More

    Choose Your Language

    ಅತ್ಯಂತ ಧಾರ್ಮಿಕ ಆದರೆ ಕೆಟ್ಟ ವ್ಯಕ್ತಿ

    ನಾವು ನಮ್ಮ ಸುತ್ತ ಮುತ್ತ ಇರುವವರಲ್ಲಿ ಕೆಲವರು ತುಂಬಾ ಧಾರ್ಮಿಕರು, ಆದರೆ ಅದೇ ಸಮಯದಲ್ಲಿ ತುಂಬಾ ಕೆಟ್ಟವರಾಗಿರುವ ಜನರನ್ನು ನೋಡುತ್ತೇವೆ. ಇದು ಹೇಗೆ ಸಾಧ್ಯ? ಹೆಚ್ಚಿನ ಜನರು ದೇವರನ್ನು ಮತ್ತು ಅವನ ನ್ಯಾಯವನ್ನು ತಪ್ಪಾಗಿ ಅರ್ಥೈಸಿಕೊಂಡಿದ್ದಾರೆ. ಬಹಳಷ್ಟು ಪೂಜೆ ಪುನಸ್ಕಾರ ಮಾಡುವುದರಿಂದ ದೇವರು ಮಾನವೀಯತೆಯ ವಿರುದ್ಧ ತಮ್ಮ ಪಾಪಗಳನ್ನು ನಿರ್ಲಕ್ಷಿಸುತ್ತಾನೆ ಎಂದು ಅವರು ಭಾವಿಸುತ್ತಾರೆ. ಈ ಆಲೋಚನೆ ಸರಿಯೇ?

    ಮುನ್ನುಡಿ

    “ಅತ್ಯಂತ ಧಾರ್ಮಿಕ, ಆದರೆ ಕೆಟ್ಟ ವ್ಯಕ್ತಿ” ಒಂದು ವಿಪರ್ಯಾಸದಂತೆ ಕಾಣಿಸಬಹುದು ಆದರೆ ದುರದೃಷ್ಟವಶಾತ್, ಇದೊಂದು ವಾಸ್ತವವಾದ ವಿಷಯ. ಈ ಜಗತ್ತಿನಲ್ಲಿ, ನಾವು ತುಂಬಾ ಧಾರ್ಮಿಕರು, ಆದರೆ ಅದೇ ಸಮಯದಲ್ಲಿ ತುಂಬಾ ಕೆಟ್ಟವರಾಗಿರುವ ಜನರನ್ನು ನೋಡುತ್ತೇವೆ. ಹಾಗಾದರೆ ಅವರು ದೇವರನ್ನು ಮತ್ತು ಅವನ ನ್ಯಾಯವನ್ನು ತಪ್ಪಾಗಿ ಅರ್ಥೈಸಿಕೊಂಡಿದ್ದಾರೆಯೇ? ಬನ್ನಿ ಕಂಡುಹಿಡಿಯೋಣ.

    ಸಾಮಾನ್ಯವಾಗಿ ಧರ್ಮದ ಬಗ್ಗೆ ನಮ್ಮ ನಿಲುವು ಏನು?

    ಧರ್ಮವನ್ನು ಚರ್ಚಿಸುವಾಗ, ಅನೇಕ ಜನರು ಮೊದಲು ವಿವಿಧ ರೀತಿಯ ಪೂಜೆ ಪುನಸ್ಕಾರಗಳನ್ನು ಪರಿಗಣಿಸುತ್ತಾರೆ. ಹೆಚ್ಚಿನ ಜನರು ಆಧ್ಯಾತ್ಮಿಕ ಅಂಶಗಳು ಮತ್ತು ಅವರ ವೈಯಕ್ತಿಕ ಜೀವನಕ್ಕೆ ಸಂಬಂಧಿಸಿದ ಇತರ ವಿಷಯಗಳಾದ ಜನನದ ನಂತರದ ವಿಧಿಗಳು, ಮದುವೆ, ವಿಚ್ಛೇದನ, ಕೌಟುಂಬಿಕ ವ್ಯವಹಾರಗಳು, ಆರೋಗ್ಯಕರ ಮತ್ತು ಯಶಸ್ವಿ ಜೀವನ, ಸಾವಿನ ನಂತರದ ಅಂತ್ಯಕ್ರಿಯೆ ಇತ್ಯಾದಿಗಳ ಬಗ್ಗೆ ವಿವರವಾಗಿ ಹೋಗುತ್ತಾರೆ. ಆದರೆ, ಅವರು ತಮ್ಮ ಸುತ್ತ ಮುತ್ತಲಿನ ಮನುಷ್ಯರೊಂದಿಗಿನ ವರ್ತನೆಯ ಬಗ್ಗೆ ಹೆಚ್ಚಿನ ಗಮನವನ್ನು ನೀಡುವುದಿಲ್ಲ..

