ದೇವರು ಯಾರು?
ಈ ಪ್ರಪಂಚವನ್ನು ಮತ್ತು ಅದರಲ್ಲಿರುವ ಎಲ್ಲವನ್ನೂ ಸೃಷ್ಟಿಸಿದ ಸೃಷ್ಟಿಕರ್ತನೇ ದೇವರು.
ಈ ಪ್ರಪಂಚಕ್ಕೆ ನಿಜವಾಗಿಯೂ ಸೃಷ್ಟಿಕರ್ತನಿದ್ದಾನೆಯೇ ಎಂದು ಈಗ ನೋಡೋಣ.
ಈ ಪ್ರಪಂಚವು ಶಾಶ್ವತವಾಗಿ ಅಸ್ತಿತ್ವದಲ್ಲಿದೆಯೇ ಅಥವಾ ಆದಕ್ಕೆ ಆದಿ (ಪ್ರಾರಂಭ) ಇದೆಯೇ?
ಈ ಪ್ರಪಂಚದ ವಯಸ್ಸು 13.8 ಶತಕೋಟಿ ವರ್ಷಗಳು ಎಂದು ವಿಜ್ಞಾನಿಗಳು ಹೇಳುತ್ತಾರೆ. ಪ್ರಪಂಚವು ಶಾಶ್ವತವಾಗಿ ಅಸ್ತಿತ್ವದಲ್ಲಿದ್ದೇ ಆದರೆ, ನಾವು ಪ್ರಪಂಚದ ವಯಸ್ಸನ್ನು ಅಳೆಯಲಾಗುವುದೇ? ನೀವೇ ಯೋಚಿಸಿ, ಖಂಡಿತ ಇಲ್ಲ. ಉದಾಹರಣೆಗೆ, ನಿಮಗೆ ಆದಿಯೇ ಇಲ್ಲದಿದ್ದರೆ, ನಿಮಗೆ ವಯಸ್ಸು ಅನ್ನುವುದು ಇರುವುದೇ? ಪ್ರಪಂಚಕ್ಕೆ ವಯಸ್ಸು ಎನ್ನುವುದಿದೆ ಎಂಬ ಅಂಶವು ಅದಕ್ಕೆ ಆದಿಯೂ ಇದೆ ಎಂದು ತಿಳಿಸುತ್ತದೆ.
ಪ್ರಪಂಚವು ಹೇಗೆ ಪ್ರಾರಂಭವಾಯಿತು ಎಂದು ವಿಜ್ಞಾನವು ನಮಗೆ ಹೇಳಬಹುದೇ?
ನಾಸ್ತಿಕರು ಎಲ್ಲದಕ್ಕೂ “ವೈಜ್ಞಾನಿಕ” ವಿಶ್ಲೇಷಣೆಯನ್ನು ಬಯಸುತ್ತಾರೆ. ಪ್ರಪಂಚ ಹೇಗೆ ಪ್ರಾರಂಭವಾಯಿತು ಎಂದು ವಿಜ್ಞಾನವು ನಮಗೆ ಹೇಳಬಹುದೇ ಎಂದು ತಿಳಿಯಲು, “ವಿಜ್ಞಾನ” ಎಂದರೇನು ಎಂಬುದನ್ನು ನಾವು ಅರ್ಥಮಾಡಿಕೊಳ್ಳಬೇಕು.
ವಿಜ್ಞಾನ ಎಂದರೇನು?
