More

    Choose Your Language

    ನೀವು ಜೀವನದಿಂದ ಬೇಸತ್ತಿದ್ದೀರಾ? ಆತ್ಮಹತ್ಯೆಯ ಆಲೋಚನೆಗಳನ್ನು ದೂರಮಾಡುವುದು ಹೇಗೆ?

    ನಿಮ್ಮ ಜೀವನದಲ್ಲಿರುವ ಕಷ್ಟಗಳ ಬಗ್ಗೆ ನೀವು ಯೋಚಿಸುವ ವಿಧಾನವನ್ನು ಬದಲಾಯಿಸುವ ಮೂಲಕ, ಭರವಸೆ ಮತ್ತು ಸಾಂತ್ವನವನ್ನು ಹುಟ್ಟುಹಾಕಲು, ಆಧುನಿಕ ಮನೋವೈದ್ಯರು ಬಳಸುವ ಕಾಗ್ನಿಟಿವ್ ಥೆರಪಿ (cognitive therapy) ಚಿಕಿತ್ಸೆಯನ್ನು ಕುರಾನ್ ಬಳಸುತ್ತದೆ. 1400 ವರ್ಷಗಳ ಹಿಂದೆ ಅವತೀರ್ಣವಾದ ಕುರಾನ್ ಕಾಗ್ನಿಟಿವ್ ಥೆರಪಿಯನ್ನು ಬಳಸಿರುವುದೇ ಒಂದು ಅದ್ಭುತವಾಗಿದೆ.

    ನಿಮಗೆ ಜೀವನವೇ ಹೊರೆಯಾಗಿ ಕಾಣುತ್ತದೆಯೇ? ನಿಮ್ಮಲ್ಲಿ ಆತ್ಮಹತ್ಯೆಯ ಆಲೋಚನೆಗಳು ಮೂಡುತ್ತಿವೆಯೇ? ಕೆಟ್ಟದ್ದೆಲ್ಲವೂ ಎಂದಿಗೂ ಕೊನೆಗೊಳ್ಳುವುದಿಲ್ಲ ಎಂದು ನಿಮಗೆ ಅನಿಸುತ್ತಿದೆಯೇ? ಜೀವನದ ಇಂತಹದೊಂದು ಕೆಟ್ಟ ಹಂತದಿಂದ ಹೊರಬರಲು ನೀವು ಬಯಸುವಿರಾ? ನೀವು ಆತ್ಮಹತ್ಯೆಯ ಆಲೋಚನೆಗಳನ್ನು ದೂರಮಾಡಲು ಬಯಸುವಿರಾ? ಹೌದು ಎಂದಾದರೆ, ಈ ಲೇಖನವು ನಿಮಗೆಂದೇ ಆಗಿದೆ.

    ಈ ಲೇಖನದಲ್ಲಿ, ಕುರಾನ್‌ನ 93 ನೇ ಅಧ್ಯಾಯವನ್ನು ನಾವು ನೋಡಲಿದ್ದೇವೆ – ಇದು ಖಿನ್ನತೆಗೆ (depression) ಒಳಗಾದವರೆಲ್ಲರಿಗೂ ಭರವಸೆ ಮತ್ತು ಸಾಂತ್ವನವನ್ನು ನೀಡುತ್ತದೆ ಮತ್ತು ಆತ್ಮಹತ್ಯಾ ಆಲೋಚನೆಗಳನ್ನು ದೂರಮಾಡಲು ಸಹಾಯ ಮಾಡುತ್ತದೆ.

    ಪ್ರವಾದಿ ಮುಹಮ್ಮದ್ ಅವರ ಜೀವನದ ದುಃಖದ ಒಂದು ಹಂತದಲ್ಲಿ ದೇವರು ಕುರಾನ್‌ನ ಈ ಅಧ್ಯಾಯವನ್ನು ಅವತೀರ್ಣಗೊಳಿಸಿದನು.