    ಕೆಲವರು ಭಕ್ತಿಯಿಂದ ದೇವರನ್ನು ಪೂಜಿಸುತ್ತಾರೆ ಆದರೆ, ಜನರಿಗೆ ಮೋಸ ಮಾಡುತ್ತಾರೆ. ಇದರ ಹೊರೆ ಹೊರುವುದು ಯಾರು?

    ದೇವರನ್ನು ಶ್ರದ್ಧೆಯಿಂದ ಪೂಜಿಸುವ ಅನೇಕ ಜನರಿದ್ದಾರೆ, ಆದರೆ ಅವರ ನಡವಳಿಕೆ ಮತ್ತು ಸಹ-ಮಾನವರೊಂದಿಗಿನ ನಡೆವಳಿಕೆ, ಪಾಪಗಳು ಮತ್ತು ಅಪರಾಧಗಳಿಂದ ತುಂಬಿರುತ್ತದೆ. ಅವರು ತಮ್ಮ ಆರಾಧನೆಯಲ್ಲಿ ಅತ್ಯಂತ ಶ್ರದ್ಧೆ ಮತ್ತು ಬದ್ಧರಾಗಿರುವ ಕಾರಣ ಅವರು ದೇವರಿಂದ ಕ್ಷಮಿಸಲ್ಪಡುವರು ಎಂದು ಭಾವಿಸುತ್ತಾರೆ.

    ಉದಾಹರಣೆಗೆ: ಕೆಲವರು ಕೋಟಿಗಟ್ಟಲೆ ಹಣ, ಚಿನ್ನ ಮತ್ತು ಬೆಳ್ಳಿಯನ್ನು ಪೂಜಾಸ್ಥಳಗಳಿಗೆ ದಾನ ಮಾಡುತ್ತಾರೆ, ತಮ್ಮ ದಾನದಿಂದ ಸಹ-ಮಾನವರಿಗೆ ಮಾಡಿದ ಪಾಪಗಳು ಕ್ಷಮಿಸಲ್ಪಡುತ್ತವೆ ಎಂದು ಭಾವಿಸುತ್ತಾರೆ. ಕೆಲವರು ಮಾನವೀಯತೆಯ ವಿರುದ್ಧ ತಮ್ಮ ಪಾಪಗಳನ್ನು ತೊಳೆದುಕೊಳ್ಳಲು ಪವಿತ್ರ ನದಿಯಲ್ಲಿ ಸ್ನಾನ ಮಾಡುತ್ತಾರೆ. ಕೆಲವರು ತಮ್ಮ ಪಾಪಗಳನ್ನು ಪಾದ್ರಿಯ ಬಳಿ ಒಪ್ಪಿಕೊಂಡು ಕ್ಷಮೆಯನ್ನು ಕೋರುತ್ತಾರೆ, ಇದು ಅವರಿಗೆ ದೇವರಿಂದ ಕ್ಷಮೆ ದೊರಕಿಸುತ್ತದೆ ಎಂದು ಭಾವಿಸುತ್ತಾರೆ.

    ಆದರೆ ಅವರು ಇದರ ಹೊರೆ ಹೊರಬೇಕಿಲ್ಲವೇ? ಖಂಡಿತ ಹೌದು!

