More

  Choose Your Language

  ಮುಸ್ಲಿಮರಿಗೆ ಮುಸ್ಲಿಮೇತರ ಸ್ನೇಹಿತರಿರುವುದರ ಬಗ್ಗೆ ಕುರಾನ್ ಏನು ಹೇಳುತ್ತದೆ?

  ಮುಸ್ಲಿಮರು ನ್ಯಾಯಪರರಾಗಿ, ಮುಸ್ಲಿಮೇತರರೊಂದಿಗೆ ಅತ್ಯುತ್ತಮವಾಗಿ ನಡೆದುಕೊಳ್ಳುವುದನ್ನು ದೇವರು ತಡೆಯುವುದಿಲ್ಲ. ಪ್ರವಾದಿ ಮುಹಮ್ಮದರು ಮುಸ್ಲಿಮರಿಗೆ ತಮ್ಮ ನೆರೆ ಹೊರೆಯವರೊಂದಿಗೆ ಉತ್ತಮ ರೀತಿಯಲ್ಲಿ ನಡೆದುಕೊಳ್ಳುವಂತೆ ಆಜ್ಞಾಪಿಸಿದ್ದಾರೆ – ನೆರೆ ಹೊರೆಯವರಲ್ಲಿ ಎಲ್ಲಾ ಧರ್ಮದವರು ಸೇರುತ್ತಾರೆ.

  ಈ ವಿಷಯಕ್ಕೆ ಸಂಬಂಧಪಟ್ಟಂತೆ ಕುರಾನಿನಲ್ಲಿ ಬಹಳಷ್ಟು ಸೂಕ್ತಿಗಳಿವೆ, ಅವುಗಳಲ್ಲಿ ಕೆಲವು – 3:28, 3:118 4:144, 5:51 ಮತ್ತು 58:22. ಈ ಸೂಕ್ತಿಗಳನ್ನು ಇಸ್ಲಾಮಿ ನಂಬಿಕೆಯ ಮೂಲ ಮತ್ತು ಇಸ್ಲಾಮಿ ಕಾನೂನಿನ ತಳಹದಿಯಾದ ಕುರಾನ್ ಮತ್ತು ಪ್ರವಾದಿ ಮುಹಮ್ಮದರ (ಅವರ ಮೇಲೆ ಶಾಂತಿ ಇರಲಿ) ಹೇಳಿಕೆಗಳ ಬೆಳಕಿನಲ್ಲಿ ವಿಶ್ಲೇಷಿಸಬೇಕು.

  ಕುರಾನಿನ 3:28, 4:144 ಮತ್ತು 5:51 ಸೂಕ್ತಿಗಳ ವಿಶ್ಲೇಷಣೆ

  ಸತ್ಯವಿಶ್ವಾಸಿಗಳು ಸತ್ಯವಿಶ್ವಾಸಿಗಳನ್ನಲ್ಲದೆ ಸತ್ಯನಿಷೇಧಿಗಳನ್ನು ಅವ್ಲಿಯಾ ಆಗಿ ಮಾಡದಿರಲಿ. ಯಾರಾದರೂ ಹಾಗೆ ಮಾಡಿದರೆ ಅವರಿಗೆ ಅಲ್ಲಾಹನೊಂದಿಗೆ ಯಾವ ಸಂಬಂಧವೂ ಇರಲಾರದು. ಆದರೆ ನೀವು ಅವರೊಂದಿಗೆ ಎಚ್ಚರದಿಂದ ವರ್ತಿಸುವುದರ ಹೊರತು. ಅಲ್ಲಾಹನು ತನ್ನ ಬಗ್ಗೆ ನಿಮ್ಮನ್ನು ಎಚ್ಚರಿಸುತ್ತಿರುವನು. ನಿಮ್ಮ ಮರಳುವಿಕೆ ಅಲ್ಲಾಹನ ಬಳಿಗೇ ಆಗಿದೆ