    ಜೀವನದಲ್ಲಿ ಒಳ್ಳೆಯದು ಮತ್ತು ಕೆಟ್ಟದು ಒಂದರ ಹಿಂದೆ ಒಂದರಂತೆ ಬರುತ್ತವೆ

    ಬೆಳಗಿನ ಸೂರ್ಯನ ಬೆಳಕು ಮತ್ತು ರಾತ್ರಿ ಕತ್ತಲಾದಾಗ (ಇವುಗಳ ಪ್ರಮಾಣವಾಗಿ)!

    ಕುರಾನ್ ಅಧ್ಯಾಯ 93 ಸೂಕ್ತಿಗಳು 1-2

    ಈ ಅಧ್ಯಾಯವು ಬೆಳಿಗ್ಗೆ ಕಾಣಿಸಿಕೊಳ್ಳುವ ಸೂರ್ಯನ ಬೆಳಕು ಮತ್ತು ಮತ್ತು ರಾತ್ರಿಯ ಕತ್ತಲಿನ ಮೇಲೆ ಪ್ರಮಾಣ ಮಾಡುವ ಸೂಕ್ತಿಗಳೊಂದಿಗೆ ಪ್ರಾರಂಭವಾಗುತ್ತದೆ.

    ಹಗಲು ರಾತ್ರಿ ಒಂದರ ಹಿಂದೆ ಒಂದಾಗಿ ಬರುವಂತೆ, ಜೀವನದಲ್ಲಿ ಒಳ್ಳೆಯದು ಮತ್ತು ಕೆಟ್ಟದು ಕೂಡ ಹೀಗೆಯೇ ಒಂದರ ಹಿಂದೆ ಒಂದರಂತೆ ಬರುತ್ತವೆ. ಯಾರೂ ಕೂಡ ವರ್ಷಗಟ್ಟಲೇ ಕೇವಲ ಸಂತೋಷ ಮಾತ್ರ ಅನುಭವಿಸಿಲ್ಲ, ಹಾಗೆಯೇ ಯಾರೂ ವರ್ಷಗಟ್ಟಲೇ ಕೇವಲ ನೋವು ಅನುಭವಿಸಿಲ್ಲ. ಬದುಕಿನ ಈ ವಾಸ್ತವವನ್ನು ಈ ಸೂಕ್ತಿಗಳು ನಮ್ಮ ಗಮನಕ್ಕೆ ತರುತ್ತವೆ.

    ರಾತ್ರಿಯ ಕತ್ತಲೆಯ ನಂತರ ಹಗಲಿನ ಬೆಳಕೇ ಅನುಸರಿಸುವುದು

    ರಾತ್ರಿಯ ಕತ್ತಲೆಯನ್ನು ಅನುಭವಿಸಿದ ನಂತರ ನೀವು ಹಗಲಿನ ಬೆಳಕನ್ನು ಹೇಗೆ ನೋಡಲು ಸಿಗುವುದೋ ಹಾಗೆಯೇ, ಎಲ್ಲಾ ಕಷ್ಟಗಳ ನಂತರ ನೀವು ಒಳ್ಳೆಯದನ್ನು ಅನುಭವಿಸುವಿರಿ. ನೆನಪಿಡಿ, ಕಷ್ಟಗಳ ಕಟ್ಟಾರಣ್ಯದಾಚೆ ಯಾವಾಗಲೂ ಬೆಳಕು ಇರುತ್ತದೆ.

    ದೇವರು ನಿಮ್ಮ ಕೈಬಿಟ್ಟಿಲ್ಲ

    ನಿಮ್ಮ ದೇವರು ನಿಮ್ಮ ಕೈಬಿಟ್ಟಿಲ್ಲ ಅಥವಾ ನಿಮ್ಮನ್ನು ದ್ವೇಷಿಸುವುದಿಲ್ಲ.