    ಮಾನವೀಯತೆಯ ವಿರುದ್ಧ ಪಾಪಗಳನ್ನು ಮಾಡುವ, ಆದರೆ ದೇವರನ್ನು ಭಕ್ತಿಯಿಂದ ಆರಾಧಿಸುವವರ ಬಗ್ಗೆ ಇಸ್ಲಾಂ ಏನು ಹೇಳುತ್ತದೆ?

    ಈ ಪ್ರಶ್ನೆಗೆ ಉತ್ತರವನ್ನು ಅರ್ಥಮಾಡಿಕೊಳ್ಳಲು ಸಹಾಯವಾಗುವಂತೆ ಕೆಲವು ಮೂಲ ಅಂಶಗಳನ್ನು ತಿಳಿದುಕೊಳ್ಳೋಣ.

    ಇಸ್ಲಾಂನಲ್ಲಿ, ದೇವರು ಮನುಷ್ಯರ ಕರ್ತವ್ಯಗಳನ್ನು ಎರಡು ಭಾಗಗಳಾಗಿ ವಿಂಗಡಿಸಿದ್ದಾನೆ ಎಂದು ನಾವು ನಂಬುತ್ತೇವೆ. ಅವುಗಳೆಂದರೆ:

    1. ದೇವರ ಪರ ಕರ್ತವ್ಯಗಳು
    2. ಸಹ-ಮಾನವರ ಪರ ಕರ್ತವ್ಯಗಳು

    ‘ದೇವರ ಪರ ಕರ್ತವ್ಯಗಳು’ ಎಂದರೇನು?

    ಪ್ರಾರ್ಥನೆ, ಉಪವಾಸ, ತೀರ್ಥಯಾತ್ರೆಗೆ ಹೋಗುವುದು ಮುಂತಾದ ಪೂಜಾ ಕಾರ್ಯಗಳು ದೇವರ ಪರ ಕರ್ತವ್ಯಗಳ ಅಡಿಯಲ್ಲಿ ಬರುತ್ತವೆ. ಒಬ್ಬ ವ್ಯಕ್ತಿಯು ಇವುಗಳನ್ನು ಪ್ರಾಮಾಣಿಕತೆ ಮತ್ತು ಭಕ್ತಿಯಿಂದ ಮಾಡಬೇಕೆಂದು ನಿರೀಕ್ಷಿಸಲಾಗಿದೆ.

    ‘ಸಹ-ಮಾನವರ ಬಗೆಗಿನ ಕರ್ತವ್ಯಗಳು’ ಎಂದರೇನು?

    ನಾವು ನಮ್ಮ ಸಹ-ಮಾನವರೊಂದಿಗೆ ಸಾಧ್ಯವಾದಷ್ಟು ಉತ್ತಮ ರೀತಿಯಲ್ಲಿ ವರ್ತಿಸಬೇಕೆಂದು ದೇವರು ನಿರೀಕ್ಷಿಸುತ್ತಾನೆ. ಇದರಲ್ಲಿ ಇತರರೊಂದಿಗೆ ಒಳ್ಳೆಯದಾಗಿ ನಡೆದುಕೊಳ್ಳುವುದು, ಇತರರಿಗೆ ಕರುಣೆ ಮತ್ತು ಕಾಳಜಿಯನ್ನು ತೋರಿಸುವುದು ಮತ್ತು ಇತರರಿಗೆ ಯಾವುದೇ ರೀತಿಯಲ್ಲಿ ಹಾನಿಯನ್ನುಂಟು ಮಾಡದಿರುವುದು, ಇವೆಲ್ಲವೂ ಸೇರಿವೆ.

