More

  Choose Your Language

  ಪ್ರವಾದಿ ಮುಹಮ್ಮದ್ – ಶತಕೋಟಿ ಹೃದಯ ಸಾಮ್ರಾಟ

  ಒಬ್ಬ ಮನುಷ್ಯ - ಜಗತ್ತಿನಲ್ಲಿ ಕೋಟ್ಯಾಂತರ (ಬಿಲಿಯನ್‌ಗಿಂತಲೂ ಹೆಚ್ಚು) ಜನರು ಅವರನ್ನು ತಮ್ಮ ಪ್ರಾಣಕ್ಕಿಂತ ಹೆಚ್ಚಾಗಿ ಪ್ರೀತಿಸುತ್ತಾರೆ ಮತ್ತು ಅವರನ್ನು ತಮ್ಮ ಅತ್ಯುನ್ನತ ಮಾದರಿ ಎಂದು ಗೌರವಿಸುತ್ತಾರೆ. ಅವರೇ ಪ್ರವಾದಿ ಮುಹಮ್ಮದ್ – ಅವರು ಯಾರು? ಅವರು ಏನು ಕಲಿಸಿದರು?

  ಪ್ರವಾದಿಗಳು ಯಾರು?

  ದೇವರು ನಮ್ಮನ್ನು ಸೃಷ್ಟಿಸಿ, ನಮಗೆ ಮಾರ್ಗದರ್ಶನವಿಲ್ಲದೆ ಬಿಡಲಿಲ್ಲ. ಹೇಗೆ ಕಾರಿಗೆ ಡೆಮೋ ಕೊಡಬೇಕೆಂದರೆ ಬೈಕನ್ನಲ್ಲ ಕಾರನ್ನೇ ಬಳಸುತ್ತಾರೆ, ಹಾಗೆಯೇ, ಉತ್ತಮ ಜೀವನವನ್ನು ಹೇಗೆ ನಡೆಸಬೇಕೆಂದು ಮಾನವರಿಗೆ ತಿಳಿಸಿ ಡೆಮೋ ನೀಡಲು ದೇವರು ನೀತಿವಂತ ಮನುಷ್ಯರನ್ನು ಆರಿಸಿಕೊಂಡಿರುವನು. ಈ ರೀತಿ ಡೆಮೋ ಕೊಡುವವರೇ ದೇವರಿಂದ ಕಳುಹಿಸಲ್ಪಟ್ಟ ಪ್ರವಾದಿಗಳು. ಪ್ರವಾದಿಗಳು ಕೇವಲ ಮನುಷ್ಯರು ಮತ್ತು ಅವರು ದೈವಿಕ ಗುಣಗಳನ್ನು ಹೊಂದಿರುವುದಿಲ್ಲ. ಈ ರೀತಿ ಬಂದಂತಹ ಪ್ರವಾದಿಗಳಲ್ಲಿ ಕೆಲವರು: ಅಬ್ರಹಾಂ, ಡೇವಿಡ್, ಮೋಸೆಸ್ (ಮೋಶೆ) ಮತ್ತು ಜೀಸಸ್ (ಏಸು). ದೇವರು ಭಾರತ ಸೇರಿದಂತೆ ಪ್ರತಿಯೊಂದು ದೇಶಕ್ಕೂ ಪ್ರವಾದಿಗಳನ್ನು ಕಳುಹಿಸಿದ್ದಾನೆ.

  ಪ್ರವಾದಿ ಮುಹಮ್ಮದ್ ಯಾರು?

  ಪ್ರವಾದಿಗಳ ಸುದೀರ್ಘ ಸರಪಳಿಯಲ್ಲಿ ಪ್ರವಾದಿ ಮುಹಮ್ಮದ್ ರವರು ಕೊನೆಯ ಮತ್ತು ಅಂತಿಮ ಪ್ರವಾದಿಯಾಗಿದ್ದರು. ನಿಮ್ಮನ್ನು ಮತ್ತು ನನ್ನನ್ನು ಒಳಗೊಂಡಂತೆ, ಕಡೆಯ ದಿನದವರೆಗೂ ಇಡೀ ಮನುಕುಲಕ್ಕಾಗಿ ಕಳುಹಿಸಲ್ಪಟ್ಟವರು.

  ಅವರ ಆರಂಭಿಕ ಜೀವನ

  ಪ್ರವಾದಿ ಮುಹಮ್ಮದ್ ಮಕ್ಕಾ ನಗರದಲ್ಲಿ – ಅದರ ಆರ್ಥಿಕತೆ, ರಾಜಕೀಯವನ್ನು ನಿಯಂತ್ರಿಸುತ್ತಾ ಉನ್ನತ ಸಾಮಾಜಿಕ ಸ್ಥಾನಮಾನವನ್ನು ಅನುಭವಿಸಿದಂತಹ – ಖುರೈಶ್ ಎಂಬ ಬುಡಕಟ್ಟಿನಲ್ಲಿ ಜನಿಸಿದ್ದರು. ಅವರ ಆರನೇ ವಯಸ್ಸಿನಲ್ಲಿ ಅನಾಥರಾದರು. ಪ್ರವಾದಿ ಅವರ ಅತ್ಯುತ್ತಮ ನಡತೆ, ಪ್ರಾಮಾಣಿಕತೆ ಮತ್ತು ಉತ್ತಮ ನಡವಳಿಕೆಗಾಗಿ ಮೆಚ್ಚುಗೆ ಪಡೆದಿದ್ದರು. ಮಕ್ಕಾದ ಜನರು ಅವರನ್ನು “ಅಲ್-ಅಮೀನ್” (ವಿಶ್ವಾಸಾರ್ಹ) ಎಂದು ಕರೆಯುತ್ತಿದ್ದರು.