    ಕುರಾನ್ ಅಧ್ಯಾಯ 93 ಸೂಕ್ತಿ 3

    ನೀವು ಕಷ್ಟಗಳ ಮೂಲಕ ಸಾಗುವಾಗ, ದೇವರು ನಿಮ್ಮ ಕೈಬಿಟ್ಟಿದ್ದಾನೆ ಮತ್ತು ದೇವರು ನಿಮ್ಮನ್ನು ದ್ವೇಷಿಸುವುದರಿಂದ ಇವೆಲ್ಲವೂ ಆಗುತ್ತಿದೆ ಎಂದು ನೀವು ಭಾವಿಸಬಹುದು. ದೇವರು ನಿಮ್ಮ ಕೈಬಿಟ್ಟಿಲ್ಲ ಮತ್ತು ಅವನು ನಿಮ್ಮನ್ನು ದ್ವೇಷಿಸುವುದಿಲ್ಲ ಎಂದು ಭರವಸೆ ನೀಡುವ ಮೂಲಕ ಈ ಸೂಕ್ತಿ ನಿಮಗೆ ಸಾಂತ್ವನ ನೀಡುತ್ತದೆ.

    ಕಷ್ಟದ ಸಮಯ ಎಂದಿದ್ದರೂ ತಾತ್ಕಾಲಿಕ

    ಮುಂದಿನ ಎರಡು ಸೂಕ್ತಿಗಳು ಈ ಜೀವನದಲ್ಲಿ ನೀವು ಅನುಭವಿಸುವ ಎಲ್ಲಾ ಕಷ್ಟಗಳು ತಾತ್ಕಾಲಿಕವೆಂದು ಮನದಟ್ಟು ಮಾಡುತ್ತವೆ.

    (ಮುಂದೆ ಬರಬೇಕಿರುವ) ಭವಿಷ್ಯವು ನಿಮಗೆ ಹಿಂದಿನದಕ್ಕಿಂತ (ಹಿಂದೆ ಆಗಿರುವುದಕ್ಕಿಂತ) ಉತ್ತಮವಾಗಿರುತ್ತದೆ. ನಿಮ್ಮ ದೇವರು ನಿಮಗೆ ಎಷ್ಟು ದಯಪಾಲಿಸುವನೆಂದರೆ ನೀವು ಚೆನ್ನಾಗಿ ತೃಪ್ತರಾಗುವಿರಿ.

    ಕುರಾನ್ ಅಧ್ಯಾಯ 93 ಸೂಕ್ತಿಗಳು 4-5

    ನಿಮ್ಮ ಜೀವನದ ಬಗ್ಗೆ ಸ್ವಲ್ಪ ಯೋಚಿಸಿ. ನೀವು ಹಿಂದೆ ಅನುಭವಿಸಿದ ಎಲ್ಲಾ ಕಷ್ಟಗಳನ್ನು ನಿಮ್ಮ ನೆನಪಿಗೆ ತಂದುಕೊಳ್ಳಿ. ಈ ಎಲ್ಲಾ ಕಷ್ಟಗಳಿಂದ ನೀವು ಹೇಗೆ ಯಶಸ್ವಿಯಾಗಿ ಹೊರಬಂದಿದ್ದೀರಿ ಎಂದು ಯೋಚಿಸಿ. ನೀವು ಖಂಡಿತವಾಗಿಯೂ ಈಗಿರುವ ಕಷ್ಟದಿಂದಲೂ ಹೊರಬಂದು ಉತ್ತಮ ಭವಿಷ್ಯವನ್ನು ರೂಪಿಸುವಿರಿ ಎಂಬ ಭರವಸೆಯನ್ನು ಈ ಸೂಕ್ತಿಗಳು ನಿಮಗೆ ನೀಡುತ್ತವೆ.

    ದೇವರು ನಿಮಗೆ ಸಹಾಯ ಮಾಡಿದನು

    ಅವನು ನಿಮ್ಮನ್ನು ಅನಾಥನಾಗಿ ಕಂಡು ಆಶ್ರಯ ನೀಡಲಿಲ್ಲವೇ? ನೀವು ದಿಶಾಹೀನರಾಗಿರುವುದನ್ನು ಕಂಡು ಅವನು ನಿಮಗೆ ಮಾರ್ಗದರ್ಶನ ನೀಡಲಿಲ್ಲವೇ? ಅವನು ನಿಮ್ಮನ್ನು ಕಷ್ಟದಲ್ಲಿ ಕಂಡು ಸ್ವಾವಲಂಬಿಯನ್ನಾಗಿ ಮಾಡಲಿಲ್ಲವೇ?

