More

    Choose Your Language

    ಅಧಾನ್ – ಪ್ರಾರ್ಥನೆಯ ಕರೆ

    ಆಜಾನ್ ಸುತ್ತ ಅನೇಕ ವಿವಾದಗಳಿವೆ. ಇಂತಹ ವಿವಾದಗಳ ಅಗತ್ಯವಿದೆಯೇ? ಆಜಾನ್ ಎಂದರೇನು ಮತ್ತು ಈ ವಿವಾದಗಳನ್ನು ನಾವು ಹೇಗೆ ನೋಡಬೇಕು ಎಂಬುದನ್ನು ಅರ್ಥಮಾಡಿಕೊಳ್ಳೋಣ.

    ಅಲ್ಲಾಹು ಅಕ್ಬರ್ .. ಅಲ್ಲಾಹು ಅಕ್ಬರ್ ..
    ಅಲ್ಲಾಹು ಅಕ್ಬರ್ .. ಅಲ್ಲಾಹು ಅಕ್ಬರ್ ..

    ನಿಮ್ಮ ಹತ್ತಿರದಲ್ಲೇ ಇರುವ ಮಸೀದಿಯಿಂದ ದಿನಕ್ಕೆ ಐದು ಬಾರಿ, ಪ್ರಾರ್ಥನೆಯ ಈ ಕರೆಯನ್ನು ನೀವು ಕೇಳುತ್ತಾ ಬಂದಿದ್ದೀರಿ. ಅಧಾನ್ – ಈ ಪ್ರಾರ್ಥನೆಯ ಕರೆ ಸಂಬಂಧಿಸಿದಂತೆ ಇತ್ತೀಚೆಗೆ ಬಹಳಷ್ಟು ಗೊಂದಲ ಹರಡಿದೆ. ಬನ್ನಿ, ಅಧಾನ್ ಏನೆಂದು ತಿಳಿಯೋಣ ಮತ್ತು ಇದರ ಸಂಬಂಧಿಸಿದಂತೆ ಹರಡಿರುವ ಗೊಂದಲವನ್ನೂ ಅರಿಯೋಣ.

    ಎಲ್ಲಾ ಓಕೆ , ಆಧಾನ್ ಯಾಕೆ?

    ಇಸ್ಲಾಮ್ ಮುಸ್ಲಿಮರಿಗೆ, ದಿನಾಲು ಐದು ಬಾರಿ ಪ್ರಾರ್ಥನೆ (ನಮಾಜ್) ಸಲ್ಲಿಸಲು ಆಜ್ಞಾಪಿಸುತ್ತದೆ. ಮುಸ್ಲಿಮರು ತಮ್ಮ ಈ ದೈನಂದಿನ ಐದು ಪ್ರಾರ್ಥನೆಗಳನ್ನು ಸಲ್ಲಿಸಲು ಮಸೀದಿಯಲ್ಲಿ ಒಂದುಗೂಡುತ್ತಾರೆ.