  ಪ್ರವಾದಿತ್ವ

  ಅನಕ್ಷರಸ್ಥ,ರಾಗಿದ್ದ ಪ್ರವಾದಿ ಮುಹಮ್ಮದ್ ನಲವತ್ತನೇ ವಯಸ್ಸಿನವರೆಗೂ, ಒಬ್ಬ ರಾಜನೀತಿಜ್ಞ, ಬೋಧಕ ಅಥವಾ ವಾಗ್ಮಿ ಎಂದು ಪ್ರಚಲಿತರಾಗಿರಲಿಲ್ಲ. ಅವರು ಧರ್ಮ, ನೀತಿ, ಕಾನೂನು, ರಾಜಕೀಯ, ಅರ್ಥಶಾಸ್ತ್ರ ಅಥವಾ ಸಮಾಜಶಾಸ್ತ್ರದ ತತ್ವಗಳನ್ನು ಚರ್ಚಿಸಿರಲಿಲ್ಲ. 40ನೇ ವಯಸ್ಸಿನಲ್ಲಿ, ಪ್ರವಾದಿ ಮುಹಮ್ಮದ್ ಅವರು ಮಕ್ಕಾ ಬಳಿಯ ಹಿರಾ ಗುಹೆಯಲ್ಲಿ ಪ್ರತಿದಿನ ಹಲವಾರು ಗಂಟೆಗಳ ಕಾಲ ಕಳೆಯ ತೊಡಗಿದ್ದರು – ಅರಬಿ ಭಾಷೆಯಲ್ಲಿ ಅಲ್ಲಾಹ್ ಎಂದು ಕರೆಯಲ್ಪಡುವ ದೇವರ (ಹಿಂದಿಯಲ್ಲಿ ಈಶ್ವರ್ ಮತ್ತು ಇಂಗ್ಲೀಷ್ ನಲ್ಲಿ God) ಬಗ್ಗೆ ಧ್ಯಾನ ಮಾಡುತ್ತಿದ್ದರು. ಒಂದು ದಿನ, ಪ್ರವಾದಿ ಮುಹಮ್ಮದರು ದೇವದೂತ ಗೇಬ್ರಿಯಲ್ ಮೂಲಕ ದೇವರ ವತಿಯಿಂದ ತಮ್ಮ ಮೊದಲ ಅವತೀರ್ಣವನ್ನು ಪಡೆದರು. ದೇವರ ಏಕತೆ, ಸೃಷ್ಟಿಯ ಉದ್ದೇಶ, ಹಿಂದಿನ ಪ್ರವಾದಿಗಳ ಜೀವನ, ನೈತಿಕತೆ ಮತ್ತು ಮರಣಾನಂತರದ ಜೀವನದಿಂದ ಹಿಡಿದು ವಿವಿಧ ವಿಷಯಗಳ ಕುರಿತು ಅವರು ಮುಂದಿನ 23 ವರ್ಷಗಳವರೆಗೆ ಸಂದೇಶ ಪಡೆಯುತ್ತಿದ್ದರು. ಈ ಅವತೀರ್ಣಗೊಂಡ ಸಂದೇಶಗಳನ್ನು ಕುರಾನ್ ಎಂದು ಕರೆಯಲಾಗುತ್ತದೆ, ಇದು ದೇವರ ಅಕ್ಷರಶಃ ನುಡಿಯಾಗಿದೆ. ಪ್ರವಾದಿಯವರ ಸ್ವಂತ ನುಡಿಗಳನ್ನು ಪ್ರತ್ಯೇಕವಾಗಿ ಹದೀಸ್ ಎಂದು ಕರೆಯಲಾಗುತ್ತದೆ.

  ಅವರ ಸಂದೇಶ

  ಪ್ರವಾದಿ ಮುಹಮ್ಮದ್ ಇಸ್ಲಾಂ ಎಂಬ ಹೊಸ ಧರ್ಮವನ್ನು ಹುಟ್ಟುಹಾಕಲಿಲ್ಲ. ಇಸ್ಲಾಂ ಎಂಬುದು ಅರಬಿ ಪದವಾಗಿದ್ದು, ದೇವರಿಗೆ ಸಂಪೂರ್ಣ ಶರಣಾಗತಿ ಮತ್ತು ವಿಧೇಯತೆ ಎಂದರ್ಥ. ಇದು ಹಿಂದಿನ ಎಲ್ಲಾ ಪ್ರವಾದಿಗಳ ಬೋಧನೆಯೂ ಆಗಿತ್ತು. ಪ್ರವಾದಿ ಮುಹಮ್ಮದ್ ಎಲ್ಲಾ ಹಿಂದಿನ ಪ್ರವಾದಿಗಳು ಕಲಿಸಿದಂತಹ, ದೇವರಿಗೆ ಶರಣಾಗುವ ಮತ್ತು ವಿಧೇಯತೆಯ ಅದೇ ಸಂದೇಶವನ್ನು ಪುನರುಜ್ಜೀವನಗೊಳಿಸಿದರು. ಪ್ರವಾದಿ ಮುಹಮ್ಮದ್ ಕಲಿಸಿದ ಪ್ರಮುಖ ವಿಷಯಗಳೆಂದರೆ:

  • ನಮ್ಮ ಅಸ್ತಿತ್ವದ ಉದ್ದೇಶವೇ ನಮ್ಮ ಸೃಷ್ಟಿಕರ್ತನನ್ನು ಆರಾಧಿಸಿ, ಪಾಲಿಸುವುದಾಗಿದೆಯೇ ಹೊರತು ಬೇರೇನೂ ಅಲ್ಲ. (ಸೃಷ್ಟಿಕರ್ತನನ್ನು ಆರಾಧಿಸ ಬೇಕೆ ಹೊರತು ವಿಗ್ರಹಗಳು, ಚಿತ್ರಗಳು, ಸೂರ್ಯ, ನಕ್ಷತ್ರ, ಗ್ರಹಗಳು ಇತ್ಯಾದಿ ಸೃಷ್ಟಿಗಳನ್ನಲ್ಲ. ಯಾರನ್ನೂ ಅಥವಾ ಯಾವುದನ್ನೂ ದೇವರ ಸ್ಥಾನಕ್ಕೆ ಏರಿಸಬೇಡಿ. ದೇವರ ಅಸ್ತಿತ್ವವನ್ನು ನಿರಾಕರಿಸಬೇಡಿ).
  • ದೇವರು ಒಬ್ಬನೇ. ದೇವರಿಗೆ ತಂದೆ-ತಾಯಿ, ಮಕ್ಕಳು ಮತ್ತು ಸಂಗಾತಿಗಳಿಲ್ಲ ಮತ್ತು ಅವನಿಗೆ ಸಮಾನರು ಯಾರೂ ಇಲ್ಲ.
  • ನಾವು ಈ ಜಗತ್ತಿನಲ್ಲಿ ಏನೇ ಮಾಡಿದರೂ ಮರಣಾನಂತರದ ಜೀವನದಲ್ಲಿ ನಾವು ದೇವರಿಗೆ ಉತ್ತರಿಸ ಬೇಕಾಗಿದೆ.
  • ದೇವರು ಜಾತಿ, ಚರ್ಮದ ಬಣ್ಣ, ಜನಾಂಗ ಅಥವಾ ಹುಟ್ಟಿನ ಮೂಲದ ಆಧಾರದ ಮೇಲೆ ಜನರನ್ನು ಪ್ರತ್ಯೇಕಿಸುವುದಿಲ್ಲ ಮತ್ತು ದೇವರ ಎದುರು ಎಲ್ಲಾ ಮಾನವರು ಸಮಾನರು.

  ಪ್ರವಾದಿಯವರ ಉಪದೇಶ ಸಂಪತ್ತು, ಅಧಿಕಾರ, ದೊರೆತನ ಅಥವಾ ಮಹಿಳೆಯರಿಗಾಗಿ ಅಲ್ಲ

  ಮಕ್ಕಾದ ಜನರು ಅವರನ್ನು ತಮ್ಮ ರಾಜನನ್ನಾಗಿ ಸ್ವೀಕರಿಸಲು, ಅವರ ಆಯ್ಕೆಯ ಮಹಿಳೆಯನ್ನು ಮದುವೆಯಲ್ಲಿ ನೀಡಲು ಮತ್ತು ಭೂಮಿಯ ಎಲ್ಲಾ ಸಂಪತ್ತನ್ನು ಅವರ ಪಾದಗಳಿಗೆ ಇಡಲು ಮುಂದಾದರು. ಪ್ರವಾದಿಯವರು ಈ ಎಲ್ಲಾ ಆಕರ್ಷಕ ಕೊಡುಗೆಗಳನ್ನು ತಿರಸ್ಕರಿಸಿದರು ಮತ್ತು ಅವಮಾನಗಳು, ಸಾಮಾಜಿಕ ಬಹಿಷ್ಕಾರ ಮತ್ತು ದೈಹಿಕ ಹಲ್ಲೆಗಳ ಹೊರತಾಗಿಯೂ ತಮ್ಮ ಸಂದೇಶದ ಬೋಧನೆಯನ್ನು ಮುಂದುವರೆಸಿದರು. ಪ್ರವಾದಿ ಯಾವುದೇ ಲೌಕಿಕ ಕಾರಣಗಳಿಗಾಗಿ ದೇವರ ಸಂದೇಶವನ್ನು ಬೋಧಿಸಲಿಲ್ಲ ಎಂದು ಇದು ಸ್ಪಷ್ಟವಾಗಿ ಸಾಬೀತುಪಡಿಸುತ್ತದೆ.

  ರಾಜ್ಯದ ಆಡಳಿತಗಾರನಾಗಿ ಪ್ರವಾದಿಯವರು

  13 ವರ್ಷಗಳ ಕಾಲ ಮಕ್ಕಾದ ಜನರ ಕಿರುಕುಳವನ್ನು ತಾಳ್ಮೆಯಿಂದ ಸಹಿಸಿಕೊಂಡ ನಂತರ, ಪ್ರವಾದಿ ಮುಹಮ್ಮದ್ ಮದೀನಾ ಎಂಬ ನಗರಕ್ಕೆ ವಲಸೆ ಹೋದರು – ಅಲ್ಲಿಯ ಜನರು ಅವರನ್ನು ಪ್ರವಾದಿ ಎಂದು ಒಪ್ಪಿಕೊಂಡದ್ದಷ್ಟೇ ಅಲ್ಲದೆ ಅವರನ್ನು ರಾಜ್ಯದ ಆಡಳಿತಗಾರನನ್ನಾಗಿ ಮಾಡಿದರು. ಅವರ ಮರಣದ ಹೊತ್ತಿಗೆ, ಭಾರತದಷ್ಟು ದೊಡ್ಡದಾದ ಪ್ರದೇಶವು ಅವರ ಅಧಿಕಾರದಲ್ಲಿತ್ತು. ಆಧ್ಯಾತ್ಮಿಕ ನಾಯಕ ಮತ್ತು ರಾಜ್ಯದ ಆಡಳಿತಗಾರನಾಗಿದ್ದರೂ ಸಹ, ಪ್ರವಾದಿ ಅನುಕರಣೀಯ ನಮ್ರತೆ ಮತ್ತು ಗಮನಾರ್ಹವಾದ ಸರಳತೆಯನ್ನು ಮರೆದಿದ್ದರು.

