ಎಲ್ಲರೂ ಒಪ್ಪುವಂತಹ ಏಕ ಮಾತ್ರ ವಿಷಯ ಎಂದರೆ, ಅದು ಸಾವು. ನಾವೆಲ್ಲರೂ ಸಾಯಲೇಬೇಕು. ಸಾವು ಎಂದರೇನು? ಅದು ಕೇವಲ ಜೀವನದ ಅಂತ್ಯವೇ? ಸಾವಿನೊಂದಿಗೆ ಎಲ್ಲವೂ ಅಂತ್ಯವಾಗುತ್ತದೆಯೇ? ಸಾವೇ ಕೊನೆಯಾಗಿದ್ದಲ್ಲಿ, ಬಹಳಷ್ಟು ವಿಷಯಗಳು ಅಪೂರ್ಣವಾಗಿ ಉಳಿದುಬಿಡುತ್ತವೆ. ಉದಾಹರಣೆಗೆ, 1. ನ್ಯಾಯ – ಈ ಪ್ರಪಂಚದಲ್ಲಿ ಪರಿಪೂರ್ಣ ನ್ಯಾಯ ಒದಗಿಸುವುದು ಅಸಾಧ್ಯ. 2. ನೆರವೇರದೇ ಉಳಿದ ಕನಸುಗಳು – ಹಲವು ಯುವ ಹಾಗೂ ಪ್ರತಿಭಾನ್ವಿತ ಜನರು ಅಕಾಲಿಕ ಮತ್ತು ದುರಂತಮಯ ಸಾವನ್ನಪ್ಪುತ್ತಾರೆ. 3. ಅದೃಷ್ಟ – ಕೇವಲ ಶ್ರೀಮಂತ ಕುಟುಂಬದಲ್ಲಿ ಜನಿಸಿದ್ದಕ್ಕಾಗಿ ಕೆಲವರು ಸುಖ ಸುಪ್ಪತ್ತಿಗೆಯ ಜೀವನ ಅನುಭವಿಸುತ್ತಾರೆ, ಹಾಗೂ ಇನ್ನೂ ಕೆಲವರು ಬಡ ಕುಟುಂಬದಲ್ಲಿ ಜನಿಸಿದ್ದಕ್ಕಾಗಿ ಬಳಲುತ್ತಾರೆ. ಹೀಗೆಯೇ ಈ ಪಟ್ಟಿ ಮುಂದುವರೆಯುತ್ತದೆ.
ನಮ್ಮ ಮುಂದಿರುವ ಪ್ರಶ್ನೆಯೆಂದರೆ, ಸಾವು ಎಲ್ಲದರ ಅಂತ್ಯೆಯೇ? ನ್ಯಾಯ, ನೆರವೇರದೇ ಉಳಿದ ಕನಸುಗಳು ಹಾಗೂ ಅದೃಷ್ಟ ಇದೆಲ್ಲದರ ಉತ್ತರ ಎಲ್ಲಿ ಸಿಗಲಿದೆ? ಸಾವೇ ಕೊನೆಯಾದರೆ ಭೂಮಿಯ ಮೇಲಿನ ಜೀವನ ನಿರೂಪಯುಕ್ತವಾಗಿ ಕಾಣುತ್ತದೆ. ಈ ಪ್ರಪಂಚದಲ್ಲಿರುವ ಪರಿಪೂರ್ಣ ವಿನ್ಯಾಸ ಮತ್ತು ವ್ಯವಸ್ಥೆಯನ್ನು ಗಮನಿಸಿದರೆ, ವಿವೇಕವುಳ್ಳ ಮನಸ್ಸು ಒಪ್ಪುತ್ತದೆ, ಈ ಭವ್ಯವಾದ ಪ್ರಪಂಚದ ಸೃಷ್ಟಿಕರ್ತ ಈ ರೀತಿಯ ಅನ್ಯಾಯ ಮತ್ತು ಅಪೂರ್ಣತೆಯನ್ನು ಒಪ್ಪುವುದಿಲ್ಲ ಎಂದು. ಹಾಗಿದ್ದರೆ, ಸಾವಿನ ನಂತರ ಜೀವನ ಸಾಧ್ಯವೇ? ನಮಗೆ ಪುನರ್ಜನ್ಮವಿದೆಯೇ?