    ಪ್ರಾರ್ಥನೆಯ ಸಮಯ ಸೂರ್ಯನ ಚಲನೆಯನ್ನು (ಅಂದರೆ ಸೂರ್ಯೋದಯದಿಂದ ಸೂರ್ಯಾಸ್ತದವರೆಗೆ) ನಿರ್ಭರಿಸುತ್ತದೆ. ಉದಾಹರಣೆಗೆ, ಸೂರ್ಯೋದಯ ಮತ್ತು ಸೂರ್ಯಾಸ್ತದ ಸಮಯ ವರ್ಷದಾದ್ಯಂತ ಬದಲಾಗುತ್ತಿರುತ್ತದೆ, ಅಂತೆಯೇ ಸೂರ್ಯೋದಯಾದ ಮತ್ತು ಸೂರ್ಯಾಸ್ತದ ಮುಂಚಿನ ಪ್ರಾರ್ಥನಾ ಸಮಯ ಕೂಡ ಬದಲಾಗುತ್ತಿರುತ್ತದೆ. ಈ ರೀತಿ ವರ್ಷದಾದ್ಯಂತ ಬದಲಾಗುತ್ತಿರುವ ಪ್ರಾರ್ಥನಾ ಸಮಯಗಳೊಂದಿಗೆ, ಮುಸ್ಲಿಮರಿಗೆ ನಿಗದಿತ ಸಮಯದಲ್ಲಿ, ಪ್ರಾರ್ಥನೆಗಾಗಿ ಮಸೀದಿ ತಲುಪಲು ನೆನಪಿಸುವ ಅವಶ್ಯಕತೆಯಿದೆ. ಈ ಕಾರಣದಿಂದಲೇ “ಅಧಾನ್ – ಪ್ರಾರ್ಥನೆಯ ಕರೆ” ನಿಗದಿಗೊಳಿಸಲಾಗಿದೆ. ಮುಸ್ಲಿಮರು ಈ ಪ್ರಾರ್ಥನೆಯ ಕರೆ ಕೇಳಿದೊಡನೆಯೇ ಮಸೀದಿಯೆಡೆಗೆ ನಡೆಯುತ್ತಾರೆ ಮತ್ತು ಒಟ್ಟಾಗಿ ಪ್ರಾರ್ಥನೆ ಸಲ್ಲಿಸುತ್ತಾರೆ.

    ಅಧಾನ್ ಆರಂಭವಾದದ್ದು ಹೇಗೆ?

    ಪ್ರವಾದಿ ಮುಹಮ್ಮದ್ ರವರ ಸಮಯದಲ್ಲಿ, ಪ್ರಾರ್ಥನೆಯ ಕರೆಗೆ ಸಂಬಂಧಿಸಿದಂತೆ ಬಹಳಷ್ಟು ಸಲಹೆಗಳಿದ್ದವು. ಕೆಲವರು ಘಂಟೆ ಹೊಡೆಯುವ, ಇನ್ನು ಕೆಲವರು ಕಹಳೆ ಊದುವ ಮತ್ತು ಇನ್ನೂ ಕೆಲವರು ಬೆಂಕಿ ಹತ್ತಿಸುವ ಸಲಹೆ ನೀಡಿದರು. ದೇವರ ಆಜ್ಞೆಯಂತೆ, ಪ್ರವಾದಿ ಮುಹಮ್ಮದರು “ಮನುಷ್ಯನ ದನಿ”ಯನ್ನು ಪ್ರಾರ್ಥನೆಯ ಕರೆಗೆ ಆಯ್ಕೆ ಮಾಡಿದರು. ಕುತೂಹಲದ ಮಾತೆಂದರೆ, ಪ್ರವಾದಿ ಮುಹಮ್ಮದರು ಮನುಷ್ಯನ ದನಿಗಿಂತ ಗಟ್ಟಿಯಿರುವ ಘಂಟೆಯಾಗಲಿ, ಕಹಳೆಯಾಗಲಿ ಅಥವಾ ಇನ್ನೂ ಹೆಚ್ಚು ದೂರದಿಂದ ಕಾಣುವ ಬೆಂಕಿಯನ್ನಾಗಲಿ ಆಯ್ಕೆ ಮಾಡಲಿಲ್ಲ. ಪ್ರವಾದಿಯವರ ಈ ಆಯ್ಕೆಯ ಬಗ್ಗೆ ಯೋಚಿಸಿದಲ್ಲಿ, “ಪ್ರಾರ್ಥನೆಯ ಕರೆಯಲ್ಲಿ” ಕರೆಕೊಡುವವರಿಗೆ ಮತ್ತು ಆ ಕರೆಯನ್ನು ಆಲಿಸುವವರಿಗಿರುವ “ಆಧ್ಯಾತ್ಮಿಕ ಅನುಭೂತಿ”ಯ ಅರಿವಾಗುತ್ತದೆ.