  ಪ್ರವಾದಿಯವರ ಸರಳ, ವಿನಮ್ರ ಜೀವನ

  ಪ್ರವಾದಿಯವರು ತಮ್ಮ ಜೀವನವನ್ನು ಬಡತನದಲ್ಲಿ, ಬಹಳ ಚಿಕ್ಕ ಮನೆಯಲ್ಲಿ ವಾಸಿಸುತ್ತಾ, ಆಗಾಗ್ಗೆ ಹಲವಾರು ದಿನಗಳವರೆಗೆ ಆಹಾರವಿಲ್ಲದೆ ಸಾಗಿಸುತ್ತಿದ್ದರು. ಅವನು ತಮ್ಮ ರಾಜ್ಯದಲ್ಲಿ ಪ್ರಜೆಯಾಗಿದ್ದ ಒಬ್ಬ ಯಹೂದಿಯಿಂದ ಮೂವತ್ತು ಅಳತೆಯ ಬಾರ್ಲಿ ಧಾನ್ಯಗಳನ್ನು ಸಾಲವಾಗಿ ತನ್ನ ರಕ್ಷಾಕವಚವನ್ನು ಒತ್ತೆಯಿಟ್ಟು ಎರವಲು ಪಡೆದಿದ್ದರು ಮತ್ತು ಆ ರಕ್ಷಾಕವಚವನ್ನು ಹಿಂಪಡೆದುಕೊಳ್ಳದೆ ಮರಣ ಹೊಂದಿದರು. ಜನರು ಗೌರವದಿಂದ ಅವರಿಗಾಗಿ ನಿಲ್ಲುವುದನ್ನು ಅವರು ನಿಷೇಧಿಸಿದರು. ಅವರಿಗೆ ಅಂಗರಕ್ಷಕರಿರಲಿಲ್ಲ ಮತ್ತು ಸೈನಿಕರು ಅವರ ಮನೆಗೆ ಕಾವಲೂ ಇರಲಿಲ್ಲ. ಜನರು ಅವರನ್ನು ಅತಿಯಾಗಿ ಹೊಗಳಬಾರದು ಎಂದು ಅವರು ಆದೇಶಿಸಿದ್ದರು. ಪ್ರವಾದಿ ಮುಹಮ್ಮದ್ ಹೇಳಿದ್ದಾರೆ:

  ಯೇಸುವನ್ನು ಹೊಗಳಿದಂತೆ ನನ್ನನ್ನು ಅತಿಯಾಗಿ ಹೊಗಳಬೇಡಿ, ಆದರೆ ನನ್ನನ್ನು ದೇವರ ಸೇವಕ ಮತ್ತು ದೇವರ ಪ್ರವಾದಿ ಎಂದು ಕರೆಯಿರಿ.

  ಅವರು ಎಷ್ಟು ವಿನಮ್ರರಾಗಿದ್ದರು ಎಂದರೆ ಅವರು ತಮ್ಮ ಸಹಚರರೊಂದಿಗೆ ಅವರಲ್ಲಿ ತಾವೂ ಒಬ್ಬರಂತೆ ಬೆರೆಯುತ್ತಿದ್ದರು, ಇದುವರೆಗೂ ಪ್ರವಾದಿಯನ್ನು ನೋಡಿರದ ವ್ಯಕ್ತಿಯು “ನಿಮ್ಮಲ್ಲಿ ಯಾರು ಮುಹಮ್ಮದ್?” ಎಂದು ಕೇಳಬೇಕಾಗಿಬರುತ್ತಿತ್ತು!

  ಪ್ರವಾದಿಯವರು ಸಮಾನತೆಯನ್ನು ಬೋಧಿಸಿ ಪಾಲಿಸಿದರು

  ಪ್ರವಾದಿ ಮುಹಮ್ಮದ್ ಘೋಷಿಸಿದ್ದರು:

  ಸಂಪೂರ್ಣ ಮಾನವಕುಲ ಆಡಮ್ ಮತ್ತು ಈವ್ ನಿಂದ ಬಂದಿದೆ. ಅರಬ್‌ ನವರಿಗೆ ಅರಬ್ ಅಲ್ಲದವರ ಮೇಲೆ ಯಾವುದೇ ಶ್ರೇಷ್ಠತೆ ಇಲ್ಲ, ಅಥವಾ ಅರಬೇತರರಿಗೆ ಅರಬರಿಗಿಂತ ಯಾವುದೇ ಶ್ರೇಷ್ಠತೆ ಇಲ್ಲ; ಬಿಳಿಯವರಿಗೆ ಕಪ್ಪು ವರ್ಣದವರ ವಿರುದ್ಧ ಶ್ರೇಷ್ಠತೆ ಇಲ್ಲ, ಅಥವಾ ಕರಿಯನಿಗೆ ಬಿಳಿಯರ ಮೇಲೆ ಯಾವುದೇ ಶ್ರೇಷ್ಠತೆ ಇಲ್ಲ; ಧರ್ಮನಿಷ್ಠೆ ಮತ್ತು ಒಳ್ಳೆಯ ಕಾರ್ಯಗಳನ್ನು ಹೊರತುಪಡಿಸಿ ಯಾರೂ ಇನ್ನೊಬ್ಬರ ಮೇಲೆ ಶ್ರೇಷ್ಠತೆಯನ್ನು ಹೊಂದಿಲ್ಲ.

  ಇಸ್ಲಾಂನಲ್ಲಿ ಅತ್ಯಂತ ಗೌರವಾನ್ವಿತ ಕರ್ತವ್ಯಗಳಲ್ಲಿ ಒಂದಾದ ದೈನಂದಿನ ಐದು ಬಾರಿ ಪ್ರಾರ್ಥನೆಗಾಗಿ ಕರೆ ಮಾಡಲು ಪ್ರವಾದಿಯವರು ಬಿಲಾಲ್, ಒಬ್ಬ ಮಾಜಿ ಕಪ್ಪು ಗುಲಾಮನನ್ನು ನೇಮಿಸಿದರು. ಪ್ರತಿಪಾದಿಸಿದ ಸಮಾನತೆಯನ್ನು ಕಾರ್ಯರೂಪದಲ್ಲಿ ತೋರಿದಂತವರು ಪ್ರವಾದಿ ಮುಹಮ್ಮದ್.