    ‘ಸಹ ಮಾನವರ ಪರ ಕರ್ತವ್ಯಗಳ’ ಕುರಿತು ಕುರಾನ್

    ದೇವರು ಕುರಾನ್‌ನ ಅನೇಕ ಸೂಕ್ತಿಗಳಲ್ಲಿ ನಮ್ಮ ಸಹಜೀವಿಗಳ ಕಡೆಗೆ ನಮ್ಮ ಕರ್ತವ್ಯಗಳ ಪ್ರಾಮುಖ್ಯತೆಯನ್ನು ತಿಳಿಸಿದ್ದಾನೆ. ಅವುಗಳಲ್ಲಿ ಕೆಲವನ್ನು ನಾವಿಲ್ಲಿ ತಿಳಿಯಬಯುಸುತ್ತೇವೆ.

    ದೇವರನ್ನು ಮಾತ್ರ ಪೂಜಿಸಿ ಮತ್ತು ಅವನನ್ನು ಹೊರತುಪಡಿಸಿ ಯಾರನ್ನೂ ಅಥವಾ ಯಾವುದನ್ನೂ ಪೂಜಿಸಬೇಡಿ. ನಿಮ್ಮ ಹೆತ್ತವರಿಗೆ, ಸಂಬಂಧಿಕರಿಗೆ, ಅನಾಥರಿಗೆ, ನಿರ್ಗತಿಕರಿಗೆ, ಹತ್ತಿರದ ಮತ್ತು ದೂರದ ನೆರೆಹೊರೆಯವರಿಗೆ, ಅಗತ್ಯವಿರುವ ಪ್ರಯಾಣಿಕರಿಗೆ ಮತ್ತು ನಿಮ್ಮ ಸ್ವಾಧೀನದಲ್ಲಿರುವವರಿಗೆ ಒಳ್ಳೆಯವರಾಗಿರಿ.

    ಕುರಾನ್ ಅಧ್ಯಾಯ 4: ಸೂಕ್ತಿ 36

    ಒಳ್ಳೆಯತನವು ಕೇವಲ ನಿಮ್ಮ ಮುಖವನ್ನು ಪೂರ್ವ ಅಥವಾ ಪಶ್ಚಿಮಕ್ಕೆ ತಿರುಗಿಸುವುದರಲ್ಲಿಲ್ಲ. ದೇವರು ಮತ್ತು ಕಡೆಯ ದಿನ, ದೇವದೂತರು, ಧರ್ಮಗ್ರಂಥಗಳು ಮತ್ತು ಪ್ರವಾದಿಗಳಲ್ಲಿ ನಂಬಿಕೆಯುಳ್ಳವರು ನಿಜವಾದ ಒಳ್ಳೆಯವರು; ಅವರು ತಮ್ಮ ಸಂಪತ್ತಿನಲ್ಲಿ ಸ್ವಲ್ಪವನ್ನು, ಅದನ್ನು ಅವರು ಎಷ್ಟೇ ಪ್ರೀತಿಸಿದರೂ, ತಮ್ಮ ಸಂಬಂಧಿಕರಿಗೆ, ಅನಾಥರಿಗೆ, ನಿರ್ಗತಿಕರಿಗೆ, ಪ್ರಯಾಣಿಕರಿಗೆ ಮತ್ತು ಭಿಕ್ಷುಕರಿಗೆ ಮತ್ತು ದಾಸ್ಯದಲ್ಲಿರುವವರನ್ನು ಮುಕ್ತಗೊಳಿಸಲು ನೀಡುತ್ತಾರೆ; ಅವರು ಪ್ರಾರ್ಥನೆಯನ್ನು ನಿಯಮಿತವಾಗಿ ಮುಂದುವರಿಸುವವರು ಮತ್ತು ಬಡವರಿಗೆ ದಾನವನ್ನು ಪಾವತಿಸುವವರು; ಅವರು ಒಪ್ಪಂದಗಳನ್ನು ಮಾಡಿದಾಗ ಅವುಗಳನ್ನು ಗೌರವಿಸುವರು; ದುರದೃಷ್ಟ, ಪ್ರತಿಕೂಲ ಮತ್ತು ಅಪಾಯದ ಸಮಯದಲ್ಲಿಯೂ ಅವರು ತಾಳ್ಮೆಯಿಂದಿರುತ್ತಾರೆ. ಇವರು (ದೇವರ ನಂಬಿಕೆಯಲ್ಲಿ) ಸತ್ಯವಂತರು, ಮತ್ತು ಅವರೇ ದೇವರನ್ನು ಅರಿತವರು.