    ಅಧಾನಿನ ಅರ್ಥ

    ಅಲ್ಲಾಹು ಅಕ್ಬರ್ = ದೇವರು ಅತ್ಯಂತ ಶ್ರೇಷ್ಠನು

    ಅಶಹದು ಅನ್ ಲಾ ಇಲಾಹ ಇಲ್ಲಲ್ಲಾಹ್ = ದೇವರ ಹೊರತಾಗಿ ಆರಾಧನೆ ಮತ್ತು ವಿಧೇಯತೆಗೆ ಯಾರೂ ಅರ್ಹರಲ್ಲ, ಎಂದು ನಾನು ಪ್ರಮಾಣಿಸುತ್ತೇನೆ

    ಅಶಹದು ಅನ್ನ ಮುಹಮ್ಮದುರ್ ರಸೂಲಲ್ಲಾಹ್ = ಮುಹಮ್ಮದರು ದೇವರ ಸಂದೇಶವಾಹಕನೆಂದು ನಾನು ಪ್ರಮಾಣಿಸುತ್ತೇನೆ

    ಹಯ್ಯಾ ಅಲಸ್ಸಲಾಹ್ = ಪ್ರಾರ್ಥನೆಗೆ ಬನ್ನಿ

    ಹಯ್ಯಾ ಅಲಲ್-ಫಲಾಹ = ಯಶಸ್ಸಿನೆಡೆಗೆ ಬನ್ನಿ

    ಮುಖ್ಯವಾದಂತಹ ಒಂದು ಅಂಶ: ಅಲ್ಲಾಹ್ ಮುಸ್ಲಿಮರ ವೈಯಕ್ತಿಕ ದೇವರಲ್ಲ. ಅಲ್ಲಾಹ್ ದೇವರಿಗಿರುವ ಅರಬಿ ಪದ. ಅರಬಿ ಕ್ರಿಶ್ಚಿಯನ್ನರು ಮತ್ತು ಯಹೂದಿಯರು ದೇವರನ್ನು ಸಂಬೋಧಿಸಲು “ಅಲ್ಲಾಹ್“ ಪದವನ್ನೇ ಉಪಯೋಗಿಸುತ್ತಾರೆ.

    ಅಧಾನ್ – ಒಂದು ಆಧ್ಯಾತ್ಮಿಕ ಅನುಭೂತಿ

    ಅಧಾನಿನ ಅರ್ಥ ಓದಿದಲ್ಲಿ, ಅದರಲ್ಲಿ ಏನೂ ಆಕ್ಷೇಪಾರ್ಹವಾದದ್ದು ಇಲ್ಲ ಎಂದು ನೀವು ಒಪ್ಪುವಿರಿ. ಈಗ ಇದರ ಹಿಂದಿರುವ ಆಧ್ಯಾತ್ಮಿಕ ಅರ್ಥವನ್ನು ತಿಳಿಯೋಣ.

    ಅಲ್ಲಾಹು ಅಕ್ಬರ್ = ದೇವರು ಅತ್ಯಂತ ಶ್ರೇಷ್ಠನು

    ದೇವರಲ್ಲಿ ನಂಬಿಕೆಯಿಟ್ಟಿರುವ ಪ್ರತಿಯೊಬ್ಬರೂ ಒಪ್ಪುತ್ತಾರೆ, ದೇವರೇ ಅತ್ಯಂತ ಶ್ರೇಷ್ಠನು ಎಂದು.