  ಪ್ರವಾದಿ ಮತ್ತು ಸಾಮಾಜಿಕ ಸುಧಾರಣೆ

  ದೇವರ ಆಜ್ಞೆಯನ್ನು ಅನುಸರಿಸುವ ಮೂಲಕ, ಅವರು ದೇವಪ್ರಜ್ಞೆಯನ್ನು (ದೇವರ ಬಗೆಗಿನ ಭಯ ಭಕ್ತಿ) ಹುಟ್ಟುಹಾಕುವ ಮೂಲಕ ಸಾಮಾಜಿಕ ಸುಧಾರಣೆಗಳನ್ನು ತಂದರು ಮತ್ತು ಮರಣಾನಂತರದ ಜೀವನದಲ್ಲಿ ಜನರು ತಮ್ಮ ಕಾರ್ಯಗಳಿಗೆ ಹೊಣೆಗಾರರಾಗುತ್ತಾರೆ ಎಂದು ಅರಿತುಕೊಂಡಿದ್ದರು. ಅವರು ಮುಕ್ತ ವ್ಯಾಪಾರ ಮತ್ತು ನೈತಿಕ ಹೂಡಿಕೆಗಳನ್ನು ಪ್ರೋತ್ಸಾಹಿಸಿದರು, ಆದರೆ ಅದೇ ಸಮಯದಲ್ಲಿ ಕಾರ್ಮಿಕರ ಹಕ್ಕುಗಳನ್ನು ಸಂರಕ್ಷಿಸಿದರು ಮತ್ತು ಎಲ್ಲಾ ರೀತಿಯ ಬಡ್ಡಿಯನ್ನು ನಿಷೇಧಿಸಿದರು. ಅವರು ಮದ್ಯ, ಮಾದಕ ದ್ರವ್ಯ, ವೇಶ್ಯಾವಾಟಿಕೆ ಮತ್ತು ಅಪರಾಧಗಳನ್ನು ನಿಷೇಧಿಸುವ ಮೂಲಕ ಆರೋಗ್ಯಕರ ಜೀವನವನ್ನು ಉತ್ತೇಜಿಸಿದರು. ಅವರು ಕೌಟುಂಬಿಕ ಹಿಂಸೆಯನ್ನು ಬಲವಾಗಿ ಖಂಡಿಸಿದರು ಮತ್ತು ಮಹಿಳೆಯರು ತಮ್ಮ ಮನಸ್ಸಿನ ಮಾತನ್ನು ಮುಂದಿಡಲು ಪ್ರೋತ್ಸಾಹಿಸಿದರು. ಅವರು ಪ್ರಾಣಿಗಳು, ಮರಗಳು ಮತ್ತು ಪರಿಸರವನ್ನು ರಕ್ಷಿಸಲು ಕಾನೂನುಗಳನ್ನು ಸ್ಥಾಪಿಸಿದರು. ಪ್ರಯೋಜನಕಾರಿ ಜ್ಞಾನವನ್ನು ಎಲ್ಲಿಯಾದರೂ ಹುಡುಕಲು ಜನರನ್ನು ಪ್ರೋತ್ಸಾಹಿಸಿದರು, ಇದರ ಪರಿಣಾಮವಾಗಿ ಮುಸ್ಲಿಮರು ವಿಜ್ಞಾನ ಮತ್ತು ಧರ್ಮದ ನಡುವೆ ಎಂದೂ ಸಂಘರ್ಷವನ್ನು ಅನುಭವಿಸಲಿಲ್ಲ. ಇದರಿಂದಾಗಿ ಮುಸ್ಲಿಮರು ಹಲವಾರು ಶತಮಾನಗಳ ಕಾಲ ಜ್ಞಾನದ ಹಲವು ಕ್ಷೇತ್ರಗಳಲ್ಲಿ ಜಗತ್ತನ್ನು ಮುನ್ನಡೆಸಲು ಕಾರಣವಾಯಿತು.

  ಮುಸ್ಲಿಮೇತರರೊಂದಿಗಿನ ನಡವಳಿಕೆ

  ಎಲ್ಲಾ ಜನರು, ಅವರು ಯಾವುದೇ ಧರ್ಮಕ್ಕೆ ಸೇರಿದವರಾಗಿರಲಿ, ನ್ಯಾಯಯುತವಾಗಿ ಮತ್ತು ಘನತೆಯೊಂದಿಗೆ ಅವರೆದುರು ವರ್ತಿಸಬೇಕು ಎಂದು ಪ್ರವಾದಿ ತಿಳಿಸಿದರು. ಒಮ್ಮೆ ಪ್ರವಾದಿಯವರ ಮುಂದೆ ಅಂತ್ಯಕ್ರಿಯೆಯ ಮೆರವಣಿಗೆ ಸಾಗಿತು ಮತ್ತು ಅವರು ಎದ್ದುನಿಂತರು. ಅದು ಯಹೂದಿಯ ಶವಪೆಟ್ಟಿಗೆ ಎಂದು ಅವರಿಗೆ ಹೇಳಿದಾಗ, “ಅವನು ಮನುಷ್ಯನಲ್ಲವೇ?” ಎಂದು ಅವರು ಉತ್ತರಿಸಿದ್ದರು.