  ಕುರಾನ್ ಅಧ್ಯಾಯ 3: ಸೂಕ್ತಿ 28

  ಓ ಸತ್ಯವಿಶ್ವಾಸಿಗಳೇ! ನೀವು ಸತ್ಯವಿಶ್ವಾಸಿಗಳನ್ನಲ್ಲದೆ ಸತ್ಯನಿಷೇಧಿಗಳನ್ನು ಅವ್ಲಿಯಾ ಆಗಿ ಮಾಡಿಕೊಳ್ಳದಿರಿ. ನಿಮ್ಮ ವಿರುದ್ಧ ಅಲ್ಲಾಹನಿಗೆ ಸ್ಪಷ್ಟ ಪುರಾವೆಯನ್ನು ಮಾಡಿಕೊಡಲು ನೀವು ಇಚ್ಛಿಸುವಿರಾ?

  ಕುರಾನ್ ಅಧ್ಯಾಯ 4: ಸೂಕ್ತಿ 144

  ಓ ಸತ್ಯವಿಶ್ವಾಸಿಗಳೇ! ಯಹೂದರನ್ನು ಮತ್ತು ಕ್ರೈಸ್ತರನ್ನು ನೀವು ಅವ್ಲಿಯಾ ಆಗಿ ಮಾಡದಿರಿ. ಅವರು ಪರಸ್ಪರ ಆಪ್ತ ಮಿತ್ರರಾಗಿರುವರು. ನಿಮ್ಮ ಪೈಕಿ ಯಾರು ಅವರನ್ನು ಆಪ್ತ ಮಿತ್ರರಾಗಿ ಮಾಡಿಕೊಳ್ಳುವರೋ ಅವರು ಕೂಡ ಅವರೊಂದಿಗೇ ಸೇರಿದವರಾಗುವರು. ಖಂಡಿತವಾಗಿಯೂ ಆಕ್ರಮಿಗಳಾದ ಜನರನ್ನು ಅಲ್ಲಾಹನು ಸನ್ಮಾರ್ಗಕ್ಕೆ ಸೇರಿಸನು.

  ಕುರಾನ್ ಅಧ್ಯಾಯ 5: ಸೂಕ್ತಿ 51

  ಈ ಮೇಲಿನ ಸೂಕ್ತಿಗಳ ಭಾಷಾಧ್ಯಯನ ಮೂಲದ (linguistic) ವಿಶ್ಲೇಷಣೆ

  ಈ ಮೇಲಿನ ಸೂಕ್ತಿಗಳಲ್ಲಿ ಉಪಯೋಗಿಸಿರುವ ಅರಬಿ ಪದ “ಅವ್ಲಿಯಾ” – ಇದನ್ನು ಹಲವು ಅನುವಾದಕರು “ಸ್ನೇಹಿತರು” ಎಂದು ಅನುವಾದಿಸಿದ್ದಾರೆ. “ಅವ್ಲಿಯಾ” ಎನ್ನುವುದು, ಅರಬಿ ಭಾಷೆಯ ಪದ “ವಲಿ”ಯ ಬಹುವಚನ ಹಾಗು ಅದಕ್ಕೆ ಸ್ನೇಹಿತ, ರಕ್ಷಕ, ಮಿತ್ರ, ಸಹಾಯಕ ಮುಂತಾದ ಅರ್ಥಗಳಿವೆ.

  ಯಾವುದೇ ಪದಕ್ಕೆ ಒಂದಕ್ಕಿಂತ ಹೆಚ್ಚು ಅರ್ಥವಿರುವಾಗ, ಸನ್ನಿವೇಶಕ್ಕೆ ತಕ್ಕಂತೆ ಅರ್ಥವನ್ನು ಆಯ್ಕೆ ಮಾಡಬೇಕು. ಇದು ಯಾವುದೇ ಭಾಷೆಯಾದರೂ ಅನ್ವಯಿಸುತ್ತದೆ.