    ಅಶಹದು ಅನ್ ಲಾ ಇಲಾಹ ಇಲ್ಲಲ್ಲಾಹ್ = ದೇವರ ಹೊರತಾಗಿ ಆರಾಧನೆ ಮತ್ತು ವಿಧೇಯತೆಗೆ ಯಾರೂ ಅರ್ಹರಲ್ಲ, ಎಂದು ನಾನು ಪ್ರಮಾಣಿಸುತ್ತೇನೆ

    ದೇವರೇ ಅತ್ಯಂತ ಶ್ರೇಷ್ಠನಾದ ಕಾರಣ, ದೇವರೊಬ್ಬನನ್ನೇ ಆರಾಧಿಸಬೇಕು ಮತ್ತು ವಿಧೇಯತೆ ತೋರಬೇಕೇ ಹೊರತಾಗಿ ಅನ್ಯರಿಗಲ್ಲ.

    ಅಶಹದು ಅನ್ನ ಮುಹಮ್ಮದುರ್ ರಸೂಲಲ್ಲಾಹ್ = ಮುಹಮ್ಮದರು ದೇವರ ಸಂದೇಶವಾಹಕನೆಂದು ನಾನು ಪ್ರಮಾಣಿಸುತ್ತೇನೆ

    ಪ್ರವಾದಿ ಮುಹಮ್ಮದರು, ದೇವರ ಆರಾಧನೆ ಮತ್ತು ವಿಧೇಯತೆಯ ಕುರಿತು ಕಲಿಸಿದ ಕಟ್ಟ ಕಡೆಯ ಪ್ರವಾದಿ. ಆದ ಕಾರಣ, ಮುಸ್ಲಿಮರಿಗೆ ಪ್ರಾರ್ಥನೆಯ ಕರೆಯಲ್ಲಿ ಅವರ ನೆನಪು ಮಾಡಲಾಗುತ್ತದೆ.

    ಹಯ್ಯಾ ಅಲಸ್ಸಲಾಹ್ = ಪ್ರಾರ್ಥನೆಗೆ ಬನ್ನಿ

    ಮನುಷ್ಯರು ಎಷ್ಟೇ ದೇವರನ್ನು ಪ್ರಾರ್ಥಿಸಿ, ವಿಧೇಯರಾಗಿರಲು ಬಯಸಿದರೂ, ಅದರಿಂದ ದೂರ ಸರಿದು, ಲೌಕಿಕ ಆಸೆಗಳ ಹಿಂದೆ ತೆರಳಿ, ಅನೈತಿಕ ಕೃತ್ಯಗಳು ಮತ್ತು ಪಾಪವೆಸಗುತ್ತಾರೆ. ಮನುಷ್ಯರು ದಿನಾಲು ನಿಗದಿತ ಸಮಯದಲ್ಲಿ ತಮ್ಮ ಸೃಷ್ಟಿಕರ್ತನೊಂದಿಗೆ ಸಂಪರ್ಕ ಹೊಂದಿ, ಅನೈತಿಕ ಕೃತ್ಯಗಳು ಮತ್ತು ಪಾಪಗಳಿಂದ ಶುದ್ಧವಾಗುವ ಅವಶ್ಯಕತೆಯಿದೆ.

    ಪ್ರವಾದಿ ಮುಹಮ್ಮದ್ ತಿಳಿಸಿದ್ದಾರೆ:

    ನಿಮ್ಮ ಬಾಗಿಲಲ್ಲಿ ನದಿಯೊಂದಿದ್ದು, ನೀವು ದಿನಾಲು ಅದರಲ್ಲಿ ಐದು ಬಾರಿ ಸ್ನಾನ ಮಾಡಿದಲ್ಲಿ, ನಿಮ್ಮ ಮೇಲೆ ಏನಾದರೂ ಕೊಳೆ ಉಳಿಯುವದೇ?” ಸುತ್ತಲಿದ್ದ ಜನರು ಹೇಳಿದರು,”ಸ್ವಲ್ಪವೂ ಕೊಳೆ ಉಳಿಯುವುದಿಲ್ಲ”. ಪ್ರವಾದಿಯವರು ಹೇಳಿದರು, “ಅಂತೆಯೇ ದೇವರು ದೈನಂದಿನ ಐದು ಪ್ರಾರ್ಥನೆಗಳ ಮೂಲಕ ಮೂನುಷ್ಯರನ್ನು ತಮ್ಮ ಪಾಪಗಳಿಂದ ಶುದ್ಧೀಕರಿಸುತ್ತಾನೆ.