    ಕುರಾನ್ ಅಧ್ಯಾಯ 2: ಸೂಕ್ತಿ 177

    ಪ್ರವಾದಿ ಮುಹಮ್ಮದ್ ಅವರ ಹೇಳಿಕೆಗಳು

    ಪ್ರವಾದಿ ಮುಹಮ್ಮದ್ ರವರು ಸಹ ನಮ್ಮ ಸಹ-ಮಾನವರ ಪರ ಕರ್ತವ್ಯಗಳ ಮಹತ್ವವನ್ನು ಒತ್ತಿಹೇಳಿದ್ದಾರೆ.

    ಪ್ರವಾದಿ ಮುಹಮ್ಮದ್ ಹೇಳಿದ್ದಾರೆ:

    ಯಾರ ನೆರೆಹೊರೆಯವರು ತನ್ನ ದುಷ್ಕೃತ್ಯಗಳಿಂದ ಸುರಕ್ಷಿತವಾಗಿಲ್ಲವೋ ಅವರು ಸ್ವರ್ಗವನ್ನು ಪ್ರವೇಶಿಸುವುದಿಲ್ಲ.

    ಸಹೀಹ್ ಮುಸ್ಲಿಂ

    ಪ್ರವಾದಿ ಮುಹಮ್ಮದ್ ಹೇಳಿದ್ದಾರೆ:

    ತನಗಾಗಿ ಇಚ್ಛಿಸುವುದನ್ನೇ ಇತರರಿಗೂ ಬಯಸುವವರೆಗೆ ಅವರು ಸತ್ಯವಿಶ್ವಾಸಿಗಳಲ್ಲ

    ಸಹೀಹ್ ಬುಖಾರಿ

    ಪ್ರವಾದಿ ಮುಹಮ್ಮದ್ ಹೇಳಿದ್ದಾರೆ:

    (ದೇವರ) ಸತ್ಯವಿಶ್ವಾಸಿಯೆಂದರೆ, ಯಾರಿಂದ ಜನರ ಜೀವನ ಮತ್ತು ಸಂಪತ್ತು ಸುರಕ್ಷಿತವಾಗಿರುವ ವ್ಯಕ್ತಿ.

    ಸುನನ್ ನಸಾಯಿ

    ನಾವು ಕುರಾನ್ ಮತ್ತು ಪ್ರವಾದಿ ಮುಹಮ್ಮದ್ ಅವರ ಮಾತುಗಳನ್ನು ಓದಿದಾಗ, ನಮ್ಮ ಸಹಮಾನವರ ಬಗ್ಗೆ ನಮಗೆ ಹೆಚ್ಚಿನ ಜವಾಬ್ದಾರಿಯಿದೆ ಎಂದು ತಿಳಿಯುತ್ತದೆ. ಇವು ದೇವರು ವಿಧಿಸಿದ ಕರ್ತವ್ಯಗಳಾದ್ದರಿಂದ, ಇವುಗಳ ಬಗ್ಗೆ ದೇವರಿಗೆ ಉತ್ತರ ನೀಡಬೇಕಾಗಲಿದೆ. ಹೀಗಾಗಿ ಈ ಜವಾಬ್ದಾರಿಯನ್ನು ಸರಿಯಾಗಿ ನಿರ್ವಹಿಸುವುದು ಮರಣಾನಂತರದ ಜೀವನದಲ್ಲಿ ನಮ್ಮ ಯಶಸ್ಸಿಗೆ ಬಹಳ ಮುಖ್ಯ ಎಂಬುದರಲ್ಲಿ ಸಂದೇಹವಿಲ್ಲ.

    ಯಾರು ನಿಜವಾಗಿಯೂ ದಿವಾಳಿ (ಪಾಪರ್)?