  ಉದಾಹಣೆಗೆ ಇಂಗ್ಲೀಷ್ ಪದ “beat” ಪರಿಗಣಿಸಿದರೆ, ಅದಕ್ಕೆ ಬಹಳಷ್ಟು ಅರ್ಥಗಳಿವೆ, ಒಂದು ಸಾಮಾನ್ಯ ಅರ್ಥವೆಂದರೆ “ನೋವಾಗುವಂತೆ ಪದೇ ಪದೇ ಹೊಡೆಯುವುದು” ಎಂದಾಗುತ್ತದೆ. ಆದರೆ, “beat” ಪದದ ಅರ್ಥ ಸನ್ನಿವೇಶದ ಮೇಲೆ ಅನ್ವಯಿಸುತ್ತದೆ.

  ಉದಾಹರಣೆಗೆ, ನೀವು “ರೋಜರ್ ಫೆಡೆರರ್ ನಡಾಲರನ್ನು ವಿಂಬಲ್ಡನ್ ಫೈನಲ್ಲಿನಲ್ಲಿ “beat” ಮಾಡಿದ್ದಾರೆಂದು ಓದಿದಾಗ ಏನೆಂದು ತಿಳಿಯುವಿರಿ? ಫೆಡೆರರ್ ನಡಾಲರನ್ನು ನೋವಾಗುವಂತೆ ಪದೇ ಪದೇ ಹೊಡೆದರು ಎಂದೋ ಅಥವಾ ಫೈನಲ್ ಪಂದ್ಯವೊಂದರಲ್ಲಿ ಫೆಡೆರರ್ ನಡಾಲರನ್ನು ಸೋಲಿಸಿದರು ಎಂದೋ? ಖಂಡಿತವಾಗಿಯೂ ನಾವು ಪಂದ್ಯಕ್ಕೆ ಸಂಬಂಧಪಟ್ಟಂತೆ ಇರುವ ಅರ್ಥವನ್ನೇ ಪರಿಗಣಿಸುವಿರಿ.

  ಯಾರಾದರೂ “beat” ಅಂದರೆ “ನೋವಾಗುವಂತೆ ಪದೇ ಪದೇ ಹೊಡೆಯುವುದು” ಎಂದೇ ಒತ್ತಾಯಿಸಿ, ಪತ್ರಿಕೆಗಳು ಫೆಡೆರರ್ ನಡಾಲರನ್ನು ನೋವಾಗುವಂತೆ ಪದೇ ಪದೇ ಹೊಡೆದರು ಎಂದು ವರದಿ ಮಾಡಿವೆ ಎಂದು ಹೇಳಲು, ನೀವು ಅವರನ್ನು ತಪ್ಪೆಂದೂ, ಬುದ್ದಿಹೀನರೆಂದು ಬದಿಗೊತ್ತುವಿರಿ.

  ದಯವಿಟ್ಟು ಈ ಹಿಂದೆ ನೀಡಲಾದ ಸೂಕ್ತಿಗಳನ್ನು ವಿಶ್ಲೇಷಿಸುವಾಗ ಇದನ್ನು ನೆನಪಿನಲ್ಲಿಟ್ಟು ಕೊಳ್ಳಿ.

  “ಅವ್ಲಿಯಾ” ಪದವನ್ನು ವ್ಯಾಖ್ಯಾನಿಸುವ ಮೊದಲು, ಪ್ರವಾದಿ ಮುಹಮ್ಮದರ ಒಂದು ಹದೀತ್ (ಹೇಳಿಕೆ) ಅನ್ನು ಪರಿಗಣಿಸೋಣ.