    ಕುರಾನ್ ಅಧ್ಯಾಯ 93 ಸೂಕ್ತಿಗಳು 6-8

    ನೀವು ಚಿಕ್ಕ ಮಗುವಾಗಿದ್ದಾಗಿನಿಂದ ದೇವರು ನಿಮಗೆ ಅನೇಕ ರೀತಿಯಲ್ಲಿ ಸಹಾಯ ಮಾಡಿದ್ದಾನೆ. ದೇವರ ಸಹಾಯ ಮತ್ತು ಕರುಣೆಯಿಲ್ಲದೆ ನೀವು ಜೀವನದಲ್ಲಿ ಇಲ್ಲಿಯವರೆಗೆ ಸಾಗಲು ಸಾಧ್ಯವಿರಲಿಲ್ಲ. ಮುಂದಿನ ಮೂರು ಸೂಕ್ತಿಗಳು ನಿಮ್ಮನ್ನು ಕೇಳುತ್ತವೆ, ಹಿಂದೆ ನಿಮಗೆ ಅನೇಕ ರೀತಿಯಲ್ಲಿ ಸಹಾಯ ಮಾಡಿದ ದೇವರು ಈಗ ನಿಮಗೆ ಸಹಾಯ ಮಾಡುವುದಿಲ್ಲ ಎಂದು ನೀವೇಕೆ ಭಾವಿಸುತ್ತೀರಿ? ದೇವರ ಮೇಲಿನ ಭರವಸೆಯನ್ನು ಎಂದಿಗೂ ಕಳೆದುಕೊಳ್ಳಬೇಡಿ! ನೀವು ಈ ಹಿಂದೆ ದೇವರು ನಿಮಗೆ ಸಹಾಯ ಮಾಡಿದ ವಿವಿಧ ವಿಧಾನಗಳ ಬಗ್ಗೆ ಯೋಚಿಸಲು ಪ್ರಾರಂಭಿಸಿದರೆ ನೀವು ಆತ್ಮಹತ್ಯಾ ಆಲೋಚನೆಗಳನ್ನು ದೂರಮಾಡಬಹುದು ಮತ್ತು ಖಿನ್ನತೆಯಿಂದ ಹೊರಬರಬಹುದು.

    ಕೋಟಿಗಟ್ಟಲೆ ಜನ ಸಂಕಷ್ಟದಲ್ಲಿ ಸಿಲುಕಿದ್ದಾರೆ

    ಆದ್ದರಿಂದ ಅನಾಥರೊಂದಿಗೆ ಕಠೋರವಾಗಿ ವರ್ತಿಸಬೇಡಿ. (ಸಹಾಯಕ್ಕಾಗಿ) ಕೇಳುವವನನ್ನು ದ್ವೇಷಿಸಬೇಡಿ. ನಿಮ್ಮ ದೇವರ ಕೃಪೆವನ್ನು ಘೋಷಿಸಿ.

    ಕುರಾನ್ ಅಧ್ಯಾಯ 93 ಸೂಕ್ತಿಗಳು 9-11

    ಜಗತ್ತಿನಲ್ಲಿ ನಿಮಗಿಂತ ಕೆಟ್ಟ ಕಷ್ಟಗಳನ್ನು ಎದುರಿಸುತ್ತಿರುವ ಕೋಟಿಗಟ್ಟಲೆ ಜನರಿದ್ದಾರೆ. ಅನೇಕರಿಗೆ ಮನೆಯೂ ಇಲ್ಲ. ಇನ್ನೂ ಅನೇಕರಿಗೆ ತಿನ್ನಲು ಆಹಾರ ಸಿಗುವುದಿಲ್ಲ. ದೀರ್ಘಕಾಲದ ಕಾಯಿಲೆಗಳಿಂದ ಬಳಲುತ್ತಿರುವ ಅನೇಕ ಜನರಿದ್ದಾರೆ. ಹಲವರು ಹಾಸಿಗೆ ಹಿಡಿದಿದ್ದಾರೆ ಮತ್ತು ತಮ್ಮ ಬೆರಳನ್ನು ಸಹ ಎತ್ತಲು ಸಾಧ್ಯವಿಲ್ಲದ ಸ್ಥಿತಿಯಲ್ಲಿದ್ದಾರೆ. ನಿಮ್ಮ ದುಃಖವನ್ನು ಇತರರ ದುಃಖದೊಂದಿಗೆ ಹೋಲಿಸಿ ನೋಡಿ.