ಪ್ರಸಿದ್ಧ ಆಕ್ಸ್‌ಫರ್ಡ್ ನಿಘಂಟು ವಿಜ್ಞಾನವನ್ನು ಹೀಗೆ ವ್ಯಾಖ್ಯಾನಿಸುತ್ತದೆ:
ನೈಸರ್ಗಿಕ ಮತ್ತು ಭೌತಿಕ ಪ್ರಪಂಚದ ರಚನೆ ಮತ್ತು ನಡವಳಿಕೆಯ ಬಗ್ಗೆ ಜ್ಞಾನ, ನೀವು ಸಾಬೀತುಪಡಿಸಬಹುದಾದ ಸತ್ಯಗಳ ಆಧಾರದ ಮೇಲೆ, ಉದಾಹರಣೆಗೆ ಪ್ರಯೋಗಗಳ ಮೂಲಕ
ಆಕ್ಸ್‌ಫರ್ಡ್ ನಿಘಂಟು
ನೀವೇ ನೋಡುವಂತೆ, ವಿಜ್ಞಾನ ನೈಸರ್ಗಿಕ ಮತ್ತು ಭೌತಿಕ ಪ್ರಪಂಚದ ಅಧ್ಯಯನವಾಗಿದೆ, ಅಂದರೆ, ವಿಜ್ಞಾನವು ಪ್ರಪಂಚದ ವ್ಯಾಪ್ತಿಯೊಳಗೇ ಕಾರ್ಯನಿರ್ವಹಿಸುತ್ತದೆ.
ಪ್ರಪಂಚವು ಹೇಗೆ ಪ್ರಾರಂಭವಾಯಿತು ಎಂಬುದನ್ನು ಕಂಡುಹಿಡಿಯಲು, ಪ್ರಪಂಚ ಪ್ರಾರಂಭವಾಗುವ ಮೊದಲು ಏನಾಯಿತು ಎಂಬುದನ್ನು ನಾವು ತಿಳಿದಿರಬೇಕು, ಅಂದರೆ ಪ್ರಪಂಚದ ಹೊರಗೆ ಏನಾಯಿತು ಎಂದು ತಿಳಿಯಬೇಕು. ಏಕೆಂದರೆ ಪ್ರಪಂಚದ “ಮೂಲ ಕಾರಣ”, ಪ್ರಪಂಚದ ಹೊರಗೇ ಇರಬೇಕು.
ಪ್ರಪಂಚದ ಹೊರಗೆ ಇರುವ “ಕಾರಣ” ವನ್ನು ಕಂಡುಹಿಡಿಯಲು ಪ್ರಪಂಚದೊಳಗೆ ಮಾತ್ರ ಕಾರ್ಯನಿರ್ವಹಿಸಬಲ್ಲ ‘ವಿಜ್ಞಾನ’ವನ್ನು ಬಳಸಲು ಸಾಧ್ಯವೇ? ಖಂಡಿತ ಇಲ್ಲ. “ವಿಜ್ಞಾನ” ಒಂದು ಸಾಧನವಾಗಿ, ಪ್ರಪಂಚದ “ಕಾರಣ” ವನ್ನು ಕಂಡುಹಿಡಿಯಲು ಅಸಮರ್ಥವಾಗಿರುವುದರಿಂದ, ಪ್ರಪಂಚದ ಮೂಲವನ್ನು ತಿಳಿಯಲು ನಾವು ತಾರ್ಕಿಕ ವಿಧಾನವನ್ನು ಅಳವಡಿಸಿಕೊಳ್ಳಬೇಕೆಂದು ನಿಮಗೂ ಸ್ಪಷ್ಟವಾಗಿರಬೇಕು.
ಪ್ರಪಂಚ ಅಸ್ತಿತ್ವಕ್ಕೆ ಬರಲು ಕಾರಣವನ್ನು ಕಂಡುಹಿಡಿಯಲು ತಾರ್ಕಿಕ ವಿಧಾನ
ಪ್ರಪಂಚ ಅಸ್ತಿತ್ವಕ್ಕೆ ಬರಲು ಇರುವ ವಿವಿಧ ಸಾಧ್ಯತೆಗಳನ್ನು ಗುರುತಿಸಲು ತರ್ಕವನ್ನು ಬಳಸೋಣ. ಹಾಗೆ ನೋಡಿದರೆ, ಪ್ರಪಂಚದ ಮೂಲಕ್ಕೆ ಕೇವಲ ಎರಡೇ ತಾರ್ಕಿಕ ಸಾಧ್ಯತೆಗಳಿರಬಹುದು.