    ಉಲ್ಲೇಖನೆ: ಸಹೀಹ್ ಬುಖಾರಿ

    ಹಯ್ಯಾ ಅಲಲ್-ಫಲಾಹ = ಯಶಸ್ಸಿನೆಡೆಗೆ ಬನ್ನಿ

    ಈ ಲೌಕಿಕ ಜೀವನ ನಶ್ವರ ಮತ್ತು ಮರಣಾನಂತರ ಜೀವನ ನಿರಂತರವೆಂದು ಇಸ್ಲಾಮ್ ಪ್ರತಿಪಾದಿಸುತ್ತದೆ. ಯಾರು ಸತ್ಕರ್ಮಗಳನ್ನು ಮಾಡುತ್ತಾ ಸಜ್ಜೀವನ ನಡೆಸುವರೋ ಅವರು ಮರಣಾನಂತರ ಜೀವನದಲ್ಲಿ ಯಶಸ್ವಿಯಾಗುವರು, ಯಾರು ಕುಕರ್ಮಗಳನ್ನು ಮಾಡುತ್ತಾ ಜೀವನ ನಡೆಸುವರೋ ಅವರು ಮರಣಾನಂತರ ಜೀವನದಲ್ಲಿ ಎಲ್ಲವನ್ನೂ ಕಳೆದುಕೊಳ್ಳುವವರಾಗುತ್ತಾರೆ.

    ದಿನನಿತ್ಯದ ಪ್ರಾರ್ಥನೆಗಳು ಸೃಷ್ಟಿಕರ್ತನೊಂದಿಗೆ ನಮ್ಮ ಬಾಂಧವ್ಯ ಬೆಳೆಸಿಕೊಂಡು, ನಮ್ಮ ಪಾಪಗಳು ಮತ್ತು ಅನೈತಿಕ ಕೃತ್ಯಗಳಿಂದ ಶುದ್ಧವಾಗುವ ಒಂದು ಪರಿಣಾಮಕಾರಿ ವಿಧಾನವಾದ್ದರಿಂದ, ಯಾರು ಈ ಪ್ರಾರ್ಥನೆಗಳನ್ನು ಅರ್ಥಮಾಡಿಕೊಂಡು, ಏಕಾಗ್ರತೆಯೊಂದಿಗೆ ಸಲ್ಲಿಸುವರೋ ಅವರು ಖಂಡಿತವಾಗಿಯೂ ಸತ್ಕರ್ಮಗಳನ್ನು ಮಾಡುಲು ಮತ್ತು ಕುಕರ್ಮಗಳಿಂದ ದೂರ ಉಳಿಯಲು ಶತ ಪ್ರಯತ್ನ ಮಾಡುವರು. ಹಾಗಾಗಿ, ದೈನಂದಿನ ಪ್ರಾರ್ಥನೆಗಳು ಮರಣಾನಂತರ ಜೀವನದ ಯಶಸ್ಸಿನಲ್ಲಿ ಅತ್ಯಂತ ಮುಖ್ಯ, ಹಾಗಾಗಿಯೇ “ಯಶಸ್ಸಿನಡೆಗೆ ಬನ್ನಿ” ಎಂಬ ಕರೆ.