  ಪ್ರವಾದಿಯು ತನ್ನ ರಾಜ್ಯದ ಯಹೂದಿ ಪ್ರಜೆಯೊಂದಿಗೆ ತನ್ನ ರಕ್ಷಾಕವಚವನ್ನು ಒತ್ತೆ ಇಟ್ಟ ಘಟನೆಯು, ಮುಸ್ಲಿಮೇತರರು ಸಂಪೂರ್ಣ ಸ್ವಾತಂತ್ರ್ಯವನ್ನು ಅನುಭವಿಸುತ್ತಿದ್ದರು, ಅಷ್ಟೇ ಅಲ್ಲದೆ ರಾಜ್ಯದ ಆಡಳಿತಗಾರನಿಗೆ ಸಾಲ ನೀಡುವಷ್ಟು ಶಕ್ತಿಶಾಲಿಯಾಗಿದ್ದರು ಎಂಬುದನ್ನು ತೋರಿಸುತ್ತದೆ. ಪ್ರವಾದಿಯವರು ಖೈಬರ್ ಭೂಮಿಯನ್ನು (ಅರಬು ನಾಡಿನಲ್ಲಿನ ಒಂದು ಜಾಗ) ಯಹೂದಿಗಳಿಗೆ ಕೆಲಸ ಮಾಡಲು ಮತ್ತು ಅದರ ಇಳುವರಿಯನ್ನು ತೆಗೆದುಕೊಳ್ಳಲು ಕೊಟ್ಟಿರುವುದನ್ನು ನಾವು ನೋಡುತ್ತೇವೆ. ಪ್ರವಾದಿಯವರು ಆಡಳಿತಗಾರರಾಗಿದ್ದುದರಿಂದ ಮುಸ್ಲಿಮರಿಗೆ ಭೂಮಿಯನ್ನು ಹಂಚಬಹುದಿತ್ತು ಅಥವಾ ಮುಸ್ಲಿಮರನ್ನು ಅಲ್ಲಿ ನೆಲೆಗೊಳಿಸಬಹುದಿತ್ತು. ಬದಲಾಗಿ, ಯಹೂದರಿಗೆ ಪ್ರಯೋಜನವಾಗುವ ರೀತಿಯಲ್ಲಿ ಅವರು ಯೋಜಿಸಿ ಕಾರ್ಯಗತಗೊಳಿಸಿದರು. ಇಸ್ಲಾಂಗೆ ಮುಸ್ಲಿಮೇತರರ ಬಲವಂತದ ಮತಾಂತರಗಳು ಎಂದಿಗೂ ನಡೆದಿಲ್ಲ ಎಂಬುದನ್ನು ಈ ಘಟನೆಗಳು ಸಾಬೀತುಪಡಿಸುತ್ತವೆ.

  ಮಹಿಳೆಯರೊಂದಿಗಿನ ನಡವಳಿಕೆ

  ಪ್ರವಾದಿಯವರು ಮಹಿಳೆಯರ ಹಕ್ಕುಗಳನ್ನು ಸ್ಥಾಪಿಸಿ, ಮಹಿಳಾ ಸಬಲೀಕರಣವನ್ನು ಪ್ರೋತ್ಸಾಹಿಸಿದರು. ಮಹಿಳೆಯರನ್ನು ಕೆಟ್ಟದಾಗಿ ನಡೆಸಿಕೊಳ್ಳುವುದು ಮತ್ತು ಹೆಣ್ಣು ಮಕ್ಕಳನ್ನು ಕೊಲ್ಲುವುದರಲ್ಲಿ ಹೆಮ್ಮೆಪಡುತ್ತಿದ್ದಂತಹ ಸಮಾಜವನ್ನು ಅವರು ಬದಲಾಯಿಸಿದರು. ಪ್ರಪಂಚದ ಇತರ ಭಾಗಗಳಲ್ಲಿ ಮುಂದೆಷ್ಟೋ ಶತಮಾನಗಳಲ್ಲೂ ಕೇಳಬರದಂತಹ ಸಂಪಾದಿಸಲು, ಅಧ್ಯಯನ ಮಾಡಲು, ಉತ್ತರಾಧಿಕಾರತ್ವ ಪಡೆಯಲು, ತಮ್ಮ ಜೀವನ ಸಂಗಾತಿಯನ್ನು ಆಯ್ಕೆ ಮಾಡಲು, ಮರುಮದುವೆ, ವಿಚ್ಛೇದನ, ಸ್ವಂತ ಆಸ್ತಿ ಇತ್ಯಾದಿಗಳ ಹಕ್ಕುಗಳು ಮಹಿಳೆಯರಿಗಿವೆ ಎಂದು ಅವರು ಘೋಷಿಸಿದರು. ಅವರು ಬೋಧನೆಗಳ ಮೂಲಕ ಮಹಿಳೆಯರ ಸ್ಥಾನಮಾನವನ್ನು ಹೆಚ್ಚಿಸಿದರು:

  ತಮ್ಮ ಹೆಂಡತಿಯರಿಗೆ ಯಾರು ಉತ್ತಮರೋ ಅವರೇ ಜನರಲ್ಲಿ ಉತ್ತಮರು

  ನಮ್ಮ ಪ್ರೀತಿ ಮತ್ತು ಗೌರವಕ್ಕೆ ಅತ್ಯಂತ ಅರ್ಹ ವ್ಯಕ್ತಿ ನಮ್ಮ ತಾಯಿ.

  ತಾಯಿಯ ಪಾದದಲ್ಲಿ ಸ್ವರ್ಗವಿದೆ

  ಯುದ್ಧಗಳು – ಏಕೆ?

  ಯಾವುದೇ ರಾಜ್ಯದ ವಿರುದ್ಧ ಸಮರ ಸಾರಿದಾಗ ಪ್ರಜೆಗಳನ್ನು ರಕ್ಷಿಸುವುದು ಆಡಳಿತಗಾರನ ಕರ್ತವ್ಯವಾಗೀರುತ್ತದೆ. ಉದಾಹರಣೆಗೆ: ಕಾರ್ಗಿಲ್ ಯುದ್ಧ. ಪ್ರವಾದಿಯವರು ನಡೆಸಿದ ಯುದ್ಧಗಳು ಒಂದೇ ಸ್ವರೂಪದ್ದಾಗಿದ್ದವು. ಯುದ್ಧಗಳು ದಬ್ಬಾಳಿಕೆಯ ವಿರುದ್ಧ ಹೋರಾಡಲು ಮತ್ತು ತನ್ನ ರಾಜ್ಯದ ನಾಗರಿಕರನ್ನು ರಕ್ಷಿಸಲಾಗಿದ್ದವು. ಶಾಂತಿ ಕಾಪಾಡುವುದು ಇದರ ಉದ್ದೇಶವಾಗಿತ್ತು. ಕುರಾನ್‌ನಲ್ಲಿ ದೇವರು ಪ್ರವಾದಿಗೆ ಹೇಳುತ್ತಾನೆ:

  ಮತ್ತು ಶತ್ರು ಶಾಂತಿಯನ್ನು ಬಯಸಿದರೆ [ಮತ್ತು ಹೋರಾಟವನ್ನು ನಿಲ್ಲಿಸಿದರೆ], ನೀವು ಶಾಂತಿಯ ಕಡೆಗೆ ಒಲವು ತೋರಬೇಕು.