    ನೀವು ಅನುಭವಿಸುತ್ತಿರುವ ಎಲ್ಲಾ ಕಷ್ಟಗಳು ಇತರ ಅನೇಕರು ಅನುಭವಿಸುತ್ತಿರುವುದಕ್ಕಿಂತ ಕಷ್ಟಕರವಲ್ಲ ಎಂದು ನೀವು ಅರ್ಥಮಾಡಿಕೊಳ್ಳುವಿರಿ. ಕೊನೆಯ ಮೂರು ಸೂಕ್ತಿಗಳು ಈ ವಾಸ್ತವವನ್ನು ನಿಮಗೆ ನೆನಪಿಸುತ್ತವೆ ಮತ್ತು ಅಗತ್ಯವಿರುವವರಿಗೆ ಸಹಾಯ ಮಾಡುವ ಮೂಲಕ ದೇವರಿಗೆ ಕೃತಜ್ಞತೆ ಸಲ್ಲಿಸುವಂತೆ ತಿಳಿಸಿಕೊಡುತ್ತವೆ.

    ಸಾಮಾನ್ಯವಾಗಿ ಕಠಿಣ ಸಮಯ ಎದುರಿಸುತ್ತಿರುವಾಗ, ನೀವು ಇತರರಿಗೆ ಸಹಾಯ ಮಾಡುವ ಬಗ್ಗೆ ಯೋಚಿಸುವುದಿಲ್ಲ. ಇತರರಿಗೆ ಉಪಯುಕ್ತವಾದ ಕಾರ್ಯಗಳನ್ನು ಮಾಡಲು ಕುರಾನ್ ನಿಮ್ಮನ್ನು ಪ್ರೇರೇಪಿಸುತ್ತಿದೆ. ಈ ವರ್ತನೆಯಲ್ಲಿನ ಬದಲಾವಣೆ ಖಿನ್ನತೆಗೆ ಒಳಗಾದ ವ್ಯಕ್ತಿಗೆ ಅಥವಾ ಆತ್ಮಹತ್ಯೆಯನ್ನು ಗಂಭೀರವಾಗಿ ಪರಿಗಣಿಸುತ್ತಿರುವವರಿಗೆ ಬಹಳ ಸಹಾಯಕಾರಿಯಾಗ ಬಲ್ಲದು.

    ನಾನು ಯೋಚಿಸುವ ವಿಧಾನವನ್ನು ಬದಲಾಯಿಸುವುದರಿಂದ ಅಥವಾ ಇತರರಿಗೆ ಸಹಾಯ ಮಾಡುವುದರಿಂದ ನಮ್ಮ ಪರಿಸ್ಥಿತಿ ಸುಧಾರಿಸುವುದಾದರೂ ಹೇಗೆ ಎಂದು ನೀವು ಯೋಚಿಸಬಹುದು? ಈ ಪ್ರಶ್ನೆಗೆ ಉತ್ತರ ನೀವು “ಕಾಗ್ನಿಟಿವ್ ಥೆರಪಿ” ಅನ್ನು ಅರ್ಥಮಾಡಿಕೊಳ್ಳುವುದರಲ್ಲಿದೆ.

