ಇತ್ತೀಚೆಗೆ, ಧಾರ್ಮಿಕ ಮತ್ತು ರಾಜಕೀಯ ದ್ವೇಷದಲ್ಲಿ ಗಮನಾರ್ಹ ಹೆಚ್ಚಳ ಕಂಡುಬಂದಿದೆ. ಹಲವಾರು ಶಕ್ತಿಗಳು ತಮ್ಮ ಸ್ವಾರ್ಥಕ್ಕಾಗಿ ದ್ವೇಷವನ್ನು ಸಾಮಾನ್ಯಗೊಳಿಸಲು ಪ್ರಯತ್ನಿಸುತ್ತಿವೆ. ದುರದೃಷ್ಟವಶಾತ್, ದ್ವೇಷದ ಹರಡುವಿಕೆಯನ್ನು ಇನ್ನೊಂದು ಕಡೆಯಿಂದಲೂ ದ್ವೇಷದಿಂದ ಎದುರಿಸಲಾಗುತ್ತಿದೆ ಹಾಗೂ ಈ ಮೂಲಕ ಸಮಾಜದಲ್ಲಿ ದ್ವೇಷದ ತೀವ್ರತೆ ಹೆಚ್ಚುತ್ತಿದೆ. ಯುವಕರು ಮತ್ತು ಮಕ್ಕಳು ಸಹ ದ್ವೇಷದ ಈ ಅಪಾಯಕಾರಿ ಬಲೆಯಲ್ಲಿ ಹೀರಲ್ಪಡುವುದನ್ನು ನೋಡುವುದು ದುಃಖಕರವಾಗಿದೆ.
ದ್ವೇಷವನ್ನು ಗಂಭೀರವಾಗಿ ಪರಿಗಣಿಸಬೇಕು ಏಕೆಂದರೆ ಅದು ಸಮಾಜಕ್ಕೆ ಹಾನಿಯನ್ನುಂಟುಮಾಡುವುದಷ್ಟೇ ಅಲ್ಲದೆ, ದೀರ್ಘಕಾಲದವರೆಗೆ ಅದನ್ನು ಹೊತ್ತು ನಡೆಯುವ ವ್ಯಕ್ತಿಗೂ ಗಂಭೀರ ಹಾನಿಯನ್ನುಂಟುಮಾಡುತ್ತದೆ.
ದ್ವೇಷವು ಕ್ಯಾನ್ಸರ್, ಮಧುಮೇಹ, ಅಧಿಕ ರಕ್ತದೊತ್ತಡ, ಕೊಲೆಸ್ಟ್ರಾಲ್‌ಗೆ ಕಾರಣವಾಗಬಹುದು – ಡಾ. ಬಿ ಎಂ ಹೆಗಡೆ
ದ್ವೇಷವು ದೇಹ ಮತ್ತು ಮನಸ್ಸಿನ ಮೇಲೆ ಹಾನಿಕಾರಕ ಪರಿಣಾಮಗಳನ್ನು ಬೀರುತ್ತದೆ
ದ್ವೇಷವು ನಮ್ಮನ್ನು ಶಾರೀರಿಕವಾಗಿ ಮತ್ತು ಮಾನಸಿಕವಾಗಿ ಹೇಗೆ ಪ್ರಭಾವ ಬೀರುತ್ತದೆ ಎಂಬುದರ ಕುರಿತು ಹಲವಾರು ಅಧ್ಯಯನಗಳನ್ನು ನಡೆಸಲಾಗಿದೆ. ಈ ಎಲ್ಲಾ ಅಧ್ಯಯನಗಳು ತೋರುವುದೇನೆಂದರೆ ದ್ವೇಷವು ನಮ್ಮ ದೇಹದ ಯಾವುದೇ ಭಾಗವನ್ನು ಬಾಧಿಸುವ ಮೊದಲು, ಅದು ಮೊದಲು ನಮ್ಮ ಮೆದುಳಿನ ಮೇಲೆ ಪರಿಣಾಮ ಬೀರುತ್ತದೆ. ಮೆದುಳು ನಮ್ಮ ಆಂತರಿಕ ಎಚ್ಚರಿಕೆಯ ವ್ಯವಸ್ಥೆಯಾಗಿದೆ.