  ಪ್ರವಾದಿ ಮುಹಮ್ಮದರು ಹೇಳಿದ್ದಾರೆ:

  ವಲಿ ಇಲ್ಲದೆ ನಿಕಾಹ್ (ಮದುವೆ) ಆಗುವುದಿಲ್ಲ

  ಸಹೀಹ್ ಬುಖಾರಿ

  ಈ ಸನ್ನಿವೇಶದಲ್ಲಿ “ವಲಿ” ಎಂದರೆ “ರಕ್ಷಕ” ಎಂದಾಗುತ್ತದೆ. ಯಾರೂ ಕೂಡ ಈ ಹದೀತನ್ನು “ಸ್ನೇಹಿತನಿಲ್ಲದೆ ಮದುವೆ ಆಗುವುದಿಲ್ಲ” ಎಂದು ಅರ್ಥೈಸಿಕೊಂಡಿಲ್ಲ.

  ಈಗ ಹಿಂದೆ ಪರಿಗಣಿಸಿದ ಕುರಾನಿನ ಸೂಕ್ತಿಗಳಿಗೆ ಹಿಂದಿರುಗಿದರೆ, “ಅವ್ಲಿಯಾ” (ವಲಿ ಪದದ ಬಹುವಚನ) ಅಂದರೆ “ರಕ್ಷಕರು” ಎಂದಾಗುತ್ತದೆಯೇ ಹೊರತು “ಸ್ನೇಹಿತರು” ಎಂದಲ್ಲ. ಈ ಸೂಕ್ತಿಗಳು ಅವತೀರ್ಣಗೊಂಡ ಸನ್ನಿವೇಶಕ್ಕೆ ತಕ್ಕಂತೆ ಈ ರೀತಿ ಅರ್ಥಮಾಡಿಕೊಳ್ಳಲಾಗುತ್ತದೆ. ಈ ಸೂಕ್ತಿಗಳು ಮಾತನಾಡುತ್ತಿರುವುದು ಮುಸ್ಲಿಮರು ಎಂದು ತಮ್ಮನ್ನು ತಾವು ಕರೆದುಕೊಂಡು, ಮುಸ್ಲಿಮರೊಂದಿಗೆ ಯುದ್ಧದಲ್ಲಿದ್ದು ಅವರನ್ನು ಕೊಲ್ಲಬೇಕೆಂದಿರುವ ಅವಿಶ್ವಾಸಿಗಳ ರಕ್ಷಣೆ ಬಯಸುತ್ತಿದ್ದವರ ಬಗ್ಗೆಯಾಗಿದೆ.

  ಗಮನಿಸಿ: “ಸ್ನೇಹಿತ” ಎಂಬ ಪದಕ್ಕೆ ಸನ್ನಿವೇಶಕ್ಕೆ ತಕ್ಕಂತೆ ಹಲವಾರು ಅರ್ಥಗಳಿವೆ. ಈ ಸನ್ನಿವೇಶದಲ್ಲಿ, “ಸ್ನೇಹ” ಎಂದರೆ “ಮುಸ್ಲಿಮೇತರರಿಗೆ ತೋರಿಸುವ ಉತ್ತಮ ನಡವಳಿಕೆ” ಎಂದು ಅರ್ಥ ಮಾಡಿಕೊಳ್ಳುತ್ತೇವೆ.