  ಕುರಾನ್ ಅಧ್ಯಾಯ 8: ಸೂಕ್ತಿ 61

  ಪ್ರವಾದಿ ಮುಹಮ್ಮದ್ ಅವರ 20 ಪ್ರಸಿದ್ಧ ಉಲ್ಲೇಖಗಳು

  ಪ್ರವಾದಿ ಮುಹಮ್ಮದ್ – ಕ್ರೈಸ್ತ ಧರ್ಮಗ್ರಂಥಗಳಲ್ಲಿ ಮುನ್ಸೂಚಿಸಲಾಗಿದ್ದಾರೆ

  ಮಾಜಿ ಕ್ಯಾಥೋಲಿಕ್ ಬಿಷಪ್ ರೆವರೆಂಡ್ ಡೇವಿಡ್ ಬೆಂಜಮಿನ್ ಕೆಲ್ಡಾನಿ ಅವರು 1928 ರಲ್ಲಿ “ಮುಹಮ್ಮದ್ ಇನ್ ದಿ ಬೈಬಲ್” ಎಂಬ ಪುಸ್ತಕವನ್ನು ಬರೆದರು, ಇದರಲ್ಲಿ ಪ್ರವಾದಿ ಮುಹಮ್ಮದ್ ಬೈಬಲ್‌ನಲ್ಲಿ ಡ್ಯೂಟ್ರೋನಮಿ 18: 18 ಮತ್ತು 19, ಡ್ಯೂಟ್ರೋನಮಿ 33: 2, ಜಾನ್ 1:21, ಜಾನ್ 14:16, ಜಾನ್ 15:26 ಮತ್ತು ಜಾನ್ 16:7 ರಲ್ಲಿ ಮುನ್ಸೂಚಿಸಲಾಗಿದೆ ಎಂದು ಸಾಬೀತುಪಡಿಸಿದರು.

  ಇಡೀ ಮಾನವಕುಲಕ್ಕೆ ಮಾದರಿ

  ಹಲವಾರು ಪ್ರವಾದಿಗಳು ತಮ್ಮ ಬುಡಕಟ್ಟು ಅಥವಾ ರಾಷ್ಟ್ರಗಳಿಗೆ ದೇವರಿಂದ ನೇಮಿಸಲ್ಪಟ್ಟರು. ಅವರಲ್ಲಿ ಕೆಲವರಿಗೆ ಧರ್ಮಗ್ರಂಥಗಳನ್ನೂ ನೀಡಲಾಯಿತು. ಆದಾಗ್ಯೂ, ಜನರು ತಮ್ಮ ಸ್ವಾರ್ಥಕ್ಕಾಗಿ ಅದರಲ್ಲಿರುವ ನಿಜವಾದ ಸಂದೇಶವನ್ನು ಬದಲಾಯಿಸಿದರು ಮತ್ತು ಭ್ರಷ್ಟಗೊಳಿಸಿದರು. ಆದ್ದರಿಂದ ದೇವರು ಅಂತಿಮ ಅವತರಣೆಯಾದ ಪವಿತ್ರ ಕುರಾನ್ ಪ್ರವಾದಿ ಮುಹಮ್ಮದ್‌ಗೆ ಕಳುಹಿಸಿಕೊಟ್ಟನು ಮತ್ತು ಅದನ್ನು ಭ್ರಷ್ಟಾಚಾರ ಮತ್ತು ಬದಲಾವಣೆಯಿಂದ ರಕ್ಷಿಸಿದನು.

  ಪ್ರವಾದಿ ಮುಹಮ್ಮದ್ ಅರಬ್ ರಾಷ್ಟ್ರೀಯತಾವಾದಿ ನಾಯಕನಾಗಿರಲಿಲ್ಲ. ಅವರ ರಾಷ್ಟ್ರೀಯ ಮೂಲ ಅಥವಾ ಜನಾಂಗವನ್ನು ಲೆಕ್ಕಿಸದೆ ಎಲ್ಲಾ ಮಾನವಕುಲದ ಬಗ್ಗೆ ಪ್ರೀತಿ ಮತ್ತು ಕಾಳಜಿಯೊಂದಿಗೆ ದೇವರು ಅವರನ್ನು ಇಡೀ ಜಗತ್ತಿಗೆ ಕರುಣೆಯಾಗಿ ಕಳುಹಿಸಿದನು. ಅವರು ಜಾಗತಿಕ ಸಹೋದರತ್ವವನ್ನು (Universal brotherhood) ಬೋಧಿಸಿದರು ಮತ್ತು ಒಬ್ಬ ದೇವರಿಂದ ರಚಿಸಲ್ಪಟ್ಟ ಒಂದೇ ಮಾನವ ಕುಟುಂಬದ ಸದಸ್ಯರಂತೆ ಎಲ್ಲರನ್ನೂ ಕಂಡರು. ಅವರ ಸಂದೇಶವು ಎಲ್ಲಾ ಮಾನವ ಸಮಸ್ಯೆಗಳ ಮೂಲ ಕಾರಣವನ್ನು ತಿಳಿಸುತ್ತದೆ ಮತ್ತು ದೇವರ ಆಜ್ಞೆಗಳಿಗೆ ಅನುಸಾರವಾಗಿ ಜೀವನವನ್ನು ನಡೆಸುವ ಪರಿಹಾರವನ್ನು ಒದಗಿಸುತ್ತದೆ.