    ಮುಸ್ಲಿಮೇತರರು ಮತ್ತು ಅಧಾನ್

    ಬಿ ಬಿ ಸಿ ವರದಿಗಾರ್ತಿಯೊಬ್ಬರು ಅಧಾನ್ ಕೇಳಿದ ಬಳಿಕ ಭಾವುಕರಾಗಿ ಕಣ್ಣೀರಿಡುತ್ತಿರುವುದು.
    ಪ್ರಸಿದ್ಧ ಹಾಲಿವುಡ್ ನಟ ಲಿಯಾಮ್ ನೀಸನ್ ಅಧಾನ್ ಆಲಿಸಿ ಸಂತೋಷಗೊಂಡ ಗಳಿಗೆ.
    ಇನ್ನೋರ್ವ ಪ್ರಸಿದ್ಧ ಹಾಲಿವುಡ್ ನಟ ಮೋರ್ಗನ್ ಫ್ರೀಮನ್, ಅಧಾನ್ ಪ್ರಪಂಚದ ಅತ್ಯಂತ ಮಧುರ ನಾದ ಎಂದು ಬಣ್ಣಿಸಿದ್ದಾರೆ.

    ಅಧಾನ್ – ಪ್ರತಿಯೊಬ್ಬ ಮನುಷ್ಯನಿಗೂ ಒಳ್ಳೆತನವನ್ನು ನೆನಪಿಸುತ್ತದೆ

    ಪ್ರಪಂಚದಲ್ಲಿಂದು ಅನೈತಿಕತೆ, ಅಸಭ್ಯತೆ ಮತ್ತು ಅಪರಾಧಗಳು ಹೆಚ್ಚಾಗಿವೆ ಎಂದು ನಾವೆಲ್ಲರೂ ಒಪ್ಪುತ್ತೇವೆ. ಸಮಾಜವಿಂದು ಸ್ವಾರ್ಥದ ಸುಳಿಯಲ್ಲಿ ಸಿಕ್ಕಿದ್ದು, ನೈತಿಕತೆಯನ್ನು ಗಾಳಿಗೆ ತೂರಿದೆ. ವೃದ್ಧ ತಂದೆ ತಾಯಿಯನ್ನು ಮಕ್ಕಳು ಬೀದಿಪಾಲು ಮಾಡುತ್ತಿದ್ದಾರೆ, ವೃದ್ಧಾಶ್ರಮಗಳು ಹೆಚ್ಚಾಗುತ್ತಿವೆ. ಹೀಗಿರುವಾಗ, ದಿನಾಲು ದೇವರ ಸಾಮಿಪ್ಯ ಪಡೆಯುವ, ಅದರ ಮೂಲಕ ಸತ್ಕರ್ಮಗಳನ್ನು ಮಾಡಲು ಪ್ರೇರೇಪಿಸುವ ಪ್ರಾರ್ಥನಾ ಕರೆಯನ್ನು ನಾವೆಲ್ಲರೂ ಸ್ವಾಗತಿಸಬೇಕು, ಅಲ್ಲವೇ?

    ಅಧಾನ್ ಮತ್ತು ಧ್ವನಿವರ್ಧಕಗಳು

    ಧ್ವನಿವರ್ಧಕಗಳನ್ನು ಪ್ರಾರ್ಥನಾ ಸ್ಥಳಗಳಾದ ಮಂದಿರ, ಚರ್ಚ್ ಮತ್ತು ಮಸೀದಿಯಲ್ಲಿ ಉಪಯೋಗಿಸುವುದೇನೂ ಹೊಸದಲ್ಲ. ಎಲ್ಲಾ ಪ್ರಾರ್ಥನಾ ಸ್ಥಳಗಳು ಧ್ವನಿವರ್ಧಕಗಳನ್ನು ಹಿಂದಿನಿಂದಲೂ ಉಪಯೋಗಿಸುತ್ತಾ ಬಂದಿವೆ ಹಾಗೂ ಈಗಲೂ ಯಾವುದೇ ತೊಂದರೆಯಿಲ್ಲದೆ ಉಪಯೋಗಿಸುತ್ತಿವೆ. ಭಾರತ ಒಂದು ಆಧ್ಯಾತ್ಮಿಕ ದೇಶವಾಗಿದ್ದು, ಶ್ರೀಮಂತ ಆಧ್ಯಾತ್ಮಿಕ ಪರಂಪರೆ ಹೊಂದಿದೆ. ಇಂತಹ ದೇಶದ ಪ್ರಜೆಗಳು ಹಾಗು ಆಧ್ಯಾತ್ಮಿಕ ಜೀವಿಗಳೂ ಆಗಿರುವ ನಮಗೆ, ಆಧ್ಯಾತ್ಮಿಕತೆಗೆ ಸಂಬಂಧಿಸಿದಂತೆ ಯಾವುದೇ ಸಮಸ್ಯೆ ಹೇಗಿರಬಹುದು?