  ಸೂಕ್ತಿ 3:118 ರ ವಿಶ್ಲೇಷಣೆ

  ಓ ಸತ್ಯವಿಶ್ವಾಸಿಗಳೇ! ನೀವು ನಿಮ್ಮವರಲ್ಲದೆ ಇತರರನ್ನು ಆತ್ಮೀಯ ಮಿತ್ರರನ್ನಾಗಿ ಮಾಡಿಕೊಳ್ಳದಿರಿ. ನಿಮಗೆ ಹಾನಿಯುಂಟು ಮಾಡುವ ಯಾವುದೇ ವಿಷಯದಲ್ಲಿ ಅವರು ಒಂದಿಷ್ಟೂ ಎಡವಲಾರರು. ನೀವು ಸಂಕಷ್ಟಕ್ಕೀಡಾಗುವುದು ಅವರಿಗೆ ಪ್ರಿಯಾವಾಗಿದೆ. ಅವರ ಬಾಯಿಯಿಂದ ವಿದ್ವೇಷವು ಬಹಿರಂಗಗೊಂಡಿದೆ. ಅವರ ಹೃದಯಗಳು ಮರೆಮಾಚುತ್ತಿರುವುದು ಹೆಚ್ಚು ಮಾರಕವಾಗಿದೆ. ನಿಮಗೆ ನಾವು ದೃಷ್ಟಾಂತಗಳನ್ನು ವಿವರಿಸಿಕೊಟ್ಟಿರುವೆವು, ನೀವು ಚಿಂತಿಸಿ ಗ್ರಹಿಸುವವದಾಗಿದ್ದರೆ.

  ಕುರಾನ್ ಅಧ್ಯಾಯ 3: ಸೂಕ್ತಿ 118

  ಕೇವಲ ಈ ಸೂಕ್ತಿಯ ಅನುವಾದ ಓದಿದಲ್ಲಿ ಗ್ರಹಿಸಬಹುದು, ಈ ಸೂಕ್ತಿ ಮಾತನಾಡುತ್ತಿರುವುದು ಮುಸ್ಲಿಮರಿಗೆ ಹಾನಿಯುಂಟು ಮಾಡಬೇಕೆಂದಿದ್ದ ಅವಿಶ್ವಾಸಿಗಳ ಕುರಿತು ಎಂದು.

  ಸೂಕ್ತಿ 58:22 ರ ವಿಶ್ಲೇಷಣೆ

  ಅಲ್ಲಾಹನು ಮತ್ತು ಅಂತ್ಯದಿನದಲ್ಲಿ ವಿಶ್ವಾಸವಿಡುವ ಒಂದು ಜನತೆಯು, ಅಲ್ಲಾಹನು ಮತ್ತು ಅವನ ಸಂದೇಶವಾಹಕರನ್ನು ವಿರೋಧಿಸುವವರೊಂದಿಗೆ ಮೈತ್ರಿ ಸ್ಥಾಪಿಸುವುದನ್ನು ನೀವು ಕಾಣಲಾರಿರಿ. ಅವರು (ವಿರೋಧಿಗಳು) ಅವರ ತಂದೆಯಂದಿರೋ, ಪುತ್ರರೋ, ಸಹೋದರರೋ, ಸಂಬಂಧಿಕರೋ ಆಗಿದ್ದರೂ ಸರಿ. ಅಂತಹವರ (ಅಲ್ಲಾಹ್ ಮತ್ತು ಪ್ರವಾದಿಯವರ ಶತ್ರುಗಳೊಂದಿಗೆ ಮೈತ್ರಿ ಮಾಡಿಕೊಳ್ಳದವರು) ಹೃದಯಗಳಲ್ಲಿ ಅಲ್ಲಾಹನು ವಿಶ್ವಾಸವನ್ನು ದಾಖಲಿಸಿಟ್ಟಿರುವನು ಮತ್ತು ತನ್ನ ವತಿಯ ಆತ್ಮ ಚೈತನ್ಯದಿಂದ ಅವನು ಅವರಿಗೆ ಬೆಂಬಲವನ್ನು ನೀಡಿರುವನು. ಅವನು ಅವರನ್ನು ತಳಭಾಗದಲ್ಲಿ ನದಿಗಳು ಹರಿಯುವ ಸ್ವರ್ಗೋದ್ಯಾನಗಳಿಗೆ ಪ್ರವೇಶಪಡಿಸುವನು. ಅವರು ಅದರಲ್ಲಿ ಶಾಶ್ವತವಾಗಿ ವಾಸಿಸುವರು. ಅಲ್ಲಾಹನು ಅವರ ಬಗ್ಗೆ ಸಂತೃಪ್ತನಾಗಿರುವನು ಮತ್ತು ಅವರು ಅವನ ಬಗ್ಗೆ ಸಂತೃಪ್ತರಾಗಿರುವರು. ಅವರು ಅಲ್ಲಾಹನ ಪಕ್ಷದವರಾಗಿರುವರು. ಅರಿಯಿರಿ! ಖಂಡಿತವಾಗಿಯೂ ವಿಜಯಗಳಿಸುವವರು ಅಲ್ಲಾಹನ ಪಕ್ಷದವರೇ ಆಗಿರುವರು.