  ದೇವರು ತನ್ನ ಪ್ರವಾದಿಗಳಾಗಲು ಉತ್ತಮ ಜನರನ್ನು ಮಾತ್ರ ಆರಿಸಿಕೊಂಡನು. ಪ್ರವಾದಿ ಮುಹಮ್ಮದ್ ಅವರು ಮನುಕುಲಕ್ಕೆ ಕಳುಹಿಸಲಾದ ಕೊನೆಯ ಪ್ರವಾದಿಯಾಗಿದ್ದರು ಮತ್ತು ಆದ್ದರಿಂದ ನಮಗೆಲ್ಲರಿಗೂ ಅತ್ಯುತ್ತಮ ಮಾದರಿಯಾಗಿದ್ದಾರೆ. ಆದ್ದರಿಂದ, ನಾವು ಪ್ರತಿಯೊಬ್ಬರೂ ಪ್ರವಾದಿ ಮುಹಮ್ಮದ್ ತಂದ ದೈವಿಕ ಸಂದೇಶವನ್ನು ಅರ್ಥಮಾಡಿಕೊಳ್ಳುವುದು ಮತ್ತು ಅವರ ಬೋಧನೆಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುವುದು ಇಹಲೋಕದಲ್ಲಿ ಮಾತ್ರವಲ್ಲದೆ ಮರಣಾನಂತರದ ಜೀವನದಲ್ಲೂ ಯಶಸ್ಸನ್ನು ಸಾಧಿಸಲು ಆವಶ್ಯಕವಾಗಿದೆ.

  ಪ್ರವಾದಿ ಮುಹಮ್ಮದ್ ಬಗೆಗೆ ಪ್ರಸಿದ್ಧ ವ್ಯಕ್ತಿಗಳು

  ಪ್ರವಾದಿ ಮುಹಮ್ಮದ್ ಕುರಿತು ಮಹಾತ್ಮ ಗಾಂಧೀಜಿ

  ಮಹಾತ್ಮ ಗಾಂಧೀಜಿ 1924 ರಲ್ಲಿ “ಯಂಗ್ ಇಂಡಿಯಾ” ದಲ್ಲಿ ದೇವರ ಅಂತಿಮ ಪ್ರವಾದಿ – ಪ್ರವಾದಿ ಮುಹಮ್ಮದ್ ಬಗ್ಗೆ ಈ ಕೆಳಗಿನಂತೆ ಹೇಳಿದ್ದರು:

  ಇಂದು ಕೋಟ್ಯಾಂತರ ಮನುಷ್ಯರ ಹೃದಯಗಳ ಮೇಲೆ ನಿರ್ವಿವಾದವಾಗಿ ಹಿಡಿತ ಹೊಂದಿರುವ ಒಬ್ಬರ ಜೀವನದ ಅತ್ಯುತ್ತಮವಾದುದನ್ನು ನಾನು ತಿಳಿದುಕೊಳ್ಳಲು ಬಯಸುತ್ತೇನೆ … ಆ ದಿನಗಳಲ್ಲಿ ಇಸ್ಲಾಂಗೆ ಸ್ಥಾನವನ್ನು ಗಳಿಸಿದ್ದು ಕತ್ತಿಯಲ್ಲ ಎಂದು ನಾನು ಎಂದಿಗಿಂತಲೂ ಹೆಚ್ಚು ಮನವರಿಕೆಗೊಂಡೆ. ಅದು ಕಟ್ಟುನಿಟ್ಟಾದ ಸರಳತೆ, ಪ್ರವಾದಿಯವರ ಸಂಪೂರ್ಣ ಸ್ವತ್ಯಾಗ, ಪ್ರತಿಜ್ಞೆಗಳ ಬಗ್ಗೆ ನಿಷ್ಠುರವಾದ ಗೌರವ, ಅವರ ಸ್ನೇಹಿತರು ಮತ್ತು ಅನುಯಾಯಿಗಳಿಗೆ ಅವರ ತೀವ್ರವಾದ ಭಕ್ತಿ, ಅವರ ನಿರ್ಭೀತತೆ, ಅವರ ನಿರ್ಭಯತೆ, ದೇವರು ಮತ್ತು ಅವರ ಸ್ವಂತ ಧ್ಯೇಯದಲ್ಲಿ ಅವರ ಸಂಪೂರ್ಣ ನಂಬಿಕೆ. ಇವುಗಳು, ಹಾಗೂ ಖಡ್ಗವಲ್ಲ, ಎಲ್ಲವನ್ನೂ (ನಿರ್ವಿಘ್ನವಾಗಿ) ಅವರ ಮುಂದೆ ಸಾಗಿಸಿತು ಮತ್ತು ಪ್ರತಿ ಅಡಚಣೆಯನ್ನು ಮೀರಿಸಿತು. ನಾನು (ಪ್ರವಾದಿಯವರ ಜೀವನಚರಿತ್ರೆಯ) ಎರಡನೇ ಸಂಪುಟವನ್ನು ಮುಚ್ಚಿದಾಗ, ಆ ಮಹಾನ್ ಜೀವನವನ್ನು ಓದಲು ನನಗೆ ಇನ್ನೂ ಹೆಚ್ಚು ಇರಲಿಲ್ಲ ಎಂದು ನಾನು ವಿಷಾದಿಸಿದೆ.

  1924 ರಲ್ಲಿ “ಯಂಗ್ ಇಂಡಿಯಾ”

  ನಿಮಗೆ ಇಷ್ಟವಾಗ ಬಹುದಾದಂತಹ ಲೇಖನಗಳು

  WHAT OTHERS ARE READING

  Most Popular