    ತೀರ್ಪಿನ ದಿನದಂದು, ದೇವರು ಮನುಷ್ಯನನ್ನು ಎರಡೂ ಕರ್ತವ್ಯಗಳಾದ, ದೇವರ ಪರ ಕರ್ತವ್ಯಗಳು ಮತ್ತು ಸಹ ಮಾನವರ ಪರ ಕರ್ತವ್ಯಗಳ ಬಗ್ಗೆ ಪ್ರಶ್ನಿಸುವನು. ದೇವರ ಪರ ಕರ್ತವ್ಯದಲ್ಲಿನ ನ್ಯೂನತೆಗಳಿಗಾಗಿ ದೇವರು ವ್ಯಕ್ತಿಯನ್ನು ಕ್ಷಮಿಸಬಹುದು, ಆದರೆ ಸಹ ಮಾನವರ ಪರ ಕರ್ತವ್ಯಗಳಲ್ಲಿನ ನ್ಯೂನತೆಗಳಿಗಾಗಿ, ದಬ್ಬಾಳಿಕೆಯ ಮತ್ತು ತುಳಿತಕ್ಕೊಳಗಾದವರ ನಡುವೆ ಲೆಕ್ಕಾಚಾರ ಸರಿತೂಗುವಂತೆ ಹಾಗೂ ಸಂಪೂರ್ಣವಾಗಿ ನ್ಯಾಯ ನೆಲೆಗೊಳ್ಳುವಂತೆ ದೇವರು ಖಚಿತಪಡಿಸುವನು.

    ಪ್ರವಾದಿ ಮುಹಮ್ಮದ್ ಹೇಳಿದರು:

    ದಿವಾಳಿ ಯಾರು ಗೊತ್ತಾ? ಜನರು ಹೇಳಿದರು: ದಿವಾಳಿಯಾದವನು ಹಣ ಅಥವಾ ಸಂಪತ್ತನ್ನು ಹೊಂದಿರದವನು. ಪ್ರವಾದಿ ಉತ್ತರಿಸಿದರು: (ನಿಜವಾದ) ದಿವಾಳಿಯಾದ ವ್ಯಕ್ತಿ ತೀರ್ಪಿನ ದಿನದಂದು ಸಾಕಷ್ಟು ಪ್ರಾರ್ಥನೆ, ಉಪವಾಸ ಮತ್ತು ದಾನಗಳೊಂದಿಗೆ ಬರುವನು ಆದರೆ ಆ ವ್ಯಕ್ತಿಯು ಇತರರನ್ನು ನಿಂದಿಸಿದ ಕಾರಣ, ಇತರರ ಮಾನಹಾನಿ ಮಾಡಿದ ಮತ್ತು ಇತರರ ಸಂಪತ್ತನ್ನು ಕಾನೂನುಬಾಹಿರವಾಗಿ ಜಪಟಾಯಿಸಿದ, ಕೊಲೆ ಮತ್ತು ಇತರರನ್ನು ಹೊಡೆದಿದ್ದ ಕಾರಣ, ಅವನ ಎಲ್ಲಾ ಒಳ್ಳೆಯ ಕಾರ್ಯಗಳನ್ನು (ಅವನ ಕೆಟ್ಟ ಕಾರ್ಯಗಳಿಂದ ಪ್ರಭಾವಿತರಾದ) ಜನರ ಖಾತೆಗಳಿಗೆ ಜಮಾ ಮಾಡಲಾಗುವುದು ಹಾಗೂ ಅವನ ಒಳ್ಳೆಯ ಕಾರ್ಯಗಳು ಸಾಕಾಗದಿದ್ದರೆ ಖಾತೆಗಳ ಲೆಕ್ಕಾಚಾರ ಇತ್ಯರ್ಥಗೊಳಿಸಲು, ನಂತರ (ಅವನ ಖಾತೆಯಲ್ಲಿ) ಪಾಪಗಳನ್ನು ನಮೂದಿಸಲಾಗುವುದು ಮತ್ತು ಅವನು ನರಕ-ಬೆಂಕಿಯಲ್ಲಿ ಎಸೆಯಲ್ಪಡುವನು.