    ಕಾಗ್ನಿಟಿವ್ ಥೆರಪಿ

    ಅಮೇರಿಕನ್ ಸೈಕಲಾಜಿಕಲ್ ಅಸೋಸಿಯೇಶನ್‌ನ ವೆಬ್‌ಸೈಟ್‌ನ ಲೇಖನವೊಂದು ತಿಳಿಸುತ್ತದೆ:

    ಕಾಗ್ನಿಟಿವ್ ಬಿಹೇವಿಯರಲ್ ಥೆರಪಿ (CBT) ಮಾನಸಿಕ ಚಿಕಿತ್ಸೆಯ ಒಂದು ರೂಪವಾಗಿದ್ದು, ಖಿನ್ನತೆ, ಆತಂಕದ ಅಸ್ವಸ್ಥತೆಗಳು, ಮದ್ಯಪಾನ ಮತ್ತು ಮಾದಕವಸ್ತು ಬಳಕೆಯ ಸಮಸ್ಯೆಗಳು, ವೈವಾಹಿಕ ಸಮಸ್ಯೆಗಳು, ತಿನ್ನುವ ಅಸ್ವಸ್ಥತೆಗಳು ಮತ್ತು ತೀವ್ರ ಮಾನಸಿಕ ಅಸ್ವಸ್ಥತೆ ಸೇರಿದಂತೆ ಹಲವಾರು ಸಮಸ್ಯೆಗಳಿಗೆ ಪರಿಣಾಮಕಾರಿ ಎಂದು ನಿರೂಪಿಸಲಾಗಿದೆ.

    ಉಲ್ಲೇಖ: ಅಮೇರಿಕನ್ ಸೈಕಲಾಜಿಕಲ್ ಅಸೋಸಿಯೇಷನ್

    ಕಾಗ್ನಿಟಿವ್ ಥೆರಪಿಯಲ್ಲಿ ಮಾಡುವುದಾದರೂ ಏನು?

    ಕಾಗ್ನಿಟಿವ್ ಬಿಹೇವಿಯರಲ್ ಥೆರಪಿಯು ರೋಗಿಗಳ ಆಲೋಚನಾ ಮಾದರಿಯನ್ನು ಬದಲಾಯಿಸುವ ಪ್ರಯತ್ನಗಳನ್ನು ಒಳಗೊಂಡಿರುತ್ತದೆ. ಇದರಲ್ಲಿ ಬಳಸಲಾಗುವ ವಿಧಾನ ಹೀಗಿದೆ:

    1. ಸಮಸ್ಯೆಗಳನ್ನು ಸೃಷ್ಟಿಸುವ ಆಲೋಚನೆಯಲ್ಲಿನ ವಿರೂಪಗಳನ್ನು ಗುರುತಿಸಲು ಕಲಿಯುವುದು ಮತ್ತು ನಂತರ ಅವುಗಳನ್ನು ವಾಸ್ತವದ ಬೆಳಕಿನಲ್ಲಿ ಮರುಮೌಲ್ಯಮಾಪನ ಮಾಡುವುದು.
    2. ಇತರರ ನಡವಳಿಕೆ ಮತ್ತು ಪ್ರೇರಣೆಯ ಬಗ್ಗೆ ಹೆಚ್ಚು ತಿಳಿಯುವುದು.
    3. ಕಷ್ಟಕರ ಸಂದರ್ಭಗಳನ್ನು ನಿಭಾಯಿಸಲು ಸಮಸ್ಯೆಗಳನ್ನು ಪರಿಹರಿಸುವ ಕೌಶಲ್ಯಗಳನ್ನು ಬಳಸುವುದು.
    4. ತಮ್ಮ ಸ್ವಂತ ಸಾಮರ್ಥ್ಯಗಳಲ್ಲಿ ಹೆಚ್ಚಿನ ವಿಶ್ವಾಸವನ್ನು ಬೆಳೆಸಲು ಕಲಿಯುವುದು.

    ಕಾಗ್ನಿಟಿವ್ ಥೆರಪಿ (CBT) ಎಷ್ಟು ಪರಿಣಾಮಕಾರಿ?

