ, ಮುಸ್ಲಿಂ ಆಡಳಿತಗಾರರ ಆಳ್ವಿಕೆಯಲ್ಲಿ ಕೂಡ ಹಿಂದೂಗಳು ಬಹುಸಂಖ್ಯಾತ ಸಮುದಾಯವಾಗಿದ್ದರು. ಒಂದು ದೇಶವನ್ನು ಶಾಂತಿಯುತವಾಗಿ ಮತ್ತು 800 ವರ್ಷಗಳ ದೀರ್ಘಾವಧಿಯವರೆಗೆ ಆಳಲು, ನೀವು ಬಹುಸಂಖ್ಯಾತ ಸಮುದಾಯದ ಅಭಿಮಾನ, ವಿಶ್ವಾಸ ಮತ್ತು ಸಹಕಾರವನ್ನು ಗಳಿಸಬೇಕು ಎಂದು ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ. ಇಂದಿನಂತೆ ಯಾವುದೇ ಯುದ್ಧ ತಂತ್ರಜ್ಞಾನ ಇರಲಿಲ್ಲ ಮತ್ತು ಸೈನ್ಯದ ಬಲವು ಕೇವಲ ಸೈನಿಕರ ಸಂಖ್ಯೆಯಲ್ಲಿ ಮಾತ್ರವಿತ್ತು. ಸೇನೆಯಲ್ಲಿದ್ದ ಹೆಚ್ಚಿನ ಸೈನಿಕರು ಹಿಂದೂ ನಂಬಿಕೆಯಿಂದ ಬಂದವರು ಎಂದು ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ. ಮುಸ್ಲಿಂ ರಾಜರು ಕತ್ತಿ ಮಸೆಯುತ್ತಾ ಹಿಂದೂಗಳನ್ನು ಇಸ್ಲಾಂಗೆ ಮತಾಂತರಿಸಿದರೆ ಸೇನೆಯಲ್ಲಿ ಬಹುಸಂಖ್ಯಾತರಾಗಿದ್ದ ಹಿಂದೂ ಸೈನಿಕರು ಸುಮ್ಮನಿರುತ್ತಿದ್ದರು ಎಂದು ನಿಮಗನ್ನಿಸುತ್ತಿದೆಯೇ? ನಿಮ್ಮದೇ ಸೈನ್ಯದಲ್ಲಿ ಶತ್ರುಗಳನ್ನು ಸೃಷ್ಟಿಸಿ ದೇಶವನ್ನು ಹೇಗೆ ಆಳಬಹುದು? ಯಾವುದೇ ಪಕ್ಷಪಾತವಿಲ್ಲದ ಮನಸ್ಸಿಗೆ ಈಗ ಸ್ಪಷ್ಟವಾಗಿರಬೇಕು, ಕತ್ತಿಯ ಮೊನೆಯಲ್ಲಿ ಹಿಂದೂಗಳನ್ನು ಇಸ್ಲಾಂಗೆ ಮತಾಂತರಿಸಿದರು ಎನ್ನುವುದು ಕೇವಲ ಒಂದು ಕಟ್ಟುಕಥೆ.

    ಸಾರಾಂಶ

    ಎಲ್ಲಾ ರಾಜರು, ಅವರ ನಂಬಿಕೆ ಏನೇ ಆಗಿದ್ದರೂ, ತಮ್ಮ ಆಳ್ವಿಕೆಯನ್ನು ರಕ್ಷಿಸುವ ಮತ್ತು ತಮ್ಮ ರಾಜ್ಯವನ್ನು ವಿಸ್ತರಿಸುವ ಸಾಮಾನ್ಯ ಗುರಿಯನ್ನು ಹೊಂದಿದ್ದರು. ಅವರು ಈ ಗುರಿಯನ್ನು ಸಾಧಿಸಲು ಸಹಾಯ ಮಾಡುವ ಕೆಲಸಗಳನ್ನು ಕೈಗೊಂಡಿದ್ದರು. ನಾವು ಎಂದಿಗೂ ರಾಜರ ಕೃತ್ಯೆಗಳೊಂದಿಗೆ ಧರ್ಮವನ್ನು ಜೋಡಿಸಬಾರದು. ನಾವು 21 ನೇ ಶತಮಾನದಲ್ಲಿದ್ದೇವೆ ಮತ್ತು ಇಂದು ಜಾತೀಯತೆ, ಬಡತನ, ಹಣದುಬ್ಬರ, ಶ್ರೀಮಂತ ಮತ್ತು ಬಡವರ ನಡುವಿನ ಹೆಚ್ಚುತ್ತಿರುವ ಅಂತರ ಇತ್ಯಾದಿ ಸವಾಲುಗಳನ್ನು ಎದುರಿಸುತ್ತಿದ್ದೇವೆ. ನೂರಾರು ವರ್ಷಗಳ ಹಿಂದೆ ಏನಾಯಿತು ಎಂಬುದರ ಕುರಿತು ಮಾತನಾಡುವುದಕ್ಕಿಂತ ಈ ಸಮಸ್ಯೆಗಳ ಬಗ್ಗೆ ಮಾತನಾಡುವುದು ಹೆಚ್ಚು ಅರ್ಥಪೂರ್ಣವಾದದ್ದು ಎಂದು ನೀವೂ ಒಪ್ಪುವಿರಿ ಎಂದು ನಾವು ಭಾವಿಸುತ್ತೇವೆ.


    ನಿಮಗೆ ಇಷ್ಟವಾಗ ಬಹುದಾದಂತಹ ಲೇಖನಗಳು

    WHAT OTHERS ARE READING

    Most Popular