    ಸಹೀಹ್ ಮುಸ್ಲಿಂ

    ಇದರಿಂದ ನಾವೇನು ​​ಕಲಿಯುತ್ತೇವೆ?

    ನಾವು ದೇವರ ಪರ ಕರ್ತವ್ಯಗಳಿಗೆ ಎಷ್ಟು ಪ್ರಾಮುಖ್ಯತೆಯನ್ನು ನೀಡುತ್ತೇವೋ ಅದೇ ರೀತಿ ಸಹ ಮನುಷ್ಯರ ಪರ ನಮ್ಮ ಕರ್ತವ್ಯಗಳಿಗೂ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡಬೇಕು. ನೆನಪಿಡಿ, ಒಬ್ಬ ವ್ಯಕ್ತಿಯು ಅವನು ಅಥವಾ ಅವಳು ಪ್ರಾರ್ಥಿಸಿದ ಮತ್ತು ಉಪವಾಸ ಮಾಡಿದ ಮಾತ್ರಕ್ಕೆ ಸ್ವರ್ಗವನ್ನು ಪ್ರವೇಶಿಸುವುದಿಲ್ಲ. ಒಬ್ಬ ವ್ಯಕ್ತಿಯು ತನ್ನ ಸಹ-ಮಾನವರೊಂದಿಗೆ ಒಳ್ಳೆಯವನಾಗಿರುವುದೂ ಅಷ್ಟೇ ಮುಖ್ಯ.

    ಜನರು ದೈವಿಕ ನ್ಯಾಯದ ಈ ಅಂಶವನ್ನು ಕಾರ್ಯರೂಪಕ್ಕೆ ತಂದಾಗ, ಅದು ನೈತಿಕ, ಪ್ರೀತಿಯ ಮತ್ತು ಕಾಳಜಿಯುಳ್ಳ ಸಮಾಜಕ್ಕೆ ದಾರಿ ಮಾಡಿಕೊಡುತ್ತದೆ.

    ಸಾರಾಂಶ

    1. ತೀರ್ಪಿನ ದಿನದಂದು ನಮ್ಮನ್ನು ಎರಡೂ – ದೇವರ ಪರ ಮತ್ತು ನಮ್ಮ ಸಹ-ಮಾನವರ ಪರ – ಕರ್ತವ್ಯಗಳ ಬಗ್ಗೆ ಪ್ರಶ್ನಿಸಲಾಗುವುದು
    2. ನಮ್ಮ ಸಹ ಮಾನವರೊಂದಿಗೆ ನ್ಯಾಯಯುತವಾಗಿ ಮತ್ತು ಸರಿಯಾಗಿ ನಡೆದುಕೊಳ್ಳುಬೇಕೆಂದು ದೇವರು ನೀಡಿರುವ ಕರ್ತವ್ಯ, ತೀರ್ಪಿನ ದಿನದಂದು ನಾವು ಎಲ್ಲಿ (ಸ್ವರ್ಗ ಅಥವಾ ನರಕ) ಕೊನೆಗೊಳ್ಳುತ್ತೇವೆ ಎಂಬುದರ ಮೇಲೆ ಪ್ರಭಾವ ಬೀರುತ್ತದೆ.
    3. ಜನರು, ಸಹ-ಮಾನವರ ಕಡೆಗೆ ತಮ್ಮ ಕರ್ತವ್ಯಗಳನ್ನು ಅರಿತುಕೊಂಡು ಅದರಂತೆ ವರ್ತಿಸಲು ಪ್ರಾರಂಭಿಸಿದಾಗ, ಸಮಾಜವು ಹೆಚ್ಚು ನೈತಿಕ, ಪ್ರೀತಿಯ ಮತ್ತು ಕಾಳಜಿಯುಳ್ಳ ವಾಸಿಸುವ ಸ್ಥಳವಾಗಲಿದೆ.

    ನಿಮಗೆ ಇಷ್ಟವಾಗ ಬಹುದಾದಂತಹ ಲೇಖನಗಳು

    WHAT OTHERS ARE READING

    Most Popular