  ಕುರಾನ್ ಅಧ್ಯಾಯ 58: ಸೂಕ್ತಿ 22

  ಈ ಸೂಕ್ತಿ ಯುದ್ಧ (ಬದ್ರ್ ಯುದ್ಧ) ಕಾಲದಲ್ಲಿ ಅವತೀರ್ಣಗೊಂಡಿದ್ದಾಗಿದೆ – ಆಗ ಇಸ್ಲಾಮಿನ ಶತ್ರುಗಳು ಮುಸ್ಲಿಮರನ್ನು ನಿರ್ನಾಮ ಮಾಡಲು ಮುಸ್ಲಿಮರ ಮುಪ್ಪಟ್ಟು ಸೈನ್ಯೆಯೊಂದಿಗೆ ಬಂದಿದ್ದರು. ತಮ್ಮ ಹತ್ತಿರದವರ ಬಗೆಗಿನ ಪ್ರೀತಿ ಸತ್ಯ ಮತ್ತು ನ್ಯಾಯಕ್ಕಾಗಿ ನಿಲ್ಲುವುದನ್ನು ತಡೆಯಲಿಲ್ಲವಾದ್ದರಿಂದ, ದೇವರು ಮಸ್ಲಿಮರನ್ನು ಪ್ರಶಂಸಿಸಿದ್ದಾನೆ.

  ಇಷ್ಟಲ್ಲದೆ, ಯಾವುದೇ ಗ್ರಂಥವಾದರೂ – ಕುರಾನ್ ಸೇರಿದಂತೆ – ಅದನ್ನು ಬಿಡಿ ಬಿಡಿಯಾಗಲ್ಲದೆ ಸಂಪೂರ್ಣವಾಗಿ ವಿಶ್ಲೇಷಿಸಬೇಕು. ಕುರಾನ್ ಮುಸ್ಲಿಮೇತರರ ಬಗೆಗಿನ ನ್ಯಾಯಯುತ ನಡವಳಿಕೆಯ ಬಗ್ಗೆ ಏನು ಹೇಳುತ್ತದೆ ಎನ್ನುವುದನ್ನು ನೋಡೋಣ.

  ಓ ಸತ್ಯವಿಶ್ವಾಸಿಗಳೇ! ನೀವು ಅಲ್ಲಾಹನಿಗೋಸ್ಕರ ನೆಲೆಗೊಳ್ಳುವವರೂ, ನ್ಯಾಯಕ್ಕೆ ಸಾಕ್ಷ್ಯವಹಿಸುವವರೂ ಆಗಿರಿ. ಒಂದು ಜನತೆಯೊಂದಿಗೆ ನಿಮಗಿರುವ ಆಕ್ರೋಶವೂ ನ್ಯಾಯ ಪಾಲಿಸದಿರಲು ನಿಮ್ಮನ್ನು ಪ್ರೇರೇಪಿಸದಿರಲಿ. ನ್ಯಾಯ ಪಾಲಿಸಿರಿ. ಅದು ಧರ್ಮನಿಷ್ಟತೆಗೆ ಅತ್ಯಂತ ನಿಕಟವಾಗಿದೆ. ನೀವು ಅಲ್ಲಾಹನನ್ನು ಭಯಪಡಿರಿ. ಖಂಡಿತವಾಗಿಯೂ ನೀವು ಮಾಡುತ್ತಿರುವುದನ್ನು ಅಲ್ಲಾಹನು ಸೂಕ್ಷ್ಮವಾಗಿ ಅರಿಯುವವನಾಗಿರುವನು.