- ಪ್ರಪಂಚವು ಸ್ವತಃ ತನ್ನನ್ನು ತಾನೇ ಸೃಷ್ಟಿಸಿಕೊಂಡಿತು
- ‘ಏನೋ ಒಂದು’ ಪ್ರಪಂಚವನ್ನು ಸೃಷ್ಟಿಸಿದೆ.
ಈ ಎರಡೂ ಸಾಧ್ಯತೆಗಳನ್ನು ಪರಿಶೀಲಿಸೋಣ.
ಪ್ರಪಂಚ ಸ್ವತಃ ತನ್ನನ್ನು ತಾನೇ ಸೃಷ್ಟಿಸಕೊಳ್ಳಬಹುದೇ?
ಅಸ್ತಿತ್ವದಲ್ಲಿಲ್ಲದ ವಸ್ತುವು ತನ್ನನ್ನು ತಾನೇ ಸೃಷ್ಟಿಸಕೊಳ್ಳಬಹುದೇ? ಖಂಡಿತ ಇಲ್ಲ. “ನೀವೇ ನಿಮಗೆ ಜನ್ಮ ಕೊಟ್ಟಿರಿ” ಎಂದು ಹೇಳುವುದರಲ್ಲಿ ಅರ್ಥವಿದೆಯೇ? ಇಲ್ಲ. “ಪ್ರಪಂಚವು ತನ್ನನ್ನು ತಾನೇ ಸೃಷ್ಟಿಸಿಕೊಂಡಿದೆ” ಎಂದು ಹೇಳುವುದು, “ನೀವೇ ನಿಮಗೆ ಜನ್ಮ ಕೊಟ್ಟಿರಿ” ಎಂದು ಹೇಳಿದಂತಾಯಿತು. ಆದ್ದರಿಂದ, ಪ್ರಪಂಚವು ಸ್ವತಃ ತನ್ನನ್ನು ತಾನೇ ಸೃಷ್ಟಿಸಿಕೊಳ್ಳಲು ಸಾಧ್ಯವಿಲ್ಲ.
‘ಏನೋ ಒಂದು’ ಪ್ರಪಂಚವನ್ನು ಸೃಷ್ಟಿಸಿದೆ
ನಮಗೀಗ ಒಂದೇ ಒಂದು ಸಾಧ್ಯತೆ ಉಳಿದಿದೆ, ಅದು: ‘ಏನೋ ಒಂದು’ ಪ್ರಪಂಚವನ್ನು ಸೃಷ್ಟಿಸಿರಬೇಕು – ಇದನ್ನೇ ನಾವೆಲ್ಲರು ದೇವರು ಎಂದು ಕರೆಯುತ್ತೇವೆ. ಮನಸ್ಸಿನಲ್ಲಿ ತಕ್ಷಣ ಬರುವ ಪ್ರಶ್ನೆ “ದೇವರನ್ನು ಸೃಷ್ಟಿಸಿದವರು ಯಾರು?”. ಈ ಪ್ರಶ್ನೆಯನ್ನು ಸ್ವಲ್ಪ ಚರ್ಚಿಸೋಣ.
ದೇವರನ್ನು ಸೃಷ್ಟಿಸಿದವರು ಯಾರು?
ಯಾವುದಾದರೊಂದರ ಆರಂಭ ಮತ್ತು ಅಂತ್ಯವನ್ನು ಅಳೆಯಲು ‘ಸಮಯ’ವನ್ನು ಬಳಸುತ್ತೇವೆ. ‘ಸಮಯ’ ಇಲ್ಲದಿದ್ದರೆ ಆದಿ ಅಂತ್ಯ ಇರುವುದಿಲ್ಲ. ಈ ವಿಶ್ವದಲ್ಲಿ ಎಲ್ಲವೂ ಸಮಯದ ಮೇಲೆ ಅವಲಂಬಿತವಾಗಿದೆ; ಆದ್ದರಿಂದ ಎಲ್ಲದಕ್ಕೂ ಆದಿ ಮತ್ತು ಅಂತ್ಯವಿದೆ.