    ಲೇಖನವು ಹೇಳುವುದೇನೆಂದರೆ:

    CBT ಜೀವನದ ಕಾರ್ಯನಿರ್ವಹಣೆ ಮತ್ತು ಗುಣಮಟ್ಟದಲ್ಲಿ ಗಮನಾರ್ಹ ಸುಧಾರಣೆಗೆ ಕಾರಣವಾಗುತ್ತದೆ ಎಂದು ಹಲವಾರು ಸಂಶೋಧನಾ ಅಧ್ಯಯನಗಳು ಸೂಚಿಸುತ್ತವೆ. ಅನೇಕ ಅಧ್ಯಯನಗಳಲ್ಲಿ, CBT ಇತರ ರೀತಿಯ ಮಾನಸಿಕ ಚಿಕಿತ್ಸೆ ಅಥವಾ ಮನೋವೈದ್ಯಕೀಯ ಔಷಧಿಗಳಷ್ಟೇ ಅಥವಾ ಇನ್ನೂ ಹೆಚ್ಚು ಪರಿಣಾಮಕಾರಿ ಎಂದು ನಿರೂಪಿಸಲಾಗಿದೆ.

    ಉಲ್ಲೇಖ: ಅಮೇರಿಕನ್ ಸೈಕಲಾಜಿಕಲ್ ಅಸೋಸಿಯೇಷನ್

    ಖಂಡಿತವಾಗಿಯೂ CBTಯಲ್ಲಿ ಅಭಿವೃದ್ಧಿಪಡಿಸಲಾದ ವಿಧಾನಗಳು ವಾಸ್ತವವಾಗಿ ಬದಲಾವಣೆಯನ್ನು ಉಂಟುಮಾಡುತ್ತವೆ ಎಂಬುದಕ್ಕೆ ಸಾಕಷ್ಟು ವೈಜ್ಞಾನಿಕ ಪುರಾವೆಗಳಿವೆ. ಈ ರೀತಿಯಾಗಿ, CBT ಅನೇಕ ಇತರ ಮಾನಸಿಕ ಚಿಕಿತ್ಸೆಗಳಿಂದ ಭಿನ್ನವಾಗಿದೆ.

    ಉಲ್ಲೇಖ: ಅಮೇರಿಕನ್ ಸೈಕಲಾಜಿಕಲ್ ಅಸೋಸಿಯೇಷನ್

    ಕುರಾನ್ ಈ ಕಾಗ್ನಿಟಿವ್ ಥೆರಪಿಯನ್ನು ಬಳಸುತ್ತದೆ

    ಕುರಾನ್‌ನ ಈ ಅಧ್ಯಾಯದಲ್ಲಿ (ಅಧ್ಯಾಯ 93) ಬಳಸಲಾದ ವಿಧಾನದ ಬಗ್ಗೆ ನೀವು ಎಚ್ಚರಿಕೆಯಿಂದ ಯೋಚಿಸಿದರೆ, ನಿಮ್ಮ ಜೀವನದಲ್ಲಿನ ಕಷ್ಟಗಳ ಬಗ್ಗೆ ನೀವು ಯೋಚಿಸುವ ವಿಧಾನವನ್ನು ಬದಲಾಯಿಸಲು ಕುರಾನ್ ಕಾಗ್ನಿಟಿವ್ ಥೆರಪಿಯನ್ನು ಬಳಸುತ್ತದೆ; ಹಾಗೆಯೇ ಇತರರಿಗೆ ಸಹಾಯ ಮಾಡಲು ನಿಮ್ಮನ್ನು ಪ್ರೇರೇಪಿಸುವ ಮೂಲಕ ನಿಮ್ಮ ವರ್ತನೆಯಲ್ಲಿ ಬದಲಾವಣೆಯನ್ನು ಮೂಡಿಸುತ್ತದೆ ಎಂದು ನೀವು ನೋಡುತ್ತೀರಿ.

    1400 ವರ್ಷಗಳ ಹಿಂದೆ ಅವತೀರ್ಣಗೊಂಡ ಕುರಾನ್, ಆಧುನಿಕ ಮನೋವೈದ್ಯರು ಅಳವಡಿಸಿಕೊಂಡ ಚಿಕಿತ್ಸಾ ತಂತ್ರವಾದ ಕಾಗ್ನಿಟಿವ್ ಥೆರಪಿಯನ್ನು ಬಳಸುದನ್ನು ಕಂಡರೆ ಆಶ್ಚರ್ಯವಾಗುತ್ತದೆ.