  ಕುರಾನ್ ಅಧ್ಯಾಯ 5: ಸೂಕ್ತಿ 8

  ಖಂಡಿತವಾಗಿಯೂ ಅಲ್ಲಾಹನು ನ್ಯಾಯ ಪಾಲಿಸಲು, ಒಳಿತನ್ನು ಮಾಡಲು ಮತ್ತು ಸಂಬಂಧಿಕರಿಗೆ (ನೆರವು) ನೀಡಲು ಆಜ್ಞಾಪಿಸುತ್ತಿರುವನು. ನೀಚಕೃತ್ಯಗಳನ್ನು, ದುರಾಚಾರಗಳನ್ನು ಮತ್ತು ಅತಿಕ್ರಮಗಳನ್ನು ಅವನು ವಿರೋಧಿಸುತ್ತಿರುವನು. ನೀವು ಚಿಂತಿಸಿ ಗ್ರಹಿಸುವ ಸಲುವಾಗಿ ಅವನು ನಿಮಗೆ ಉಪದೇಶ ನೀಡುತ್ತಿರುವನು.

  ಕುರಾನು ಅಧ್ಯಾಯ 16: ಸೂಕ್ತಿ 90

  ಈ ಸೂಕ್ತಿಗಳು ಮುಸ್ಲಿಮರು ಯಾವುದೇ ಸಮುದಾಯ ಅಥವಾ ಜನತೆಯನ್ನು ಇಷ್ಟಪಡದಿದ್ದರೂ ಕೂಡ, ಎಂದೂ, ಯಾರಿಗೂ ಅನ್ಯಾಯ ಅಥವಾ ತರವಲ್ಲದ ರೀತಿಯಲ್ಲಿ ನಡೆದುಕೊಳ್ಳುವಂತಿಲ್ಲ ಎಂದು ಸ್ಪಷ್ಟಪಡಿಸುತ್ತವೆ.

  ಇಷ್ಟಲ್ಲದೆ, ದೇವರು ಕುರಾನಿನಲ್ಲಿ ಹೇಳಿದ್ದಾನೆ:

  ಧರ್ಮದ ವಿಷಯದಲ್ಲಿ ನಿಮ್ಮೊಂದಿಗೆ ಯುದ್ಧ ಮಾಡದವರು ಮತ್ತು ನಿಮ್ಮ ಮನೆಗಳಿಂದ ನಿಮ್ಮನ್ನು ಹೊರಗಟ್ಟದವರು ಯಾರೋ, ಅವರಿಗೆ ನೀವು ಒಳಿತು ಮಾಡುವುದನ್ನು ಮತ್ತು ಅವರೊಂದಿಗೆ ನ್ಯಾಯಪಾಲಿಸುವುದನ್ನು ಅಲ್ಲಾಹನು ವಿರೋಧಿಸುವುದಿಲ್ಲ. ಖಂಡಿತವಾಗಿಯೂ ಅಲ್ಲಾಹನು ನ್ಯಾಯ ಪಾಲಿಸುವವರನ್ನು ಇಷ್ಟಪಡುವನು