ಪ್ರಪಂಚದಂತೆಯೇ, ‘ಸಮಯ’ ಕೂಡ ಅಸ್ತಿತ್ವಕ್ಕೆ ಬಂದಿದ್ದರಿಂದ, ಅದಕ್ಕೂ ಆರಂಭವೆನ್ನುವುದಿದೆ. ಆದ್ದರಿಂದ, ಪ್ರಪಂಚದಂತೆ, ‘ಸಮಯ’ವೂ ಕೂಡ ‘ಯಾವುದೋ’ ಕಾರಣದಿಂದ ಅಸ್ತಿತ್ವಕ್ಕೆ ಬಂದಿರಬೇಕು ಅಲ್ಲವೇ? ಏಕೆಂದರೆ ‘ಸಮಯ’ ತಾನಾಗಿಯೇ ಅಸ್ತಿತ್ವಕ್ಕೆ ಬರಲು ಸಾಧ್ಯವಿಲ್ಲ. ಹಾಗಾಗಿ ಪ್ರಪಂಚದ ಆರಂಭಕ್ಕೆ ಕಾರಣನಾದ ದೇವರೇ ‘ಸಮಯ’ದ ಆರಂಭಕ್ಕೂ ಕಾರಣ. ಏಕೆಂದರೆ, ದೇವರು ಸಮಯದೊಳಗಿದ್ದರೆ, ಆತನಿಗೆ ಪ್ರಾರಂಭವಿದೆ ಎಂದರ್ಥ. ದೇವರಿಗೆ ಪ್ರಾರಂಭವಿದ್ದರೆ, ದೇವರ ಆರಂಭಕ್ಕೆ ಒಂದು ಕಾರಣವಿರಬೇಕು ಮತ್ತು ಆ ಕಾರಣಕ್ಕೆ ಕಾರಣವಿರಬೇಕು ಹಾಗಾಗಿ ಇದೆಲ್ಲವೂ ‘ಸಮಯ’ದ ಸುಳಿಯಲ್ಲಿ ಸಿಕ್ಕಿಕೊಳ್ಳುತ್ತದೆ. “ಮೂಲ ಕಾರಣಗಳ” ಸರಪಳಿಯು ಕೊನೆಗೊಳ್ಳದಿದ್ದರೆ, ಅದು ಅನಂತವಾಗಿ ಮುಂದುವರಿಯುತ್ತದೆ ಮತ್ತು ಎಂದಿಗೂ ಏನನ್ನೂ ಸೃಷ್ಟಿಸಲಾಗುವುದಿಲ್ಲ. ಇದನ್ನು ಒಂದು ಉದಾಹರಣೆಯ ಮೂಲಕ ಅರ್ಥಮಾಡಿಕೊಳ್ಳೋಣ.
ಒಬ್ಬ “ಎ” ಎಂಬ ಮೀನುಗಾರ, ಮೀನು ಹಿಡಿಯಲು ಇನ್ನೊಬ್ಬ “ಬಿ” ಅವರಿಂದ ಅನುಮತಿ ಪಡೆಯಬೇಕು.
“ಬಿ” ಅವರಿಗೆ “ಸಿ” ಅವರಿಂದ ಅನುಮತಿಯ ಅಗತ್ಯವಿದೆ.
“ಸಿ” ಅವರಿಗೆ “ಡಿ” ಅವರಿಂದ ಅನುಮತಿಯ ಅಗತ್ಯವಿದೆ.
“ಡಿ” ಅವರಿಗೆ “ಈ” ಅವರಿಂದ ಅನುಮತಿಯ ಅಗತ್ಯವಿದೆ.
“ಈ” ಅವರಿಗೆ “ಎಫ್” ಅವರಿಂದ ಅನುಮತಿಯ ಅಗತ್ಯವಿದೆ ಹಾಗೂ
“ಎಫ್” ಅವರಿಗೆ “ಜಿ” ಅವರಿಂದ ಅನುಮತಿಯ ಅಗತ್ಯವಿದೆ.