ನೀವು ಯಾರನ್ನಾದರೂ ದ್ವೇಷಿಸಿದಾಗ, ಮೆದುಳು ಅದನ್ನು ಬೆದರಿಕೆ ಎಂದು ತಿಳಿಯುತ್ತದೆ ಮತ್ತು ನಮ್ಮ ಮೆದುಳಿನಲ್ಲಿರುವ ಲಕ್ಷಾಂತರ ನರ ನಾರುಗಳು ದೇಹದಾದ್ಯಂತ ರಾಸಾಯನಿಕಗಳನ್ನು ಪ್ರತಿ ಅಂಗಕ್ಕೂ ಬಿಡುಗಡೆ ಮಾಡುತ್ತವೆ. ಬಿಡುಗಡೆಯಾದ ರಾಸಾಯನಿಕಗಳು ಕಾರ್ಟಿಸೋಲ್ (ಒತ್ತಡದ ಹಾರ್ಮೋನ್), ಅಡ್ರಿನಾಲಿನ್ ಮತ್ತು ನೊರಾಡ್ರಿನಾಲಿನ್. ದ್ವೇಷ ಅನುಭವಿಸಿದಾಗ ಆಕ್ರಮಣಕಾರಿಯಾಗಿ – ರಕ್ಷಿಸಲು ಅಥವಾ ದಾಳಿ ಮಾಡಲು – ವರ್ತಿಸಲು, ಇದು ನಮ್ಮನ್ನು ಸಿದ್ಧಪಡಿಸುತ್ತದೆ.
ದ್ವೇಷವು ನಿಯಮಿತವಾಗಿ ಮುಂದುವರಿದಾಗ, ರಾಸಾಯನಿಕಗಳು ಹೆಚ್ಚಾಗಿ ಬಿಡುಗಡೆಯಾಗುತ್ತವೆ. ಇದು ಮೂತ್ರಜನಕಾಂಗವನ್ನು (adrenals) ಕಡಿಮೆ ಮಾಡುತ್ತದೆ ಮತ್ತು ತೂಕ ಹೆಚ್ಚಾಗುವುದು, ನಿದ್ರಾಹೀನತೆ, ಆತಂಕ, ಖಿನ್ನತೆ ಮತ್ತು ದೀರ್ಘಕಾಲದ ಅನಾರೋಗ್ಯಕ್ಕೆ ಕಾರಣವಾಗುತ್ತದೆ. ಸಮಯದೊಂದಿಗೆ, ಬಿಡುಗಡೆಯಾದ ರಾಸಾಯನಿಕಗಳ ಪ್ರತಿಕ್ರಿಯೆಯು ನರ, ಪ್ರತಿರಕ್ಷಣಾ ಮತ್ತು ಅಂತಃಸ್ರಾವಕ (endocrine) ವ್ಯವಸ್ಥೆಯ ಮೇಲೆ ಪರಿಣಾಮ ಬೀರುವುದರೊಂದಿಗೆ, ಮಧುಮೇಹ, ಅಧಿಕ ರಕ್ತದೊತ್ತಡ, ಕ್ಯಾನ್ಸರ್ ಮತ್ತು ಸ್ವಯಂ ನಿರೋಧಕ ಅಸ್ವಸ್ಥತೆಗಳಂತಹ ವಿವಿಧ ಕಾಯಿಲೆಗಳಿಗೆ ಕಾರಣವಾಗುತ್ತದೆ.