  ಕುರಾನ್ ಅಧ್ಯಾಯ 60: ಸೂಕ್ತಿ 8

  ಈ ಸೂಕ್ತಿಯಲ್ಲಿ “ಒಳಿತು ಮಾಡುವುದು ಮತ್ತು ನ್ಯಾಯ ಪಾಲಿಸುವುದು” ಎನ್ನಲು ಬಳಸಿರುವ ಅರಬಿ ಪದ “ತಬರೃ” – ಇದರ ಮೂಲ ಪದ “ಬಿರ್”. ಈ ಪದ “ಬಿರ್” ಬಳಸಲಾಗುವುದು ಅತ್ಯಂತ ಉತ್ತಮ ಮಟ್ಟದ ಒಳಿತನ್ನು ಸೂಚಿಸಲಿಕ್ಕಾಗಿ, ಉದಾಹರಣೆಗೆ, “ಬಿರೃಲ್ ವಾಲಿದೈನ್” ಎಂದರೆ “ತಂದೆ ತಾಯಿಗಳಿಗೆ ಒಳಿತು”. ಪ್ರವಾದಿ ಮುಹಮ್ಮದರು ತಂದೆ ತಾಯಿಯರ ಬಗ್ಗೆ ಒಳಿತನ್ನು ಕುರಿತು ತಿಳಿಸಲು “ಬಿರೃಲ್ ವಾಲಿದೈನ್” ಎಂದು ಬಳಿಸಿದರು.

  ದೇವರು ಮುಸ್ಲಿಮರು ಮುಸ್ಲಿಮೇತರರೊಂದಿಗೆ ನ್ಯಾಯಪರವಾಗಿ, ಅತ್ಯಂತ ಉತ್ತಮ ರೀತಿಯಲ್ಲಿ ನಡೆದುಕೊಳ್ಳುವುದನ್ನು ತಡೆಯುವುದಿಲ್ಲ ಎನ್ನುವುದು ಸ್ಪಷ್ಟವಾಗಿದೆ.

  ನೆರೆಹೊರೆಯವರೊಂದಿಗಿನ ನಡವಳಿಕೆ

  ಪ್ರವಾದಿ ಮುಹಮ್ಮದರು ಹೇಳಿದ್ದಾರೆ:

  (ದೇವದೂತ) ಗೇಬ್ರಿಯಲ್ ನೆರೆಹೊರೆಯವರನ್ನು ಉತ್ತಮ ರೀತಿಯಲ್ಲಿ ನಡೆಸಿಕೊಳ್ಳುವ ಬಗ್ಗೆ ನನಗೆ ಎಷ್ಟರ ಮಟ್ಟಿಗೆ ತಿಳಿಸುತ್ತಿದ್ದರು ಎಂದರೆ, ಅವರನ್ನು ನನ್ನ ಉತ್ತರಾಧಿಕಾರಿಯಾಗಿ ಮಾಡಲು ಆಜ್ಞಾಪಿಸುವರೆಂದು ನಾನು ತಿಳಿದುಕೊಂಡೆ.

  ಪ್ರವಾದಿ ಮುಹಮ್ಮದರು ಕೇವಲ ಮುಸ್ಲಿಮ್ ನೆರೆ ಹೊರೆಯವರಲ್ಲದೆ, ಎಲ್ಲಾ ನೆರೆಹೊರೆಯವರೊಂದಿಗೆ ಉತ್ತಮ ರೀತಿಯಲ್ಲಿ ನಡೆದುಕೊಳ್ಳಬೇಕೆಂದು ತಿಳಿಸಿದ್ದಾರೆ.

  ಈ ವಿಶ್ಲೇಷಣೆಯ ಮೂಲದಲ್ಲಿ, ಜನರ ಧಾರ್ಮಿಕ ನಂಬಿಕೆಯ ಹೊರತಾಗಿ ಅವರೊಂದಿಗೆ ಮುಸ್ಲಿಮರು ಉತ್ತಮ, ನ್ಯಾಯಯುತ ರೀತಿಯಲ್ಲಿ ನಡೆದುಕೊಳ್ಳಬೇಕೆಂದು ದೇವರು ಆಜ್ಞಾಪಿಸಿದ್ದಾನೆ ಎಂಬುದು ಸ್ಪಷ್ಟವಾಗುತ್ತದೆ.

  WHAT OTHERS ARE READING

  Most Popular