    ಅದೇ ಸಮಯದಲ್ಲಿ, ಮುಸ್ಲಿಮರು ಮತ್ತು ಇತರ ಮತಬಾಂಧವರು ಧ್ವನಿವರ್ಧಕಗಳ ಉಪಯೋಗಕ್ಕೆ ಸಂಬಂಧಿಸಿದಂತೆ, ವೃದ್ಧರು, ಚಿಕ್ಕ ಮಕ್ಕಳು ಮತ್ತು ರೋಗಿಗಳಿಗೆ ತೊಂದರೆಯಾಗದಂತೆ ನೋಡಿಕೊಳ್ಳಬೇಕು. ಹಾಗಾಗಿ, ಅವರು ಧ್ವನಿವರ್ಧಕಗಳನ್ನು ಇತರರಿಗೆ ತೊಂದರೆಯಾಗದಂತೆ ಉಪಯೋಗಿಸಬೇಕು.

    ಇದಕ್ಕೆ ಸಂಬಂಧಿಸಿದಂತೆ ಇಸ್ಲಾಮ್ ನಿಲುವು ಸುಸ್ಪಷ್ಟ. ಪ್ರವಾದಿ ಮುಹಮ್ಮದರು ಹೇಳಿದಂತೆ:

    ಮುಸ್ಲಿಮನೆಂದರೆ ಯಾರ ನಾಲಿಗೆ ಮತ್ತು ಕೈಗಳಿಂದ ಜನರು ಸುರಕ್ಷಿತರು, ಹಾಗೂ (ದೇವರ) ಸತ್ಯವಿಶ್ವಾಸಿಯೆಂದರೆ ಯಾರಿಂದ ಜನರ ಜೀವ ಮತ್ತು ಸಂಪತ್ತು ಸುರಕ್ಷಿತವಾಗಿರುತ್ತದೆ

    ಉಲ್ಲೇಖನೆ: ಸುನನ್ ನಸಾಯಿ

    ಒಬ್ಬ ನಿಜವಾದ ಮುಸ್ಲಿಮನ ಕೃತ್ಯಗಳಿಂದ ಯಾರಿಗೂ ತೊಂದರೆಯಾಗಲು ಸಾಧ್ಯವಿಲ್ಲ. ಆದ್ದರಿಂದ ಮುಸ್ಲಿಮರು ಮಸೀದಿಯಲ್ಲಿನ ಧ್ವನಿವರ್ಧಕಗಳ ಸದ್ದಿನ ಮಟ್ಟವನ್ನು, ಮಾನ್ಯ ಕೋರ್ಟ್ ಗಳ ನಿರ್ದೇಶನದಂತೆ ನಿಗದಿಪಡಿಸಬೇಕು. ನಾವು ಬಯಸುವುದೇನೆಂದರೆ, ಇತರ ಮತಬಾಂಧವರಿಂದ ಕೂಡ ಧ್ವನಿವರ್ಧಕಗಳನ್ನು ಬಳಸುವಾಗ ಮಾನ್ಯ ಕೋರ್ಟ್ ಆದೇಶವನ್ನು ಪಾಲಿಸಲಾಗುವುದು.

    WHAT OTHERS ARE READING

    Most Popular