ಈ ಸರಪಳಿಯು ಅಂತ್ಯವಿಲ್ಲದೆ ಹೀಗೆಯೇ ಮುಂದುವರಿದರೆ, “ಎ” ಅವರು ಎಂದಾದರೂ “ಬಿ” ಅವರಿಂದ ಅಗತ್ಯವಾದ ಅನುಮತಿಯನ್ನು ಪಡೆಯುತ್ತಾರೆಯೇ? ಉತ್ತರ ಖಂಡಿತ ಇಲ್ಲ.
ಈ ಉದಾಹರಣೆಯಲ್ಲಿರುವಂತೆ, ದೇವರು ‘ಸಮಯ’ದೊಳಗಿದ್ದರೆ, ಕಾರಣಗಳ ಸರಪಳಿಯು ಅನಂತವಾಗಿ ಮುಂದುವರಿಯುತ್ತದೆ ಮತ್ತು ಪ್ರಪಂಚವನ್ನು ಸೃಷ್ಟಿಸಲೇ ಸಾಧ್ಯವಿರಲಿಲ್ಲ. ಆದರೆ, ಪ್ರಪಂಚದ ಸೃಷ್ಟಿ ಒಂದು ವಾಸ್ತವ. ಆದ್ದರಿಂದ ಪ್ರಪಂಚದ ಆರಂಭಕ್ಕೆ ಕಾರಣನಾದ ದೇವರು ‘ಸಮಯ’ವನ್ನು ಮೀರಿದವನು ಮತ್ತು ಸಮಯದ ಕಾರಣಕರ್ತನಾಗಿದ್ದಾನೆ.
‘ಸಮಯ’ವನ್ನು ಮೀರಿದ ದೇವರಿಗೆ ಆದಿ ಅಥವಾ ಅಂತ್ಯ ಇರಲಾರದು. ಆದ್ದರಿಂದ, ದೇವರನ್ನು ಯಾರು ಸೃಷ್ಟಿಸಿದರು ಎಂದು ಕೇಳುವುದೇ ಅರ್ಥಹೀನ.
ಕಡೆಯ ಮಾತು
- ಪ್ರಪಂಚದ ವಯಸ್ಸನ್ನು ಅಳೆಯಬಹುದಾದ ಕಾರಣ ಪ್ರಪಂಚಕ್ಕೆ ಆರಂಭ ಎನ್ನುವುದಿದೆ.
- ಪ್ರಪಂಚ ಸ್ವತಃ ತನ್ನನ್ನು ತಾನೇ ಸೃಷ್ಟಿಸಲು ಸಾಧ್ಯವಿಲ್ಲ, ಆದ್ದರಿಂದ ‘ಏನೋ ಒಂದು’ ಪ್ರಪಂಚವನ್ನು ಸೃಷ್ಟಿಸಿದೆ.
- ನಾವು ಈ ‘ಏನೋ ಒಂದನ್ನು’ ದೇವರೆಂದು ಕರೆಯುತ್ತೇವೆ.
- ಪ್ರಪಂಚದಂತೆ ‘ಸಮಯ’ ಕೂಡ ಅಸ್ತಿತ್ವಕ್ಕೆ ಬಂತು.
- ದೇವರು ‘ಸಮಯ’ದ ಪರಿಮಿತಿಯೊಳಗೆ ಇರಲು ಸಾಧ್ಯವಿಲ್ಲ ಏಕೆಂದರೆ ಅದರಿಂದ ಮೂಲ ಕಾರಣಗಳ ಅನಂತ ಸರಪಳಿ ಉದ್ಭವವಾಗುತ್ತದೆ.
- ದೇವರು ‘ಸಮಯ’ವನ್ನು ಮೀರಿದವನು ಮತ್ತು ಆದ್ದರಿಂದ ದೇವರಿಗೆ ಆದಿ ಅಥವಾ ಅಂತ್ಯವಿಲ್ಲ.
- ದೇವರಿಗೆ ಆದಿ ಅಂತ್ಯವಿಲ್ಲವಾದ್ದರಿಂದ ‘ದೇವರನ್ನು ಸೃಷ್ಟಿಸಿದವರು ಯಾರು?’ ಎಂದು ಕೇಳುವುದು ಅರ್ಥಹೀನ.