    ಆತ್ಮಹತ್ಯಾ ಆಲೋಚನೆಗಳನ್ನು ತಪ್ಪಿಸಿ ಮತ್ತು ಖಿನ್ನತೆಯಿಂದ ಹೊರಬನ್ನಿ

    ಕುರಾನ್ ತಿಳಿಸಿಕೊಡುವ ಆಲೋಚನಾ ಪ್ರಕ್ರಿಯೆ ಮತ್ತು ನಡವಳಿಕೆಯ ಬದಲಾವಣೆಗಳನ್ನು ಅಳವಡಿಸಿಕೊಳ್ಳುವ ಮೂಲಕ ನಾವು ನಮ್ಮ ಖಿನ್ನತೆಯಿಂದ ಹೊರಬರಬಹುದು ಮತ್ತು ಆತ್ಮಹತ್ಯಾ ಆಲೋಚನೆಗಳನ್ನು ತಪ್ಪಿಸಬಹುದು ಎಂಬುದರಲ್ಲಿ ಯಾವುದೇ ಸಂದೇಹವಿಲ್ಲ.

    ಕುರಾನ್ ಎಂದರೇನು?

    ಕುರಾನ್ ಕೊನೆಯ ಮತ್ತು ಅಂತಿಮ ಪ್ರವಾದಿಯಾದ ಪ್ರವಾದಿ ಮುಹಮ್ಮದ್ ಅವರಿಗೆ ಅವತೀರ್ಣಗೊಳಿಸಲಾದ ಕೊನೆಯ ಮತ್ತು ಅಂತಿಮ ಗ್ರಂಥವಾಗಿದೆ ಎಂದು ಮುಸ್ಲಿಮರು ನಂಬುತ್ತಾರೆ. ಸಂಪೂರ್ಣ ಕುರಾನ್ ದೇವರ ನುಡಿಯಾಗಿದೆ ಮತ್ತು ಜೀವನದ ಎಲ್ಲಾ ಅಂಶಗಳಲ್ಲಿ ಮಾನವಕುಲಕ್ಕೆ ಮಾರ್ಗದರ್ಶನ ನೀಡುವ ಸೂಚನಾ ಕೈಪಿಡಿಯಾಗಿದೆ.

    ಓ ಮನುಕುಲ! ನಿಶ್ಚಯವಾಗಿಯೂ, ನಿಮ್ಮ ದೇವರಿಂದ ಪ್ರಾಮಾಣಿಕವಾದ ಸಲಹೆಯು ನಿಮ್ಮ ಬಳಿಗೆ ಬಂದಿದೆ, ಮನಸ್ಸಿನಲ್ಲಿರುವುದನ್ನು ಗುಣಪಡಿಸುತ್ತದೆ, ಮಾರ್ಗದರ್ಶಕನ ಮತ್ತು (ಅದನ್ನು) ನಂಬುವವರಿಗೆ ಕರುಣೆಯಾಗಿದೆ.

    ಕುರಾನ್ ಅಧ್ಯಾಯ 10 ಸೂಕ್ತಿ 57

    ನಿಮಗೆ ಇಷ್ಟವಾಗ ಬಹುದಾದಂತಹ ಲೇಖನಗಳು

    ಒಬ್ಬ ದೇವರೋ ಅಥವಾ ಅನೇಕ ದೇವರುಗಳೋ?

    Is there life after death?

    ಕುರಾನ್ ಹಿಂದೂಗಳನ್ನು ಕಾಫಿರ್ ಎಂದು ನಿಂದಿಸುತ್ತಿದೆಯೇ?

    ಎಂದಾದರೂ ಭಾರತ ಮುಸ್ಲಿಂ ದೇಶವಾಗಬಹುದೆ?

    Uniform Civil Code – not just a Muslim issue

    WHAT OTHERS ARE READING

    Most Popular