ದ್ವೇಷ ಮತ್ತು ಮಾನವ ಮನೋವಿಜ್ಞಾನ
ದ್ವೇಷ ಹೇಗೆಂದರೆ ದ್ವೇಷ ತುಂಬಿರುವ ವ್ಯಕ್ತಿಯನ್ನು ಅವನು / ಅವಳು ದ್ವೇಷಿಸುವ ಕಡೆಗೆ ಆಕರ್ಷಿಸುತ್ತದೆ. ಇದು ದ್ವೇಷವನ್ನು ಹೆಚ್ಚಿಸಲು ಕಾರಣವಾಗುತ್ತದೆ. ಇದು ನಿಮ್ಮ ದೇಹ ಮತ್ತು ಮನಸ್ಸಿಗೆ ಹೆಚ್ಚು ಹಾನಿಯನ್ನುಂಟುಮಾಡುವ ಕೆಟ್ಟ ಚಕ್ರವಾಗಿ ಪರಿಣಮಿಸುತ್ತದೆ. ಪ್ರಜ್ಞಾಪೂರ್ವಕವಾಗಿ ಅದನ್ನು ನಿಲ್ಲಿಸಲು ಆ ವ್ಯಕ್ತಿಯು ತಾನೇ ಮಧ್ಯಪ್ರವೇಶಿಸಲು ನಿರ್ಧರಿಸುವವರೆಗೂ ಈ ಚಕ್ರವನ್ನು ಮುರಿಯಲಾಗುವುದಿಲ್ಲ.
ದ್ವೇಷದಿಂದ ನಿಮ್ಮನ್ನು ರಕ್ಷಿಸಿಕೊಳ್ಳಿ
- “ದ್ವೇಷ” ದ ಬಗ್ಗೆ ಜಾಗೃತರಾಗಿರಿ ಮತ್ತು ನೀವು ಅದನ್ನು ಗುರುತಿಸಿದ ತಕ್ಷಣ ಅದನ್ನು ಒಪ್ಪಿಕೊಳ್ಳಿ.
- ದ್ವೇಷದ ಪ್ರಚೋದಕಗಳನ್ನು ಗುರುತಿಸಿ. ಉದಾಹರಣೆ: ತಪ್ಪು ತಿಳುವಳಿಕೆ, ಪ್ರಚಾರ, ಪಕ್ಷಪಾತ, ಸ್ಟೀರಿಯೊಟೈಪ್‌ಗಳು ಇತ್ಯಾದಿ.
- ಪ್ರಚೋದಕಗಳನ್ನು ಪರಿಹರಿಸಲು ಪ್ರಯತ್ನಿಸಿ. ಉದಾಹರಣೆ: ತಪ್ಪು ತಿಳುವಳಿಕೆಯನ್ನು ತೆಗೆದುಹಾಕಿ, ಅದು ಪ್ರಚಾರವಾಗಿದೆಯೇ ಎಂದು ಪರಿಶೀಲಿಸಿಕೊಳ್ಳಿ, ನಿಮ್ಮ ಪಕ್ಷಪಾತ ಮತ್ತು ಸ್ಟೀರಿಯೊಟೈಪ್‌ಗಳನ್ನು ಸರಿಪಡಿಸಿಕೊಳ್ಳಿ.
- ಸಕಾರಾತ್ಮಕತೆಯ ಮೇಲೆ ಕೇಂದ್ರೀಕರಿಸಿ (ಪ್ರತಿಯೊಂದು ಪರಿಸ್ಥಿತಿ, ಪ್ರತಿ ವ್ಯಕ್ತಿ, ಪ್ರತಿ ಸಮುದಾಯವೂ ಧನಾತ್ಮಕ (positive) ಬದಿಯನ್ನು ಹೊಂದಿರುತ್ತದೆ)
- ನಿಮ್ಮ ಮನಸ್ಸನ್ನು ಬೇರೆಯೆಡೆ ಕೇಂದ್ರೀಕರಿಸಿ ಮತ್ತು ಅದನ್ನು ರಚನಾತ್ಮಕ ಅಭ್ಯಾಸಗಳಿಂದ ತುಂಬಿಸಿ: ಓದುವುದು, ವ್ಯಾಯಾಮ, ದಾನ ಇತ್ಯಾದಿ.
- ಮನಸ್ಸಿಗೆ ವಿಶ್ರಾಂತಿ ತರುವ ತಂತ್ರಗಳು ಮತ್ತು ಉಸಿರಾಟದ ವ್ಯಾಯಾಮಗಳನ್ನು ಪ್ರಯತ್ನಿಸಿ